ಸೋಮವಾರ, ಆಗಸ್ಟ್ 8, 2022
23 °C
ಬೀರೇನಹಳ್ಳಿಯ ರೈತ ಸಂತೋಷ್ ಕಂಡುಕೊಂಡ ದಾರಿ

ಸೊಪ್ಪು ಬೆಳೆದರೆ ಸೋಂಪಾದ ಆದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುವರ್ಣಾ ಬಸವರಾಜ್‌

ಹಿರಿಯೂರು: ಇಪ್ಪತ್ತು ವರ್ಷಗಳಿಂದ ಸೊಪ್ಪು ಬೆಳೆಯುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ ತಾಲ್ಲೂಕಿನ ಬೀರೇನಹಳ್ಳಿಯ ರೈತ ಸಂತೋಷ್.

ಅರ್ಧ ಎಕರೆಯಲ್ಲಿ ಪಾಲಕ್ ಸೊಪ್ಪು, ಮತ್ತೊಂದು ಅರ್ಧ ಎಕರೆಯಲ್ಲಿ ಬದನೆ, ಟೊಮೆಟೊ ಸಸಿ ನಾಟಿ ಮಾಡಿದ್ದಾರೆ. ಸಂತೋಷ್‌ ಅವರ ಕೃಷಿಗೆ ಪತ್ನಿ ಹಾಗೂ ಸಹೋದರಿ ಕೂಡ ಸಾಥ್‌ ನೀಡಿದ್ದಾರೆ.

ಸಂಕಷ್ಟಗಳೂ ಉಂಟು: ‘₹ 240 ಕೊಟ್ಟು ಒಂದು ಪ್ಯಾಕೆಟ್ ಪಾಲಕ್ ಸೊಪ್ಪಿನ ಬಿತ್ತನೆ ಬೀಜ ತಂದು ಬಿತ್ತಲಾಗಿತ್ತು. ಬಿತ್ತಿದ 30–35 ದಿನಗಳಿಗೆ ಸೊಪ್ಪು ಮಾರಾಟಕ್ಕೆ ಸಿದ್ಧಗೊಂಡಿತು. ಮಾರುಕಟ್ಟೆಯಲ್ಲಿ ಕಟ್ಟೊಂದಕ್ಕೆ ಅಂದಾಜು ₹ 3ರಿಂದ ₹ 4 ಬೆಲೆ ಸಿಕ್ಕರೆ ಒಂದೂವರೆ ತಿಂಗಳಲ್ಲಿ ಅರ್ಧ ಎಕರೆಗೆ ₹ 50,000 ಆದಾಯ ಗಳಿಸಬಹುದು. ಸೊಪ್ಪಿನ ಎಲೆಗಳಿಗೆ ಕೀಟಗಳ ಕಾಟವೂ ಇರುತ್ತದೆ. ಅದರೆ, ಕೀಟ ದಾಳಿ ಆಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು’ ಎನ್ನುತ್ತಾರೆ ಸಂತೋಷ್.

‘ಜೋರು ಮಳೆ ಅಥವಾ ಆಲಿಕಲ್ಲು ಮಳೆ ಬಂದರೆ ಸೊಪ್ಪು ಕೊಳೆತು ಹೋಗುತ್ತದೆ. ಸಣ್ಣ ಪ್ರಮಾಣದಲ್ಲಿ ಮಳೆ ಬಂದಲ್ಲಿ ಎಲೆಗಳು ಹೆಚ್ಚು ಅರಳುತ್ತವೆ. ಒಂದಿಷ್ಟು ಕೊಟ್ಟಿಗೆ ಗೊಬ್ಬರ, ಸಕಾಲಕ್ಕೆ ನೀರು ಹರಿಸಿದಲ್ಲಿ ಹೆಚ್ಚಿನ ಖರ್ಚಿಲ್ಲದೆ ಕುಟುಂಬ ನಿರ್ವಹಣೆಗೆ ಬೇಕಿರುವಷ್ಟು ಆದಾಯ  ಖಂಡಿತ ಸಿಗುತ್ತದೆ. ನಮ್ಮೂರಿನಲ್ಲಿಯೇ ಐದಾರು ಕುಟುಂಬದವರು ದಶಕಗಳಿಂದ ಸೊಪ್ಪು ಬೆಳೆಯುತ್ತಿದ್ದಾರೆ. ನಮಗೆ ತರಕಾರಿಗಿಂತ ಸೊಪ್ಪು ಬೆಳೆಯುವುದೇ ಅನುಕೂಲಕರ ಅನ್ನಿಸಿದೆ’ ಎಂದು ಅವರು ಹೇಳುತ್ತಾರೆ.

‘ಮಧ್ಯಾಹ್ನ 3 ಗಂಟೆ ವೇಳೆಗೆ ಮನೆಯವರೆಲ್ಲ ಹೊಲಕ್ಕೆ ಹೋಗುತ್ತೇವೆ. ಒಂದೂವರೆ ಗಂಟೆ ಕಾಲ ಸೊಪ್ಪು ಬಿಡಿಸಿ ರಬ್ಬರ್ ಬ್ಯಾಂಡ್
ಅಥವಾ ಈಚಲು ಗರಿ ಬಳಸಿ ಕಟ್ಟು (ಸಿವುಡು) ಕಟ್ಟುತ್ತೇವೆ. ಮೆಂತ್ಯ ಅಥವಾ ಬೇರೆ ಸೊಪ್ಪುಗಳ ಕಟ್ಟುಗಳನ್ನು ಚಿಲ್ಲರೆ ಮಾರಾಟಗಾರರು ಬಿಚ್ಚಿ, ಎರಡೆರಡು ಕಟ್ಟು ಮಾಡುವುದುಂಟು. ಆದರೆ, ಪಾಲಕ್ ಸೊಪ್ಪನ್ನು ಬಿಚ್ಚಿ ಕಟ್ಟಲು ಬರುವುದಿಲ್ಲ. ಬಿಚ್ಚಲು ಹೋದಲ್ಲಿ ಸೊಪ್ಪು ಹಾಳಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ಬೆಳಗಿನ 5 ಗಂಟೆಗೆ ದ್ವಿಚಕ್ರ ವಾಹನದಲ್ಲಿ ಸೊಪ್ಪಿನ ಕಟ್ಟುಗಳಿರುವ ಗಂಟನ್ನು ಇಟ್ಟುಕೊಂಡು ಹಿರಿಯೂರಿಗೆ ಒಯ್ಯುತ್ತೇನೆ. ಇದೇ ನಮಗೆ ಪ್ರಮುಖ ಮಾರುಕಟ್ಟೆ. ಚಿಲ್ಲರೆ ಮಾರಾಟಗಾರರು 20–30 ಕಟ್ಟು (ಬೇಡಿಕೆ ಆಧರಿಸಿ) ಖರೀದಿಸುತ್ತಾರೆ. ಅರ್ಧ ಗಂಟೆಯ ಒಳಗೆ ನಮ್ಮ ವ್ಯಾಪಾರ ಮುಗಿಯುತ್ತದೆ. ಈ ವರ್ಷ ಒಮ್ಮೆ ಜೋರು ಮಳೆಗೆ ಸೊಪ್ಪು ಹಾಳಾಗಿದ್ದುಂಟು. ಸೊಪ್ಪು ಬೆಳೆಗೆ ಖರ್ಚೂ ಕಡಿಮೆ, ನಷ್ಟ ಇಲ್ಲ. ಒಮೊಮ್ಮೆ ₹ 5ಕ್ಕೆ 3–4 ಕಟ್ಟು ಮಾರಿದ್ದುಂಟು. ಅಂತಹ ಸಮಯದಲ್ಲಿ ಊರಿಂದ ಹೋಗಲು ಪೆಟ್ರೋಲ್‌ಗೆ ಮಾಡಿದ ಖರ್ಚೂ ವಾಪಸ್‌ ಬರುವುದಿಲ್ಲ. ಆದರೂ ಸಾಮಾನ್ಯವಾಗಿ ಲಾಭ ಬರುತ್ತದೆ. ಮನೆಯವರೆಲ್ಲರಿಗೂ ಕೈತುಂಬ ಕೆಲಸ ಇರುತ್ತದೆ. ಬಲಿತ ಸೊಪ್ಪನ್ನು ದನಕರುಗಳಿಗೆ ಪೌಷ್ಟಿಕ ಆಹಾರದಂತೆ ನೀಡುತ್ತೇವೆ’ ಎಂದು ವಿವರಿಸುತ್ತಾರೆ ಸಂತೋಷ್‌.

ಕೋಟ್‌...

ಪ್ರಕೃತಿ ವೈಪರೀತ್ಯದಿಂದ ಬೆಳೆ ಹಾನಿಯಾದಲ್ಲಿ ಸೊಪ್ಪು ಬೆಳೆಗಾರರಿಗೂ ಪರಿಹಾರ ನೀಡುವಂತಾಗಬೇಕು. ಹಣ್ಣು–ತರಕಾರಿ, ಹೂವು, ಸೊಪ್ಪು ಬೆಳೆಗಳನ್ನು ಬೆಳೆ ವಿಮೆ ಯೋಜನೆಯ ವ್ಯಾಪ್ತಿಗೆ ತರಬೇಕು.

ಸಂತೋಷ್‌, ಸೊಪ್ಪು ಬೆಳೆಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.