ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಮ್ಮೇಗೌಡರ ಹೆಮ್ಮೆಯ ಸಾಧನೆ

ಗಮನ ಸೆಳೆದಿರುವ ಖಂಡೇನಹಳ್ಳಿ ಪಾಳ್ಯದ ಕೃಷಿ ಪದವೀಧರ
Last Updated 16 ನವೆಂಬರ್ 2022, 4:30 IST
ಅಕ್ಷರ ಗಾತ್ರ

ಧರ್ಮಪುರ: ಕೃಷಿ ಕುರಿತ ತಮ್ಮ ಕನಸು ನನಸಾಗಿಸಿಕೊಳ್ಳಲು ಹಳ್ಳಿಯಲ್ಲಿಯೇ ನೆಲೆ ನಿಂತಿದ್ದಾರೆ ಖಂಡೇನಹಳ್ಳಿ ಪಾಳ್ಯದ ಕೃಷಿ ಪದವೀಧರ ತಿಮ್ಮೇಗೌಡ. ಅವರ ಕೃಷಿ ಕೆಲಸಗಳಿಗೆ ತಂದೆ ಗುಜ್ಜಾರಪ್ಪ ಹೆಗಲು ನೀಡಿದ್ದಾರೆ.

ತಂದೆ ಗುಜ್ಜಾರಪ್ಪ ಅವರು 10 ಎಕರೆ ಜಮೀನಿನಲ್ಲಿ ನೀರಿನ ಕೊರತೆ ಎದುರಿಸಿದ್ದಲ್ಲದೆ, ಸಾಂಪ್ರದಾಯಿಕ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿದ್ದುದನ್ನು ಬಾಲ್ಯದಿಂದಲೂ ನೋಡುತ್ತಾ ಬಂದಿದ್ದ ತಿಮ್ಮೇಗೌಡ ಅವರು, ದೊಡ್ಡಬಳ್ಳಾಪುರದಲ್ಲಿ ಕೃಷಿ ಪದವಿ ಪಡೆದ ಮೇಲೆ ಕೃಷಿ ಕುರಿತು ಹೊಸ ಆಲೋಚನೆಗಳನ್ನು ಮೈಗೂಡಿಸಿಕೊಂಡರು. ಅದರ ಫಲವಾಗಿ ಜಮೀನಿನಲ್ಲಿ ವೈವಿಧ್ಯಮಯ ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ.

ಧರ್ಮಪುರ ಹೋಬಳಿಯಲ್ಲಿ ತೋಟಗಾರಿಕಾ ಬೆಳೆ ಬೆಳೆಯಲು ಉತ್ತಮ ಹವಾಗುಣ ಇದೆ ಎಂಬುದನ್ನು ಮನಗಂಡ ತಿಮ್ಮೇಗೌಡ, 2020-21ರಲ್ಲಿ ಮೂರು ಎಕರೆ ಭೂಮಿಯಲ್ಲಿ ಅಂಜೂರ (ಬ್ರೌನ್ ಟರ್ಕಿ ತಳಿ) ನಾಟಿ ಮಾಡಿದ್ದರು. ಇದರ ಜತೆಗೆ ಮಿಶ್ರ ಬೆಳೆಯಾಗಿ ದುಂಡು ಮಲ್ಲಿಗೆ ಹಾಗೂ ಸೀಬೆ ಹಣ್ಣಿನ ಗಿಡ ನಾಟಿ ಮಾಡಿದ್ದಾರೆ.

‘ಅಂಜೂರ ಬೆಳೆ ಫಸಲಿಗೆ ಬಂದಿದೆ. 10 ಕ್ವಿಂಟಲ್ ಹಣ್ಣನ್ನು ಜಮೀನಿನಲ್ಲಿಯೇ ಪ್ರತಿ ಕೆ.ಜಿ.ಗೆ ₹ 70ರಂತೆ ಮಾರಾಟ ಮಾಡಿದ್ದೇವೆ. ಐದಾರು ತಿಂಗಳುಗಳಿಂದ ಮಳೆ ಹೆಚ್ಚಳ ಮತ್ತು ಹವಾಮಾನ ವೈಪರಿತ್ಯದಿಂದಾಗಿ ನಿರೀಕ್ಷಿಸಿದಷ್ಟು ಲಾಭ ಬಂದಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಲಾಭದ ಭರವಸೆ ಇದೆ. ಸೀಬೆ ಮತ್ತು ಮಲ್ಲಿಗೆಯ ಫಸಲು ಆರಂಭವಾಗಿದೆ’ ಎಂದು ತಿಮ್ಮೇಗೌಡ ಹೇಳಿದರು.

‘ಇನ್ನುಳಿದ ಜಮೀನಿನಲ್ಲಿ ಮೂರು ಎಕರೆಯಲ್ಲಿ ದಾಳಿಂಬೆ, ಎರಡು ಎಕರೆಯಲ್ಲಿ ಅಡಿಕೆ, ಮೂರು ಎಕರೆಯಲ್ಲಿ ರೇಷ್ಮೆ ಕೃಷಿ ಕೈಗೊಂಡಿದ್ದು, ಉತ್ತಮ ಆದಾಯ ಸಿಗುತ್ತಿದೆ. ಜಮೀನಿನ ಸುತ್ತ ಬದುಗಳಲ್ಲಿ ಹುಣಸೆ, ಹೆಬ್ಬೇವು ಹಾಗೂ ಸಿಲ್ವರ್ ಓಕ್ ಬೆಳೆಸಲಾಗಿದೆ. ಕಲುಷಿತ ಗಾಳಿಯನ್ನು ತಿಳಿಗೊಳಿಸಿ ಉತ್ತಮ ವಾತಾವರಣ ನೀಡಲು ಸಹಕಾರಿಯಾಗುವ ಅರೆಕಾ ಪಾಮ್ ಷೋ ಪ್ಲಾಂಟ್‌ಗೆ ಬೇಡಿಕೆ ಇದ್ದು, ಸಸಿಗಳನ್ನು ಬೆಳೆಸಿ ಮಾರಾಟ ಮಾಡುತ್ತಿದ್ದೇನೆ’ ಎಂದು ಅವರು ವಿವರಿಸಿದರು.

‘ಜೊತೆಗೆ ನಿಂಬೆ, ಅಡಿಕೆ, ಕರಿಬೇವು ನರ್ಸರಿ ಪ್ರಾರಂಭಿಸಿದ್ದು, ರೈತರಿಗೆ ಕೈಗೆಟಕುವ ದರದಲ್ಲಿ ಸಸಿಗಳನ್ನು ಮಾರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದಾಳಿಂಬೆ, ಅಂಜೂರ, ಪಪ್ಪಾಯ ನರ್ಸರಿ ಪ್ರಾರಂಭಿಸಲಾಗುವುದು’ ಎಂದು ಗುಜ್ಜಾರಪ್ಪ ತಿಳಿಸಿದರು.

ಕೋಟ್‌...

ರೈತರು ಸಾಂಪ್ರಾದಾಯಿಕ ಬೆಳೆಗಳಿಗೆ ಜೋತು ಬೀಳದೆ ಸಮಗ್ರ ಕೃಷಿ ಪ್ರಯೋಗ ಮಾಡಬೇಕು. ಸಾವಯವ ಕೃಷಿ ವಿಧಾನ ಒಳಿತು. ನಾಟಿ ಹಸುಗಳನ್ನು ಸಾಕಿದರೆ ಗಂಜಲ ಬಳಸಿಕೊಳ್ಳಬಹುದು.
ತಿಮ್ಮೇಗೌಡ, ಕೃಷಿ ಪದವೀಧರ, ಖಂಡೇನಹಳ್ಳಿ ಪಾಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT