ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ

ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಚಿವ ಹಾಲಪ್ಪ ಆಚಾರ್‌ ಸೂಚನೆ
Last Updated 6 ಜುಲೈ 2022, 4:29 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿ ಚಟುವಟಿಕೆಗೆ ಕಡಿವಾಣ ಹಾಕಬೇಕು. ಚೆಕ್‌ಪೋಸ್ಟ್‌ ಸ್ಥಾಪಿಸಿ, ಗಸ್ತು ಹೆಚ್ಚಿಸಿ ಕಾನೂನು ಬಾಹಿರ ಚಟುವಟಿಕೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಸೂಚನೆ
ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಗಣಿ ಅಕ್ರಮ ಚಟುವಟಿಕೆಗೆ ಸಂಬಂಧಿಸಿದಂತೆ ಶಾಸಕರು ಗಮನಕ್ಕೆ ತಂದಿದ್ದಾರೆ. ಸರ್ಕಾರದ ಸ್ಪಷ್ಟ ಮಾರ್ಗಸೂಚಿ ಉಲ್ಲಂಘಿಸಿ ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು. ಅಂತಹ ಚಟುವಟಿಕೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಡಿಎಂಎಫ್‌ ನಿಧಿಯನ್ನು ಬಳಸಿಕೊಂಡು ಚೆಕ್‌ಪೋಸ್ಟ್‌ ಸ್ಥಾಪಿಸಬೇಕು’ ಎಂದು ಹೇಳಿದರು.

‘ಗಣಿಗಾರಿಕೆಗೆ ಅರಣ್ಯ ಮತ್ತು ಕಂದಾಯ ಇಲಾಖೆಯ ನಿರಾಕ್ಷೇಪಣಾ ಪತ್ರ ಕಡ್ಡಾಯ. ಈ ಪ್ರಕ್ರಿಯೆ ವಿಳಂಬವಾಗಬಾರದು. ಜಿಲ್ಲಾಧಿಕಾರಿ ಶ್ರಮಹಿಸಿ ಕೆಲಸ ಮಾಡುವ ಜಿಲ್ಲೆಗಳಲ್ಲಿ ಈ ತೊಂದರೆಯಿಲ್ಲ. ಆದರೆ, ಇತರ ಕಡೆಗಳಲ್ಲಿ ನಿರಾಕ್ಷೇಪಣಾ ಪತ್ರಕ್ಕೆ ವರ್ಷಗಟ್ಟಲೆ ಕಾಯುವ ಸ್ಥಿತಿ ಇದೆ. ಸರಿಯಾಗಿ ಸ್ಥಳ ಪರಿಶೀಲನೆ ನಡೆಸಿ ಅನುಮತಿ ನೀಡಬೇಕು. ಇಲ್ಲವಾದರೆ, ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಕಲ್ಲು ಒಡೆದು, ಬದುಕು ಸಾಗಿಸುವ ವೃತ್ತಿಪರರಿಗೆ ಕ್ವಾರಿಗಳನ್ನು ಗುರುತಿಸಿ ಅವಕಾಶ ಕಲ್ಪಿಸಲು ನಿಯಮ ರೂಪಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಕಲ್ಲು ಒಡೆಯುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಬಡವರ ಜೀವನದ ಅವಕಾಶಗಳನ್ನು ಕಸಿಯಲಾಗುತ್ತಿದೆ’ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರು.

‘ಕಲ್ಲುಒಡೆದು ಬದುಕು ನಡೆಸುವವರಿಗೆ ಕ್ವಾರಿಗಳನ್ನು ಆಯ್ಕೆ ಮಾಡಿಕೊಟ್ಟು ಅವಕಾಶ ಕೊಡಬೇಕು. ಬಡವರಿಗೆ ತೊಂದರೆ ಕೊಡಬೇಡಿ. ಕಾನೂನು ಚೌಕಟ್ಟು ಮೀರಿ ಅಧಿಕಾರಿಗಳು ಕೆಲಸ ಮಾಡಬಾರದು’ ಎಂದು ಸಚಿವರು ತಾಕೀತು ಮಾಡಿದರು.

‘ಎತ್ತಿನ ಬಂಡಿಯಲ್ಲಿ ರೈತರು ಮರಳು ತರುವುದಕ್ಕೆ ಕಾನೂನು ಪ್ರಕಾರ ಅವಕಾಶವಿಲ್ಲ. ಮನೆ ಕಟ್ಟಿಕೊಳ್ಳುವ ಉದ್ದೇಶದಿಂದ ಕಷ್ಟಪಡುತ್ತಿರುವ ರೈತರಿಗೆ ಮಾನವೀಯ ದೃಷ್ಟಿಯಿಂದ ಸ್ಪಂದಿಸಬೇಕು. ಆದರೆ, ಇದು ಅಕ್ರಮ ಸಾಗಣೆಯ ಜಾಲವಾಗಿ ರೂಪುಗೊಳ್ಳ
ದಂತೆ ಎಚ್ಚರವಹಿಸಬೇಕು. ಇದಕ್ಕೆ ಪೊಲೀಸ್‌ ಇಲಾಖೆ ಸಹಕಾರಿಸಬೇಕು’ ಎಂದರು.

‘ಅಂಗನವಾಡಿ ಕೇಂದ್ರಗಳಿಗೆ ನೀರು, ಶೌಚಾಲಯ ಸೌಕರ್ಯಗಳು ಸಮರ್ಪಕವಾಗಿ ಒದಗಿಸಬೇಕು. ಅಂಗನವಾಡಿ ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಅಪೌಷ್ಟಿಕತೆ ನಿವಾರಣೆಗೆ ಶ್ರಮಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ತಿ ಹಾಗೂ ಮರುನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಶಾಸಕ ಗೂಳಿಹಟ್ಟಿ ಡಿ.ಶೇಖರ್‌, ಶಾಸಕಿ ಕೆ.ಪೂರ್ಣಿಮಾ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ರಮೇಶ್, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿದೇವಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಸ್ವಾಮಿ ಇದ್ದರು.

ಜೋಗಿಮಟ್ಟಿ ಪರಿಸರ ಸೂಕ್ಷ್ಮವಲಯ

ಜೋಗಿಮಟ್ಟಿ ವನ್ಯಧಾಮ ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಲಾಗಿದೆ. ಇದರ ಸುತ್ತಲಿನ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ರಾಮ್‌ಜಿ ನಾಯಕ್‌ ಮಾಹಿತಿ ನೀಡಿದರು.

‘ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಕರಡು ಅಧಿಸೂಚನೆಯಲ್ಲಿ ಎಂಟು ಕಿ.ಮೀ ವ್ಯಾಪ್ತಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ವ್ಯಾಪ್ತಿಯಲ್ಲಿ 23 ಕಲ್ಲುಗಣಿಗಳಿದ್ದವು. 2021ರಲ್ಲಿ ಹೊರಡಿಸಿದ ಅಂತಿಮ ಅಧಿಸೂಚನೆಯಲ್ಲಿ ಇದನ್ನು ಒಂದು ಕಿ.ಮೀ.ಗೆ ಮಿತಿಗೊಳಿಸಲಾಯಿತು. ಒಂದು ಕ್ವಾರಿ ಮಾತ್ರ ಇದರ ವ್ಯಾಪ್ತಿಯಲ್ಲಿದ್ದು, ಗಣಿ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT