ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ

ರೇಷ್ಮೆ , ಕೃಷಿ ಉತ್ಪನ್ನಗಳ ಕಂಪನಿ ಲೋಕಾರ್ಪಣೆಗೊಳಿಸಿದ ಶ್ರೀರಾಮುಲು
Last Updated 3 ಜುಲೈ 2022, 2:56 IST
ಅಕ್ಷರ ಗಾತ್ರ

ಮೊಳಕಾಲ್ಮುರು: ರೈತರ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿದ್ದು, ಬಜೆಟ್‌ನಲ್ಲಿ ಸಾಕಷ್ಟು ಅನುದಾನವನ್ನು ಮೀಸಲಿಟ್ಟಿವೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಶನಿವಾರ ‘ಬಿಳಿನೀರು ಚಿಲುಮೆ ರೇಷ್ಮೆ ಮತ್ತು ಕೃಷಿ ಉತ್ಪನ್ನಗಳ ಕಂಪನಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಕೃಷಿಗೆ ಅಗತ್ಯವಿರುವ ಬೀಜ, ಗೊಬ್ಬರ, ಕೃಷಿ ಪರಿಕರ, ಔಷಧಗಳನ್ನು ಒಂದೇ ವೇದಿಕೆಯಲ್ಲಿ ಸಿಗುವಂತೆ ಮಾಡುವ ಜತೆಗೆ ಉತ್ಪನ್ನಗಳನ್ನು ಮಾರಾಟ ಮಾಡಲು, ಉತ್ತಮ ಬೆಲೆ ದೊರಕಿಸಲು ಹಾಗೂ ಮೌಲ್ಯವರ್ಧನೆಗಾಗಿ ರೈತರ ಒಕ್ಕೂಟಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಮೀಸಲಿಟ್ಟಿದ್ದು, ದೇಶದಾದ್ಯಂತ 10,000 ರೈತರ ಒಕ್ಕೂಟಗಳ ಸ್ಥಾಪನೆ ಗುರಿಯನ್ನು ಪ್ರಧಾನಿ ನರೇಂದ್ರಮೋದಿ ಹೊಂದಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಕೃಷಿಗೆ ಸಂಬಂಧಪಟ್ಟ ಕಾರ್ಯಗಳಿಗೆ ಈ ಬಾರಿ ಬಜೆಟ್‌ನಲ್ಲಿ ₹ 33,700 ಕೋಟಿ ಅನುದಾನ ಮೀಸಲಿಟ್ಟಿದೆ. ಕೇಂದ್ರಕ್ಕೆ ಸಮನಾಗಿ ರಾಜ್ಯ ಸರ್ಕಾರವು ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಿದೆ. ರಾಜ್ಯದಲ್ಲಿ ಫುಡ್ ಪಾರ್ಕ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ಚಿತ್ರದುರ್ಗ ಜಿಲ್ಲೆಯಲ್ಲೂ ಫುಡ್ ಪಾರ್ಕ್ ಸ್ಥಾಪಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ ಎಂದರು.

ಕೊಂಡ್ಲಹಳ್ಳಿಯಲ್ಲಿ ಸ್ಥಾಪಿಸಿರುವ ರೈತ ಒಕ್ಕೂಟವು ಉತ್ತಮ ಸಾಧನೆ ಮಾಡಿದ್ದು, ಈವರೆಗೆ ₹ 70 ಲಕ್ಷ ವಹಿವಾಟು ನಡೆಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈಚೆಗೆ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಈ ಒಕ್ಕೂಟದ ಸಾಧನೆಯನ್ನು ಶ್ಲಾಘಿಸಿದ್ದಾರೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕಡಿಮೆ ಮಳೆ ಬಿದ್ದರೂ ರೈತರು ಹೆಚ್ಚು ಶ್ರಮ ವಹಿಸಿ ಕೃಷಿ ಮಾಡುತ್ತಿದ್ದಾರೆ. ರೈತ ಒಕ್ಕೂಟದಲ್ಲಿ ಸಾಮಗ್ರಿ ಖರೀದಿ ಮಾಡಿದಲ್ಲಿ ರೈತರಿಗೆ ನೇರವಾಗಿ ಶೇ 30ರಷ್ಟು ಉಳಿತಾಯವಾಗಲಿದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ತಿಳಿಸಿದರು.

ಒಕ್ಕೂಟದ ಅಧ್ಯಕ್ಷ ಕೆ.ಟಿ. ಶ್ರೀರಾಮರೆಡ್ಡಿ, ಉಪಾಧ್ಯಕ್ಷ ಟಿ. ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಪಾಲಯ್ಯ, ಮಂಡಲಾಧ್ಯಕ್ಷರಾದ ಡಾ.ಪಿ.ಎಂ. ಮಂಜುನಾಥ್, ರಾಮರೆಡ್ಡಿ, ರಾಮದಾಸ್, ಕೃಷಿ ನಿರ್ದೇಶಕ ವಿ.ಸಿ. ಉಮೇಶ್, ಡಾ.ಆರ್. ವಿರೂಪಾಕ್ಷಪ್ಪ, ರೇಷ್ಮೆ ಜಿಲ್ಲಾ ನಿರ್ದೇಶಕ ಮಾರಪ್ಪ, ಕೃಷಿ ವಿಜ್ಞಾನಿ ಡಾ.ಓಂಕಾರಪ್ಪ, ಇಕೋವಾ ಮುಖ್ಯಸ್ಥ ತಿಪ್ಪೇಸ್ವಾಮಿ, ಕೃಷಿಕ ಕಾ.ತಿ. ಮಾಸ್ತರ್, ಒಕ್ಕೂಟ ವ್ಯವಸ್ಥಾಪಕ ವಿಜಯಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ. ಲಕ್ಷ್ಮಣ್ ಇದ್ದರು.

₹ 19.5 ಕೋಟಿ ಮಂಜೂರು

‘ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೈಲನಹಳ್ಳಿ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಸೇತುವೆ ಕಮ್ ಬ್ಯಾರೇಜ್ ನಿರ್ಮಿಸಲು ರಾಜ್ಯ ಸರ್ಕಾರ ಶುಕ್ರವಾರ ₹ 19.5 ಕೋಟಿ ಅನುದಾನ ಮಂಜೂರು ಮಾಡಿದೆ. ಈ ಕಾರ್ಯದಿಂದ ವ್ಯರ್ಥವಾಗಿ ಹರಿಯುವ ನದಿ ನೀರು ಬಳಕೆ ಜತೆಗೆ ಅಂತರ್ಜಲ ಹೆಚ್ಚಳವಾಗಲಿದೆ. ತುಂಗ–ಭದ್ರಾ ಹಿನ್ನೀರು ಯೋಜನೆ ಅಂತಿಮ ಹಂತದಲ್ಲಿದೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಕ್ಷೇತ್ರದ 74 ಕೆರೆಗಳಿಗೆ ನೀರುಣಿಸುವ ಕಾರ್ಯ ನಮ್ಮ ಸರ್ಕಾರದ ಅವಧಿಯಲ್ಲಿ ಪೂರ್ಣವಾಗಲಿದೆ’ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT