ಹಿರಿಯೂರು: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟವನ್ನು ತಡೆಯುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ಪರಿವರ್ತನಾ ವಾದ) ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕಿನ ಬಹುತೇಕ ಹಳ್ಳಿಗಳು ಅಕ್ರಮ ಮದ್ಯ ಮಾರಾಟದ ಅಡ್ಡೆಗಳಾಗಿವೆ. ನಗರದ ಮದ್ಯದ ಅಂಗಡಿಗಳಿಂದ ನಿರಂತರವಾಗಿ ಮದ್ಯ ಸರಬರಾಜು ಆಗುತ್ತಿದೆ. ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವರನ್ನು ಹಳ್ಳಿಯ ಹೆಣ್ಣುಮಕ್ಕಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಕೈಗೆ ಅವರು ಸಿಗದಿರುವುದು ಅಚ್ಚರಿ ಮೂಡಿಸಿದೆ. ಈ ವಿಚಾರದಲ್ಲಿ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.
ಕುಡಿತದ ಚಟಕ್ಕೆ ಬಿದ್ದು, ಎಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಮಹಿಳೆಯರು ನೆಮ್ಮದಿಯ ಬದುಕು ನಡೆಸಲು ಅಕ್ರಮ ಮದ್ಯ ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ತಡೆಯಬೇಕು. ಹಿರಿಯೂರು ನಗರದಲ್ಲಿ ಮದ್ಯದ ಅಂಗಡಿಗಳನ್ನು ಇಲಾಖೆ ಸೂಚಿಸಿರುವ ಸಮಯಕ್ಕೆ ತೆರೆಯುವಂತೆ ಕ್ರಮ ವಹಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಕೆ. ಮಂಜುನಾಥ ಹೆಗ್ಗೆರೆ, ತಿಪ್ಪೇಸ್ವಾಮಿ, ಕಸವನಹಳ್ಳಿ ರಮೇಶ್, ಎಚ್.ಎನ್. ಕೃಷ್ಣಮೂರ್ತಿ ಕಣುಮಪ್ಪ, ಟಿ. ಹನುಮಂತಪ್ಪ, ದುರುಗೇಶ್, ಮಹೇಶ್, ಕೆ.ಆರ್. ರಘುನಾಥ್, ಮಾರುತಿ ಪಾಲ್ಗೊಂಡಿದ್ದರು.
ಬೇಡಿಕೆಗಳ ಮನವಿಯನ್ನು ತಹಶೀಲ್ದಾರ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದರು.