ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ‘ದಯೆ ನಮ್ಮೆಲ್ಲರ ನಿತ್ಯ ಉಪಾಸನೆಯಾಗಲಿ’

30ನೇ ರಾಘವೇಂದ್ರ ಸಪ್ತಾಹ ಮಹೋತ್ಸವ, ಹರಿದಾಸ ಹಬ್ಬಕ್ಕೆ ವಿದ್ಯುಕ್ತ ಚಾಲನೆ
Last Updated 22 ಫೆಬ್ರುವರಿ 2023, 5:48 IST
ಅಕ್ಷರ ಗಾತ್ರ

ಚಿತ್ರದುರ್ಗ: ದೇವರು ಸರ್ವಾಂತರ್ಯಾಮಿಯಾಗಿದ್ದು ಎಲ್ಲರೊಳಗೂ ಆತ ಇರುತ್ತಾನೆ. ಆದರೆ ದಯಾನಿ, ಕಾರುಣ್ಯದ ಭಗವಂತನ ಭಾವದಲ್ಲಿ ನಾವು ನೆಲೆಸಿರಬೇಕು ಎಂದು ಉಡುಪಿಯ ಪಲಿಮಾರು ಮಠದ ಪೀಠಾಧಿಪತಿ ಡಾ.ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಹೇಳಿದರು.

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಂತ್ರಾಲಯ ರಾಘವೇಂದ್ರ ಸಪ್ತಾಹ ಕಾರ್ಯಾಚರಣ ಸಮಿತಿ ಹಾಗೂ ಚಿತ್ರದುರ್ಗದ ಹರಿವಾಯುಗುರು ಸೇವಾ ಟ್ರಸ್ಟ್‌ನಿಂದ ಆಯೋಜಿಸಿರುವ 30ನೇ ರಾಘವೇಂದ್ರ ಸಪ್ತಾಹ ಮಹೋತ್ಸವ ಹಾಗೂ ಹರಿದಾಸ ಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಿ ‘ವೆಂಕಟೇಶ ಸ್ತುತಿ ರತ್ನಮಾಲ’ ಪ್ರವಚನ ನೀಡಿದರು.

‘ನಾವು ಮಾಡುವ ಕೈಂಕರ್ಯ, ನಮ್ಮ ಅರ್ಪಣೆ, ಪೂಜೆ, ಸೇವೆಯನ್ನು ಭಗವಂತ ಮನಃಪೂರ್ವಕವಾಗಿ ಸ್ವೀಕರಿಸುತ್ತಾನೆ ಎಂದರೆ ಅದು ಬಹುದೊಡ್ಡ ಸಂಗತಿ. ದೇವರ ಅನಂತ ಕಲ್ಯಾಣ ಗುಣಗಳಲ್ಲಿ ದಯೆ ಎಂಬ ಗುಣವನ್ನು ನಿತ್ಯ ಉಪಾಸನೆ ಮಾಡಬೇಕು’ ಎಂದು ತಿಳಿಸಿದರು.

‘ಅಲಂಕಾರ ದೇವರ ಪೂಜೆಯಲ್ಲಿ ಅವಿಭಾಜ್ಯವಾದದ್ದು. ವಿಷ್ಣು ಅಲಂಕಾರ ಪ್ರಿಯ. ಭಗವಂತನು ಪ್ರೀತನಾಗುವ ಬಗೆ ಹೇಗೆ ಎಂದರೆ ಅದು ಎಲ್ಲಾ ಪ್ರಾಣಿಗಳ ಒಳಗೂ ದೇವರಿದ್ದಾನೆ ಎನ್ನುವ ಅನುಸಂದಾನ ಬಹಳ ಮುಖ್ಯವಾದ ಮಾತು. ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ದಯೆ ತೋರಬೇಕು’ ಎಂದು ಹೇಳಿದರು.

‘ಗುರುಶ್ರೀ ವಿಠ್ಠಲ ದಾಸರ ‘ವೆಂಕಟೇಶ ಸ್ತುತಿ ರತ್ನ ಮಾಲ’ ಕೃತಿಯು ದೇವರಿಗೆ ಇಷ್ಟವಾದ ವಿಶಿಷ್ಟ ಮಾಲಿಕೆ. ಪಂಡಿತರು ಮಾತ್ರವಲ್ಲದೆ ಜನರ ಬಾಯಲ್ಲಿ ಕುಣಿದಾಡುವ ಸ್ತುತಿಯಾಗಿದೆ. ಎಲ್ಲ ವರ್ಗದವರು ಈ ಸೇವೆಯಲ್ಲಿ ಭಾಗವಹಿಸಬಹುದು’ ಎಂದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್‌ ಮಾತನಾಡಿ, ‘ಉದ್ದೇಶ ಉತ್ತಮವಾಗಿದ್ದರೆ ಎಲ್ಲದಕ್ಕೂ ಒಳಿತಾಗುತ್ತದೆ ಎಂಬುದಕ್ಕೆ ಬ್ರಾಹ್ಮಣ ಸಂಘ ಶತಮಾನೋತ್ಸವ ಆಚರಿಸಿರುವುದೇ ಸಾಕ್ಷಿ. ಸಂಘಟನೆ ಶಕ್ತಿಯಿಂದ ಸಂಘ ಇಷ್ಟು ಮಟ್ಟಕ್ಕೆ ಬೆಳೆದಿದೆ’ ಎಂದು ತಿಳಿಸಿದರು.

‘ಯಾರು ಏನೂ ತಂದಿಲ್ಲ. ಯಾರು ಯಾವುದನ್ನು ತೆಗೆದುಕೊಂಡು ಹೋಗುವುದಿಲ್ಲ. ಧಾರ್ಮಿಕ ಕಾರ್ಯದೊಂದಿಗೆ ಎಲ್ಲರೂ ಕುಟುಂಬದಂತೆ ಸಾಗಬೇಕು. ಗುರುಗಳಿಗೆ ಯಾವುದೇ ಬೇದಭಾವವಿಲ್ಲ. ಆದರೆ ಸಂಕುಚಿತ ಜನರಲ್ಲಿ ಮಾತ್ರ ಆ ಭಾವನೆ ಇರುತ್ತದೆ. ಇದರಿಂದ ಹೊರಬಂದು ಎಲ್ಲರ ಜತೆ ಒಂದಾಗಿ ಸಾಗಬೇಕು’ ಎಂದರು.

ಇದೇ ವೇಳೆ ಮೈಸೂರಿನ ವಿದ್ವಾನ್‌ ಸಿ.ಎಚ್‌.ಶ್ರೀನಿವಾಸಮೂರ್ತಿ ಆಚಾರ್ಯ, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಹಿರಿಯ ಪ್ರಾಧ್ಯಾಪಕ ಸಿ.ಎಚ್‌.ಬದರೀನಾಥ ಆಚಾರ್ಯ ಹಾಗೂ ಅಧ್ಯಾಪಕ ವಿಷ್ಣುತೀರ್ಥಾಚಾರ್ಯ ಕಶ್ಯಪ ಅವರಿಗೆ ಸಾಧನ ಸನ್ಮಾನ ಮಾಡಲಾಯಿತು.

ಹಬ್ಬದ ಅಂಗವಾಗಿ ಮುಂಜಾನೆಯಿಂದ ಅಷ್ಟೋತ್ತರ ಪಾರಾಯಣ, ಪ್ರವಚನ, ಅನುಗ್ರಹ ಸಂದೇಶ, ಪಾದಪೂಜೆ, ಕನಕಾಭಿಷೇಕ, ಪುಷ್ಪಾರ್ಚನೆ, ಮಹಾಪೂಜೆ, ಸಾಮೂಹಿಕ ಪಾರಾಯಣ, ಭಜನೆ, ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಮಂತ್ರಾಲಯದ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್‌ ನಿರ್ದೇಶಕ ಕೆ.ಅಪ್ಪಣ್ಣಾಚಾರ್ಯರು ‘ರಾಘವೇಂದ್ರ ವಿಜಯ’ ಪ್ರವಚನ ನೀಡಿದರು. ಹಿರಿಯೂರಿನ ಶ್ರೀಕರ ಭಜನಾ ಮಂಡಳಿ ಹಾಗೂ ಚಿತ್ರದುರ್ಗ ಬ್ರಹ್ಮಚೈತನ್ಯ ಭಜನಾ ಮಂಡಳಿಯವರು ಭಜನೆ ಹಾಗೂ ಧಾರವಾಡದ ವಿದ್ವಾನ್‌ ಬಳ್ಳಾರಿ ಹರ್ಷ ಆಚಾರ್ಯ ಅವರು ದಾಸವಾಣಿ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಗುರುರಾಜ ಸೇವಾ ಸಂಘದ ಅಧ್ಯಕ್ಷ ವೇದವ್ಯಾಸಚಾರ್ಯ, ಹರಿವಾಯುಗುರು ಸೇವಾ ಟ್ರಸ್ಟ್‌ ಅಧ್ಯಕ್ಷ ಟಿ.ಕೆ.ನಾಗರಾಜರಾವ್, ಉಪಾಧ್ಯಕ್ಷರಾದ ಕೆ.ಗುರುರಾಜ್‌, ಪಿ.ವಾಸುದೇವಮೂರ್ತಿ, ಸಂಚಾಲಕ ಟಿ.ಎಸ್‌.ಗೋಪಾಲಕೃಷ್ಣ, ಕಾರ್ಯದರ್ಶಿ ಜೋಯಿಸ್‌ ಹುಲಿರಾಜಾಚಾರ್, ನಗರಸಭೆ ಸದಸ್ಯ ಜಿ.ಹರೀಶ್, ಕೆ‍ಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಜಿ.ಎಸ್‌.ಮಂಜುನಾಥ್‌ ಇದ್ದರು.

ಹರಿದಾಸ ಹಬ್ಬದಲ್ಲಿಂದು

ಬೆಳಿಗ್ಗೆ 9.45 ರಿಂದ 11 ರವರೆಗೆ ರಾಘವೇಂದ್ರ ಸ್ವಾಮಿಗಳ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವ. 11 ರಿಂದ ಅನುಗ್ರಹ ಸಂದೇಶ, ಮಧ್ಯಾಹ್ನ 3 ರಿಂದ 4 ರವರೆಗೆ ಕಿಶೋರ ಪ್ರತಿಭಾ ಮಕ್ಕಳ ಕಾರ್ಯಕ್ರಮ. ಸಂಜೆ 5.30 ರಿಂದ ಶ್ರೀನಿವಾಸ ದೇವರ, ರಾಘವೇಂದ್ರ ಸ್ವಾಮಿ ಹಾಗೂ ದಾಸವರೇಣ್ಯರ ಭಾವಚಿತ್ರದೊಂದಿಗೆ ಆನೆಬಾಗಿಲಿನಿಂದ ಗಾಯತ್ರಿ ಕಲ್ಯಾಣ ಮಂಟಪದವರೆಗೆ ಭವ್ಯ ಶೋಭ ಯಾತ್ರೆ. ಸಂಜೆ 7ಕ್ಕೆ ಪಟ್ಟಾಭಿಷಿಕ್ತ ಗುರುರಾಜರಿಗೆ ಕೌತಳಂ ಕೆ.ಗುರುರಾಜ ಅವರಿಂದ ಗುರುವಂದನ ಕಾರ್ಯಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT