ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಜೀವವೈವಿಧ್ಯದ ತಾಣ, ಸಸ್ಯ ಸಂಪತ್ತಿನ ಕಣಜ 'ಉತ್ತರೆ ಗುಡ್ಡ'

Last Updated 4 ಡಿಸೆಂಬರ್ 2021, 4:51 IST
ಅಕ್ಷರ ಗಾತ್ರ

ಹಿರಿಯೂರು: ಆಗುಂಬೆಯಂತೆ ಪ್ರಕೃತಿ ಸೊಬಗು ಹೊದ್ದ ತಾಣ. ಪ್ರವಾಸಿಗರನ್ನು ಕರೆವ ಬೆಟ್ಟಗಳು. ಸೂರ್ಯನನ್ನೇ ಸೆರೆ ಹಿಡಿದು ನಿಲ್ಲಿಸಿರುವ ಮೋಡಗಳು..

ಇದುತಾಲ್ಲೂಕಿನ ವಾಣಿವಿಲಾಸ ಜಲಾಶಯದುದ್ದಕ್ಕೂ ಹೊಂದಿಕೊಂಡಿರುವ ಉತ್ತರೆ (ಉತ್ತಾರೆ) ಗುಡ್ಡದ ಸೊಬಗು.

ವಾಣಿವಿಲಾಸ ಅಣೆಕಟ್ಟೆಗೆ ಹೋಗುವ ಮೊದಲು ಕಣಿವೆ ಮಾರಮ್ಮ ದೇವಿಯ ದರ್ಶನ ಮಾಡಿ, ಎಡಕ್ಕೆ ತಿರುಗಿದರೆ ಆರಂಭವಾಗುವ ಗುಡ್ಡದ ಸಾಲು, ಒಳ ಹೋದಂತೆ ಪ್ರಕೃತಿ ಪ್ರಿಯರ ಕುತೂಹಲವನ್ನು ನೂರ್ಮಡಿಗೊಳಿಸುತ್ತದೆ. ಅಣೆಕಟ್ಟೆಯ ಎಡಭಾಗದ ಗುಡ್ಡದ ಕೆಳಗೆ ಕತ್ತೆಹೊಳೆ ಅರಣ್ಯ ಪ್ರದೇಶವಿದೆ. ಹಿರಿಯೂರು–ಚಿತ್ರದುರ್ಗ–ಚಳ್ಳಕೆರೆ–ಡಿಆರ್‌ಡಿಒಗೆ ಕುಡಿಯುವ ನೀರು ಸರಬರಾಜು ಮಾಡುವ ಸ್ಥಾವರಕ್ಕೆ ಹೋಗುವ ಮಾರ್ಗದ ಪಶ್ಚಿಮಘಟ್ಟಗಳ ಬೆಟ್ಟದ ಸಾಲಿನಲ್ಲಿ ಸಾಗಿದರೆ ‘ಉತ್ತರೆ ಗುಡ್ಡ’ ಕಾಣುತ್ತದೆ.

ಗುಡ್ಡದ ಸಾಲಿನಲ್ಲಿ ಹೊರಳುತ್ತ ಹೋದಂತೆ ಎಡಭಾಗದ ಇಳಿಜಾರಿನಲ್ಲಿ ಹಸಿರಿನ ಕಣಿವೆ, ಬಲಭಾಗದಲ್ಲಿ ವಾಣಿವಿಲಾಸ ಜಲಾಶಯದ ಹಿನ್ನೀರಿನ ದರ್ಶನ ಅವರ್ಣನೀಯ ಆನಂದ ತರುತ್ತದೆ.

ಅಪರೂಪದ ಸಸ್ಯ–ವನ್ಯಜೀವಿ ಸಂಪತ್ತು: ‘ಹಿರಿಯೂರು ಅರಣ್ಯ ವಲಯವು ಮಾರಿಕಣಿವೆ ಮೀಸಲು ಅರಣ್ಯ ಹೊಂದಿದ್ದು, ಜೋಗಿಮಟ್ಟಿ–ಬುಕ್ಕಾಪಟ್ಟಣ ವನ್ಯಧಾಮಗಳ ಮಧ್ಯದಲ್ಲಿದೆ. ವಿಶೇಷವೆಂದರೆ ಭದ್ರಾಹುಲಿ ಅರಣ್ಯ ಸಂರಕ್ಷಿತ ಪ್ರದೇಶ ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ವನ್ಯಧಾಮದಿಂದ ಬರುವ ಆನೆ ಕಾರಿಡಾರ್ ಸಹ ಆಗಿದ್ದು, 27,334 ಎಕರೆ ವಿಸ್ತೀರ್ಣ ಹೊಂದಿದೆ. ಜೀವ ವೈವಿಧ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಉದ್ದೇಶದಿಂದ 1905 ರಲ್ಲಿಯೇ ಇದನ್ನು ಮೀಸಲು ಅರಣ್ಯವೆಂದು ಘೋಷಿಸಲಾಗಿದೆ.

‘ಕೊಂಡಕುರಿ, ಕೃಷ್ಣಮೃಗ, ಚಿರತೆ, ತೋಳ, ಕತ್ತೆ ಕಿರುಬ, ನರಿ, ಚಿಪ್ಪುಹಂದಿ, ಮುಳ್ಳುಹಂದಿ, ನಕ್ಷತ್ರ ಆಮೆ, ನೀರುನಾಯಿ, ನಾಗರಹಾವು, ದಾಸರಹಾವು ಒಳಗೊಂಡಂತೆ 19 ಪ್ರಭೇದದ ಪ್ರಾಣಿಗಳು, ಮೈನಾ, ಕೋಗಿಲೆ, ಹದ್ದು ಒಳಗೊಂಡು 35 ಜಾತಿಯ ಪಕ್ಷಿಗಳು, ಉದಯ, ದಿಂಡಲ್, ಕಮರಾ, ನೆಲ್ಲಿ, ಸೋಮೆ, ಹೊನ್ನೆ, ಬೀಟೆ, ಮತ್ತಿ, ಬೂರುಗ, ಬಿದಿರು, ಕಾಚು, ಕಕ್ಕೆ, ನೇರಳೆ, ಆಲ, ಅರಳಿ, ಬಸರಿ, ಶನೇಶ್ವರ ವೃಕ್ಷ (ಯಾರೂ ಕಡಿಯದ ಮರ), ಈಚಲು, ಬೇವು, ಮುತ್ತುಗ, ಕರಿಜಾಲಿ, ಧೂಪ ಸೇರಿ 120 ಜಾತಿಯ ಗಿಡ–ಮರಗಳು ಇಲ್ಲಿವೆ’ ಎನ್ನುತ್ತಾರೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ.

ವನ್ಯಜೀವಿ ಧಾಮ ಘೋಷಣೆ ಶಿಫಾರಸು: ‘ಉತ್ತರೆಗುಡ್ಡ ಅರಣ್ಯ ಪ್ರದೇಶ ಸಮುದ್ರಮಟ್ಟದಿಂದ 3677 ಅಡಿ ಎತ್ತರದಲ್ಲಿದ್ದು, (ಜೋಗಿಮಟ್ಟಿ 3641ಅಡಿ) ವಾಣಿವಿಲಾಸ ಜಲಾಶಯ, ಉಡುವಳ್ಳಿ ಕೆರೆ, ಗುಡ್ಡದನೇರಳೆ ಕೆರೆ, ಕಂಚಿಪುರದಕೆರೆ, ಕಟ್ಟೆಹೊಳೆ (ಕತ್ತೆಹೊಳೆ) ಕೆರೆಗಳ ಅಚ್ಚುಕಟ್ಟು ಹೊಂದಿದೆ. ಪುರಾತನ ಧಾರ್ಮಿಕ ಸ್ಥಳಗಳಾದ ರಾಮೇಶ್ವರದೇವರ ವಜ್ರ, ಸಿದ್ದಪ್ಪನ ವಜ್ರ, ಗಿಳಿವಜ್ರ, ತೀರ್ಥರಾಮೇಶ್ವರ ವಜ್ರಗಳಿವೆ. ಇದಕ್ಕೆ ಹೊಂದಿಕೊಂಡು ಕುದುರೆ ಕಣಿವೆ ಮೀಸಲು ಅರಣ್ಯ, ಲಕ್ಕಿಹಳ್ಳಿ ಮೀಸಲು ಅರಣ್ಯ ಹಾಗೂ ಸುವರ್ಣಮುಖಿ ಮೀಸಲು ಅರಣ್ಯಗಳಿದ್ದು, ಇವೆಲ್ಲವನ್ನು ಒಗ್ಗೂಡಿಸಿ ‘ಉತ್ತಾರೆಗುಡ್ಡ ವನ್ಯಜೀವಿ ಧಾಮ’ ಎಂದು ಘೋಷಿಸಿದಲ್ಲಿ ಅಪರೂಪದ ವನ್ಯಸಂಪತ್ತನ್ನು ರಕ್ಷಿಸಿದಂತೆ ಆಗುತ್ತದೆ. ಈ ನಿಟ್ಟಿನಲ್ಲಿ ಹಿರಿಯೂರು ತಾಲ್ಲೂಕಿನ ಗೌಡನಹಳ್ಳಿಯವರಾದ ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ಲಿಂಗರಾಜು ನಡೆಸಿರುವ ಪ್ರಯತ್ನ ಅವಿಸ್ಮರಣೀಯ’ ಎಂದು ನೆನೆಯುತ್ತಾರೆ ಸ್ಥಳೀಯರು.

ಸಾಲು ಸಾಲು ಪವನ ವಿದ್ಯುತ್ ಯಂತ್ರಗಳು: ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕಿನ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಪವನ ವಿದ್ಯುತ್ ಯಂತ್ರಗಳನ್ನು ಅಳವಡಿಸಲಾಗಿದೆ. ಹಿರಿಯೂರು ತಾಲ್ಲೂಕಿನ ಹಾಲುಮಾದೇನಹಳ್ಳಿ, ಕತ್ತೆಹೊಳೆ, ಗುಡಿಹಳ್ಳಿ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಗಾಳಿಯಂತ್ರಗಳಿವೆ. ಯಂತ್ರಗಳನ್ನು ಅಳವಡಿಸಲು ಗುಡ್ಡವನ್ನು ಕಡಿದು ರಸ್ತೆ ಮಾಡಿರುವ ಕಾರಣ ಅಪರೂಪದ ಮರಗಳು ಬಲಿಯಾಗಿವೆ. ರಸ್ತೆ ನಿರ್ಮಾಣಕ್ಕೆ ತೆಗೆದಿರುವ ಮಣ್ಣು ಜಲಾಶಯ ಸೇರುವ ಅಪಾಯವಿದೆ. ಸರ್ಕಾರ ಯಾವುದೇ ಕಾರಣಕ್ಕೂ ಪವನ ಯಂತ್ರಗಳ ಪರವಾನಗಿ ನವೀಕರಣ ಮಾಡಬಾರದು ಎಂದುವಿವಿ ಪುರ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ದಿ. ಎ. ಉಮೇಶ್ ಸುದೀರ್ಘ ಹೋರಾಟ ನಡೆಸಿದ್ದರು. ಕೆಲ ಯಂತ್ರಗಳ ಪರವಾನಗಿ 2018ಕ್ಕೆ ಮುಗಿದಿದ್ದು, ಪರವಾನಗಿ ನವೀಕರಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂಬ ಮಾಹಿತಿ ಇದೆ. ಅಪರೂಪದ ವನ್ಯ ಸಂಪತ್ತಿನ ಉಳಿವಿಗಾಗಿ ಸರ್ಕಾರ ಪರವಾನಗಿ ನವೀಕರಿಸಬಾರದು ಎಂದು ಒತ್ತಾಯಿಸುತ್ತಾರೆ ಈ ಬಗ್ಗೆ ಹೋರಾಡುತ್ತಿರುವ ವಾಣಿ ಉಮೇಶ್‌.

‘ಮೂರು ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆಯ ನೀರು ವಾಣಿವಿಲಾಸ ಜಲಾಶಯಕ್ಕೆ ಬರುತ್ತಿದ್ದು, ಈ ಭಾಗದ ರೈತರು ಹೊಸದಾಗಿ ಅಡಿಕೆ, ತೆಂಗು ಬೆಳೆಯಲು ತೋರಿಸುವ ಆಸಕ್ತಿಯನ್ನು ಸಿರಿಧಾನ್ಯ, ಮಿಶ್ರಬೆಳೆ ಪದ್ಧತಿಗೆ ತೋರಿಸುತ್ತಿಲ್ಲ. ಹೊಲದ ಬದುಗಳಲ್ಲಿ, ಕೃಷಿ ಯೋಗ್ಯವಲ್ಲದ ಜಮೀನಿನಲ್ಲಿ ವೃಕ್ಷಗಳನ್ನು ಬೆಳೆಯಲು ಮುಂದಾದಲ್ಲಿ ಪ್ರಕೃತಿ ಇನ್ನಷ್ಟು ಹಸಿರಾಗುತ್ತದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT