ಹಿರಿಯೂರು: ನಗರದಿಂದ 4 ಕಿ.ಮೀ. ದೂರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ನಿತ್ಯ ಬಂದು ಹೋಗುವುದು ಕಷ್ಟವಾಗಿದ್ದು, ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು.
ಕಾಲೇಜಿನಲ್ಲಿ ₹ 3.9 ಕೋಟಿ ವೆಚ್ಚದಲ್ಲಿ ಮೊದಲ ಮತ್ತು ಎರಡನೇ ಮಹಡಿಯಲ್ಲಿ ತರಗತಿ ಕೋಣೆಗಳು, ಪ್ರಯೋಗಾಲಯ ನಿರ್ಮಾಣ ಮತ್ತು ₹ 1.58 ಕೋಟಿ ವೆಚ್ಚದಲ್ಲಿ ಕಾರ್ಯಾಗಾರ ನಿರ್ಮಾಣ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಲು ಬಂದಿದ್ದ ಸಚಿವರಿಗೆ ವಿದ್ಯಾರ್ಥಿಗಳು ಹಲವು ಬೇಡಿಕೆಗಳ ಮನವಿ ಸಲ್ಲಿಸಿದರು.
ಪ್ರಯೋಗಾಲಯಗಳಿಗೆ 100 ಕಂಪ್ಯೂಟರ್ ಪೂರೈಕೆ, ಯೂನಿವರ್ಸಲ್ ಟೆಸ್ಟಿಂಗ್ ಯಂತ್ರ, 3 ಡಿ ಪ್ರಿಂಟರ್ಸ್, ಕಾಲೇಜಿಗೆ ಕಾಂಪೌಂಡ್ ಹಾಗೂ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿ ಮುಖಂಡರು ಸಚಿವರಿಗೆ ಮನವಿ ಮಾಡಿದರು.
ವಿದ್ಯಾರ್ಥಿಗಳ ಬೇಡಿಕೆಗಳು ನ್ಯಾಯಯುತವಾಗಿದ್ದು ಆದ್ಯತೆ ಮೇರೆಗೆ ಈಡೇರಿಸಲಾಗುವುದು. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಲ್ಯಾಬ್ ಕಡೆ ಹೆಚ್ಚು ಗಮನ ಕೊಡಬೇಕು. ಕಲಿಕೆ ಜೊತೆಗೆ ಕೌಶಲ ಬೆಳೆಸಿಕೊಂಡಲ್ಲಿ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದು. ಮೊಬೈಲ್ ಬದಲು ಪುಸ್ತಕ ಹಿಡಿದರೆ ಬದುಕಿನಲ್ಲಿ ಯಶಸ್ಸು ಕಾಣಬಹುದು’ ಎಂದು ಸಚಿವ ಡಿ. ಸುಧಾಕರ್ ಹೇಳಿದರು.
ಪ್ರಾಂಶುಪಾಲ ಎನ್.ವಾಸುದೇವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಸಿಬ್ಬಂದಿ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.