ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟುಗಳಿಗೆ ಸಿಗದ ಕ್ರೀಡಾಂಗಣ ಸೌಲಭ್ಯ

ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕ್ರೀಡಾಂಗಣಕ್ಕೆ ಈಗ ಕಾಯಕಲ್ಪ
Last Updated 3 ಜುಲೈ 2022, 2:55 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕು ಕ್ರೀಡಾಂಗಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕ್ರೀಡಾಪಟುಗಳಿಗೆ ಕ್ರೀಡಾ ಸೌಲಭ್ಯಗಳು ಇನ್ನೂ
ಮರೀಚಿಕೆಯಾಗಿವೆ.

₹ 12 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಕಾಮಗಾರಿಗಳು ನಡೆಯುತ್ತಿದ್ದು, ಮೊದಲ ಹಂತದ ಕಾಮಗಾರಿಗಳು ಮುಗಿದಿವೆ. ಇದರಲ್ಲಿ ಪ್ರೇಕ್ಷಕರ ಗ್ಯಾಲರಿಯ ಒಂದು ಭಾಗದ ಕಾಮಗಾರಿ ಮುಗಿದಿದೆ. ವೇದಿಕೆಯ ಕಾಮಗಾರಿ ನಿರ್ಮಾಣ ಹಂತದಲ್ಲಿದೆ. ಸುತ್ತಲೂ ಪ್ರೇಕ್ಷಕರ ಗ್ಯಾಲರಿ ನಿರ್ಮಿಸುವ ಕೆಲಸ ನಡೆಯುತ್ತಿದೆ. ನಂತರ ರೂಫಿಂಗ್ ಅಳವಡಿಸಬೇಕಿದೆ. ಒಳಾಂಗಣ ಕ್ರೀಡಾಂಗಣ, ಈಜುಕೊಳ ನಿರ್ಮಾಣಕ್ಕೆ ₹ 6 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಿಸಬೇಕಿದೆ.

ಪಟ್ಟಣದ ಎಂಎಂ ಸರ್ಕಾರಿ ಪ್ರೌಢಶಾಲೆಯ ಹಿಂದೆ 6 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ಇದೆ. ಕ್ರೀಡಾಂಗಣದಲ್ಲಿ ಮುಳ್ಳು, ಕಲ್ಲು, ಗಾಜಿನ ಚೂರುಗಳಿರುವುದರಿಂದ ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳು ಅಭ್ಯಾಸ ಮಾಡಲು ಆಗುತ್ತಿಲ್ಲ. ಮೈದಾನದಲ್ಲಿ ಉದ್ದ ಜಿಗಿತ, ಎತ್ತರ ಜಿಗಿತ, ವಾಲಿಬಾಲ್, ಥ್ರೋಬಾಲ್ ಕೋರ್ಟ್‌ಗಳು ಇಲ್ಲ. ಮಳೆ ಬಂದರೆ ಕೆಸರು ಗದ್ದೆಯಂತಾಗುವ ಕ್ರೀಡಾಂಗಣದ ಒಳಗೆ ಹೋಗುವುದು ಅಸಾಧ್ಯ. ಕ್ರೀಡಾಂಗಣಕ್ಕೆ ಸರ್ಕಾರದ ಜಾಗವಿದ್ದರೂ ಇಲ್ಲಿಯವರೆಗೆ ಅಭಿವೃದ್ಧಿ ಮಾಡಿರಲಿಲ್ಲ. ಇದರಿಂದ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜುಮಟ್ಟದ ಕ್ರೀಡಾಕೂಟಗಳನ್ನು ಕೊಟ್ರೆನಂಜಪ್ಪ ಕಾಲೇಜು ಮೈದಾನದಲ್ಲಿ ನಡೆಸಲಾಗುತ್ತಿದೆ. ರಾಷ್ಟ್ರೀಯ ಹಬ್ಬಗಳು, ಸಮಾವೇಶಗಳನ್ನು ನಡೆಸಲೂ ಸೂಕ್ತ ಜಾಗವಿಲ್ಲದೆ ಖಾಸಗಿ ಮೈದಾನ ಅವಲಂಬಿಸಬೇಕಿದೆ. ಮುಂಜಾನೆ ವಾಯುವಿಹಾರಿಗಳು ಮುಳ್ಳಿನಲ್ಲೇ ನಡೆಯುವ ಪರಿಸ್ಥಿತಿ ಇದೆ.

ಕ್ರೀಡಾಂಗಣ ಎಂಎಂ ಶಾಲೆಯ ಹಿಂಭಾಗದಲ್ಲಿದ್ದು, ಮುಖ್ಯರಸ್ತೆಗೆ ಕಾಣಿಸುವುದಿಲ್ಲ. ಎಂಎಂ ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ಕ್ರೀಡಾಂಗಣದ ಪಶ್ಚಿಮ ಭಾಗದಲ್ಲಿ 4 ಅಂತಸ್ತುಗಳ ಹೊಸ ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ. ಎಂಎಂ ಶಾಲೆಯ ಶಿಥಿಲ ಕಟ್ಟಡ ನೆಲಸಮ ಮಾಡಿ ಕ್ರೀಡಾಂಗಣವನ್ನು ಮುಖ್ಯರಸ್ತೆಗೆ ಕಾಣಿಸುವಂತೆ ಮಾಡಬೇಕಿದೆ ಎಂದು ಆಶಿಸುತ್ತಾರೆ ಶಾಸಕ ಎಂ. ಚಂದ್ರಪ್ಪ.

ಕ್ರೀಡಾಂಗಣ ಕಾಮಗಾರಿ ಚುರುಕುಗೊಳಿಸಿ ಬೇಗ ಮುಗಿಸಬೇಕು. ನಮಗೆ ಕ್ರೀಡಾ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದು ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.

ಭರವಸೆಯ ಬೆಳಕು

ತಾಲ್ಲೂಕು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇನ್ನು ಒಂದು ವರ್ಷದಲ್ಲಿ ಕ್ರೀಡಾಪಟುಗಳು, ವಿದ್ಯಾರ್ಥಿಗಳಿಗೆ ಎಲ್ಲಾ ಸೌಕರ್ಯಗಳು ಸಿಗುವ ಭರವಸೆ ಸಿಕ್ಕಿದೆ. ಎರಡು ಈಜುಕೊಳ, ಬ್ಯಾಡ್ಮಿಂಟನ್ ಕೋರ್ಟ್ ಸೇರಿ ಒಳಾಂಗಣ ಕ್ರೀಡೆಗಳಿಗೂ ಸೌಲಭ್ಯ ಸಿಗಲಿದೆ. ಕ್ರೀಡಾಂಗಣದ ಕಾಮಗಾರಿಗಳು ಮುಗಿದ ನಂತರ ಕ್ರೀಡಾಕೂಟಗಳು, ರಾಷ್ಟ್ರೀಯ ಹಬ್ಬಗಳು, ಸಭೆ, ಸಮಾವೇಶಗಳನ್ನು ನಡೆಸಲು ಅವಕಾಶ ಸಿಗಲಿದೆ.

ಕೋಟ್‌...

ಶಾಸಕ ಎಂ. ಚಂದ್ರಪ್ಪ ಅವರು ಕ್ರೀಡಾಂಗಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತಿದ್ದು, ಸುಸಜ್ಜಿತ ಕ್ರೀಡಾಂಗಣವಾಗಿ ಹೊರಹೊಮ್ಮಲಿದೆ.

ಎನ್.ಕೆ. ವಿನಯ್, ಬಿಎಸ್ಸಿ ಅಗ್ರಿ ವಿದ್ಯಾರ್ಥಿ

ರಜೆ ಇದ್ದಾಗ ಕ್ರಿಕೆಟ್ ಆಡಬೇಕೆಂದರೆ ಪಟ್ಟಣದಲ್ಲಿ ಸೂಕ್ತ ಜಾಗ ಇಲ್ಲ. ಕ್ರೀಡಾಂಗಣದಲ್ಲಿ ಮುಳ್ಳು, ಕಲ್ಲುಗಳಿದ್ದು, ಅದರಲ್ಲೇ ಆಟ ಆಡಿ ಬರುತ್ತೇವೆ.

ಗುರು ಕಿರಣ್, ಎಂಜಿನಿಯರಿಂಗ್ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT