ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಶ್ರೀಗಂಧ

ಸರ್ಕಾರಕ್ಕೆ ಶ್ರೀಗಂಧ ಬೆಳೆಗಾರರ ಒತ್ತಾಯ; ಅರಣ್ಯ ಇಲಾಖೆ ನಿರ್ಬಂಧಕ್ಕೆ ಕಿಡಿ
Last Updated 4 ಡಿಸೆಂಬರ್ 2021, 2:37 IST
ಅಕ್ಷರ ಗಾತ್ರ

ಚಿತ್ರದುರ್ಗ: ಶ್ರೀಗಂಧ ರಕ್ಷಣೆ ಮತ್ತು ಮಾರಾಟಕ್ಕೆ ಅರಣ್ಯ ಇಲಾಖೆ ಹಲವು ನಿರ್ಬಂಧ ವಿಧಿಸಿರುವುದರಿಂದ ರೈತರು ಬೆಳೆದಿರುವ ಶ್ರೀಗಂಧವನ್ನು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಒಕ್ಕೂಟ ಮನವಿ ಮಾಡಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ ಒಕ್ಕೂಟದ ಸದಸ್ಯರು ಶ್ರೀಗಂಧ ಸಂರಕ್ಷಣೆಯಲ್ಲಿ ಎದುರಾಗಿರುವ ತೊಡಕುಗಳಿಗೆ ಸಂಬಂಧಿಸಿ
ದಂತೆ ಅಳಲು ತೋಡಿಕೊಂಡರು. ಸರ್ಕಾರ ಸರಿಯಾದ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಿದರು.

‘ಕೃಷಿ ಅರಣ್ಯೀಕರಣ ಯೋಜನೆಯಡಿ ಸರ್ಕಾರ 2001ರಿಂದ ಶ್ರೀಗಂಧ ಬೆಳೆಯಲು ರೈತರನ್ನು ಪ್ರೋತ್ಸಾಹಿಸಿತು. ಬಹುಬೇಗ ಶ್ರೀಮಂತರಾಗಬಹುದು ಎಂಬ ಆಸೆಯಿಂದ ರೈತರು ಇತ್ತ ಒಲವು ತೋರಿದರು. ಎರಡು ದಶಕ ಕಳೆದರೂ ಸರ್ಕಾರ ಇನ್ನೂ ನಿದ್ರಾವಸ್ಥೆಯಲ್ಲಿದೆ. 15 ವರ್ಷಗಳಿಂದ ರೈತರು ಹಾಕಿದ ಶ್ರಮ ಪೋಲಾಗುವ ಅಪಾಯ ಎದುರಾಗಿದೆ’ ಎಂದು ಶ್ರೀಗಂಧ ಬೆಳೆಗಾರರ ಒಕ್ಕೂಟದ ರಾಜ್ಯ ಸಂಚಾಲಕ ಉಪ್ಪರಿಗೇನಹಳ್ಳಿ ದಿನೇಶ್ ಬೇಸರ ವ್ಯಕ್ತಪಡಿಸಿದರು.

‘ಶ್ರೀಗಂಧ ಕೃಷಿ ಮಾಡಿದ ರೈತರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗಿದೆ. ಒಂದೂವರೆ ದಶಕದಿಂದ ಕಾಪಾಡಿಕೊಂಡು ಬಂದ ಶ್ರೀಗಂಧದ ಕಳವು ಹೆಚ್ಚಾಗಿದೆ. ಬೆಳೆಗಾರರ ಜೀವನ ಅಪಾಯಕ್ಕೆ ಸಿಲುಕಿದೆ. ಸರ್ಕಾರ ರೂಪಿಸಿದ ನೀತಿಗಳು ಪ್ರಸಕ್ತ ಕಾಲಕ್ಕೆ ಅನ್ವಯವಾಗುತ್ತಿಲ್ಲ. ಮಾರುಕಟ್ಟೆ ನೀತಿಗಳನ್ನು ಬದಲಿಸಿ ರೈತರಿಗೆ ಪ್ರೋತ್ಸಾಹ ನೀಡುವಂತೆ ಸಲ್ಲಿಸಿದ ಕೋರಿಕೆಗೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

‘ರಾಷ್ಟ್ರೀಯ ಹೆದ್ದಾರಿ 206 ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ 22 ಜನ ರೈತರ ಶ್ರೀಗಂಧದ ತೋಟಗಳನ್ನು ರಸ್ತೆ ವಿಸ್ತರಣೆಗೆ ಹನನ ಮಾಡಲಾಗುತ್ತಿದೆ. ಭೂಸ್ವಾಧೀನ ಮಾಡುವಾಗ ಎಲ್ಲ ರೈತರಿಗೆ ನ್ಯಾಯಯುತ ಪರಿಹಾರ ನಿಗದಿಪಡಿಸಬೇಕು. ಶ್ರೀಗಂಧವನ್ನು ತೋಟಗಾರಿಕೆ ಬೆಳೆ ಎಂದು ಪರಿಗಣಿಸಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪಿಟ್ಲಾಲಿ ರಾಮಣ್ಣ ಮಾತನಾಡಿ, ‘ಶ್ರೀಗಂಧ ಬೆಳೆಗಾರರ ಉತ್ಪಾಧಕ ಸಂಸ್ಥೆ ಸ್ಥಾಪಿಸಬೇಕು. ಸಂಶೋಧನೆ, ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಶ್ರೀಗಂಧ ಅತ್ಯಂತ ದುಬಾರಿ ಮರವಾಗಿದ್ದು, ವಿಮೆ ಸೌಲಭ್ಯ ಕಲ್ಪಿಸಬೇಕು. ಕಳವು ಅಥವಾ ನಷ್ಟ ಸಂಭವಿಸಿದಾಗ ರೈತರಿಗೆ ಪರಿಹಾರ ವಿತರಿಸಬೇಕು’ ಎಂದು ಒತ್ತಾಯಿಸಿದರು.

ಶ್ರೀಗಂಧ ಬೆಳೆಗಾರರಾದ ಕಾಂತರಾಜ್, ಅರುಣ್, ಹೆಂಜಾರಪ್ಪ, ನಳಿನಾ, ಎಚ್.ಟಿ. ಚಂದ್ರಶೇಖರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT