ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ ಪಟ್ಟಣದಲ್ಲಿ ಕ್ರೀಡಾಂಗಣ ಮರೀಚಿಕೆ

24 ವರ್ಷಗಳ ಹಿಂದೆಯೇ ಕ್ರೀಡಾಂಗಣಕ್ಕಾಗಿ 3 ಎಕರೆ ಜಮೀನು ಮೀಸಲು
Last Updated 6 ಜುಲೈ 2022, 4:28 IST
ಅಕ್ಷರ ಗಾತ್ರ

ವಿ. ಧನಂಜಯ

ನಾಯಕನಹಟ್ಟಿ: 48 ಹಳ್ಳಿಗಳ ಹೋಬಳಿ ಕೇಂದ್ರ ಸ್ಥಾನವಾಗಿರುವ ನಾಯಕನಹಟ್ಟಿಯಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ಇಲ್ಲದಿರುವುದರಿಂದ ಕ್ರೀಡಾ ಚಟುವಟಕೆ ಕುಂಠಿತವಾಗಿದೆ.

ಪ್ರಸಿದ್ಧ ಗುರುತಿಪ್ಪೇರುದ್ರಸ್ವಾಮಿ ದೇವಾಲಯವಿರುವ ಪಟ್ಟಣವು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ. ಜತೆಗೆ ಹೋಬಳಿಯಲ್ಲಿ ದೊಡ್ಡಾಟ, ಸಣ್ಣಾಟ, ಬಯಲಾಟ, ಹಾಡುಗಾರಿಕೆ, ಭಜನೆ ಸೇರಿ ನೂರಾರು ಜನಪದ ಕಲಾವಿದರು ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶಿಷ್ಟವಾದ ಕೊಡುಗೆಯನ್ನು ಸಲ್ಲಿಸಿದ್ದಾರೆ. ಆದರೆ, ನಾಯಕನಹಟ್ಟಿ ಹೋಬಳಿಯಲ್ಲಿ ಎರಡು ದಶಕಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಸಾಧನೆಗಳು ಕಂಡು ಬಂದಿಲ್ಲ. ಹೋಬಳಿಯಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ಹಾಗೂ ಕ್ರೀಡಾ ತರಬೇತುದಾರರ ಕೊರತೆಯಿಂದ ಕ್ರೀಡಾ ಕ್ಷೇತ್ರ ಸೊರಗಿಹೋಗಿದೆ.

ಎರಡು ದಶಕಗಳ ಹಿಂದೆ ಹೋಬಳಿಯಲ್ಲಿ ಕೊಕ್ಕೊ, ಕಬಡ್ಡಿ, ಬ್ಯಾಡ್ಮಿಂಟನ್‌, ವಾಲಿಬಾಲ್ ಸೇರಿ ಹಲವು ಕ್ರೀಡೆಗಳಲ್ಲಿ ನೂರಾರು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ದಿನ ಕಳೆದಂತೆ ಕ್ರೀಡಾ ಕ್ಷೇತ್ರದಲ್ಲಾದ ಬದಲಾವಣೆಯಿಂದ ಕ್ರೀಡಾಂಗಣ, ಕ್ರೀಡಾ ತರಬೇತುದಾರರ ಕೊರತೆ, ಒಳಾಂಗಣ, ಹೊರಾಂಗಣ ಅಂಕಣಗಳ ಕೊರತೆಯಿಂದ ಹಲವು ಕ್ರೀಡೆಗಳು ನಾಯಕನಹಟ್ಟಿಯಲ್ಲಿ ಕಣ್ಮರೆಯಾದವು. ಪೋಷಕರು ತಮ್ಮ ಮಕ್ಕಳನ್ನು ಕ್ರೀಡಾ ತರಬೇತಿಗಾಗಿ ಚಿತ್ರದುರ್ಗ, ದಾವಣಗೆರೆ, ಬೆಂಗಳೂರಿಗೆ ಕಳುಹಿಸಲಾಗದೇ ಕ್ರೀಡಾ ಕ್ಷೇತ್ರವನ್ನು ಮರೆಯುವಂತಾಗಿದೆ.

ಖಾಸಗಿ ವಿದ್ಯಾಸಂಸ್ಥೆಯ ಆವರಣವೇ ಕ್ರೀಡಾಂಗಣ: ಪಟ್ಟಣದಲ್ಲಿರುವ ಎಸ್.ಟಿ.ಎಸ್.ಆರ್ ವಿದ್ಯಾಸಂಸ್ಥೆಯ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಯಾಗಿದ್ದು, ಇಲ್ಲಿರುವ 3 ಎಕರೆ ವಿಶಾಲವಾದ ಆವರಣದಲ್ಲಿ ಆಟದ ಮೈದಾನವಿದೆ. ಪಟ್ಟಣದ ಎಲ್ಲ ವಯೋಮಾನದ ಜನರು ನಿತ್ಯ ಇದೇ ಆವರಣದಲ್ಲಿ ವಾಯುವಿಹಾರ ಮಾಡುತ್ತಾರೆ. ಹಾಗೇ ಪಟ್ಟಣದ ಯುವಕರು ಇದೇ ಆವರಣದಲ್ಲಿ ಕ್ರಿಕೆಟ್, ಲಾಂಗ್‍ಜಂಪ್, ಹೈಜಂಪ್, 100 ಮೀ. ಓಟ, 200 ಮೀ ಟ್ರ್ಯಾಕ್ ಓಟ, ವಾಲಿಬಾಲ್, ಕಬಡ್ಡಿ, ಕೊಕ್ಕೊ ಆಟಗಳನ್ನು ಆಡುತ್ತಾರೆ. ಇದರಿಂದ ವಿವಿಧ ಕ್ರೀಡಾಪಟುಗಳಿಗೆ ಸಾಕಷ್ಟು ತೊಂದರೆಗಳು ಉಂಟಾಗುತ್ತಿವೆ. ಹೋಬಳಿಯಲ್ಲಿ ಯಾವುದಾದರೂ ಶಾಲಾ ಕ್ರೀಡಾಕೂಟಗಳು ನಡೆದರೂ ಇದೇ ಶಾಲಾ ಆವರಣದಲ್ಲಿಯೇ ಜರುಗುತ್ತವೆ. ಸ್ವಂತ ಹಾಗೂ ಸುಸಜ್ಜಿತವಾದ ಕ್ರೀಡಾಂಗಣದ ಕೊರತೆ ಎದ್ದು ಕಾಣುತ್ತಿದೆ.

24 ವರ್ಷಗಳ ಹಿಂದೆಯೇ ಕ್ರೀಡಾಂಗಣಕ್ಕೆ ಜಾಗ ಮೀಸಲು: 1997–98ನೇ ಸಾಲಿನಲ್ಲಿ ಅಂದಿನ ಗ್ರಾಮ ಪಂಚಾಯಿತಿ ಆಡಳಿತವು ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಕ್ರೀಡಾಕ್ಷೇತ್ರಕ್ಕೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲು ಚಿಂತಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಥಮವಾಗಿ ಪಟ್ಟಣದ ಹೊರವಲಯದಲ್ಲಿ ಕ್ರೀಡಾಂಗಣಕ್ಕೆ ಜಾಗ ಮೀಸಲಿರಿಸಲು ಕಂದಾಯ ಇಲಾಖೆಗೆ ಕೋರಲಾಗಿತ್ತು. ಇದಕ್ಕೆ ಕಂದಾಯ ಇಲಾಖೆಯು ಪಟ್ಟಣದ ಸರ್ವೆ ನಂ.194 ರಲ್ಲಿದ್ದ 24 ಎಕರೆ ಗೋಮಾಳದಲ್ಲಿ 3 ಎಕರೆ ಪ್ರದೇಶವನ್ನು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಹಂಚಿಕೆ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಇಂದಿಗೂ ಆ ಜಾಗದಲ್ಲಿ ಕ್ರೀಡಾಂಗಣವಾಗಲಿ, ಕ್ರೀಡಾಚಟುವಟಿಕೆಯಾಗಲಿ ನಡೆಯುತ್ತಿಲ್ಲ. ಅಷ್ಟೇ ಅಲ್ಲದೆ ಆ 3 ಎಕರೆ ಪ್ರದೇಶವು ಎಲ್ಲಿದೆ ಎಂಬುದು ಯಾರಿಗೂ ತಿಳಿಯದಾಗಿದೆ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕ್ರೀಡಾಂಗಣ ನಿರ್ಮಾಣದ ವಿಷಯದಲ್ಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದು ಕ್ರೀಡಾ ಆಸಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟ್‌...

ರಾಜಕೀಯ ನಾಯಕರು ಯುವಕರಿಗೆ ಹಲವು ಟೂರ್ನಿಗಳನ್ನು ನಡೆಸಲು ಧನಸಹಾಯ ಮಾಡಿ ಚುನಾವಣಾ ಕಾರ್ಯಕ್ಕೆ ಬಳಸಿಕೊಂಡಿರುವ ಉದಾಹರಣೆಗಳಿವೆ. ಚುನಾವಣೆ ಮುಗಿದ ನಂತರ ಕ್ರೀಡಾಂಗಣ ನಿರ್ಮಾಣ ನನೆಗುದಿಗೆ ಬೀಳುತ್ತದೆ.

ಮಧು, ಕ್ರೀಡಾಪಟು

ಪಟ್ಟಣದಲ್ಲಿ ವಾಲಿಬಾಲ್ ಕ್ರೀಡಾಪಟುಗಳು ಹೆಚ್ಚಿದ್ದು, ಕ್ರೀಡಾಪಟುಗಳು ಹಾಗೂ ದಾನಿಗಳಿಂದ ಹಣ ಸಂಗ್ರಹಿಸಿ ಸುಸಜ್ಜಿತ ವಾಲಿಬಾಲ್ ಕೋರ್ಟ್ ನಿರ್ಮಿಸಿ ಫ್ಲಡ್‌ಲೈಟ್‌ಗಳನ್ನು ಹಾಕಿಸಿದ್ದೇವೆ.

ತ್ರಿಶೂಲ್‍ಕುಮಾರ್, ವಾಲಿಬಾಲ್ ಅಸೋಸಿಯೇಷನ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT