ಸಿರಿಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾದಿಗ ಸಮುದಾಯವನ್ನು ನಿರ್ಲಕ್ಷಿಸಿರುವ ಕಾರಣ ಒಳಮೀಸಲಾತಿ ಆದೇಶ ಹೊರಡಿಸಲು ತಡ ಮಾಡುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಒಳಮೀಸಲಾತಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ವೈ. ರಾಜಣ್ಣ ಆರೋಪಿಸಿದರು.
ಸಿರಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಿಗ ಸಮುದಾಯದ ವತಿಯಿಂದ ಗುರುವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಶೋಷಿತ ಸಮಾಜಗಳಿಗೆ ಅಗತ್ಯ ಒಳಮೀಸಲಾತಿ ಕಲ್ಪಿಸುವ ಹೊಣೆಗಾರಿಕೆಯನ್ನು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ನೀಡಿದೆ. ಆದರೆ, ರಾಜ್ಯ ಸರ್ಕಾರವು ಮೀನಮೇಷ ಎಣಿಸುತ್ತಿದೆ ಎಂದು ದೂರಿದರು.
ಸರ್ಕಾರವು ನಿಧಾನ ಪ್ರವೃತ್ತಿ ಪ್ರದರ್ಶಿಸಿದರೆ ರಾಜ್ಯದಾದ್ಯಂತ ಹೋರಾಟದ ಕಿಚ್ಚು ಹೆಚ್ಚುತ್ತದೆ ಎಂದು ಎಚ್ಚರಿಸಿದರು.
‘ಬಾಬಾಸಾಹೇಬ್ ಅಂಬೇಡ್ಕರ್ ಅವರು ತೋರಿಸಿದ ದಾರಿಯಲ್ಲಿ ಮಾದಿಗ ಸಮುದಾಯ ನಡೆಯುತ್ತಿದೆ. ಶಾಂತಿ ಸಹನೆಯನ್ನು ಮೈಗೂಡಿಸಿಕೊಂಡು ಶತಮಾನಗಳಿಂದ ನೊಂದಿದ್ದೇವೆ. ಸುಪ್ರೀಂ ತೀರ್ಪು ನಮ್ಮ ಸಮುದಾಯಗಳಿಗೆ ಬೆಳಕಾಗಿದೆ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾದಿಗ ಸಮುದಾಯದ ಮುಖಂಡ ಸೀಗೇಹಳ್ಳಿಯ ರಾಜು ತಿಳಿಸಿದರು.