ಸೋಮವಾರ, ಮಾರ್ಚ್ 20, 2023
24 °C
ಗ್ರಾಮೀಣ ಭಾಗದ ಜನರ ಬೇಡಿಕೆಗೆ ಸ್ವಾಮೀಜಿ ಮನ್ನಣೆ

ಭರಮಸಾಗರದಲ್ಲಿ ಮುಂದಿನ ತರಳಬಾಳು ಹುಣ್ಣಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭರಮಸಾಗರ: ಚಿತ್ರದುರ್ಗ ತಾಲ್ಲೂಕು ಭರಮಸಾಗರದಲ್ಲಿ ಮುಂದಿನ ವರ್ಷ 76ನೇ ತರಳಬಾಳು ಹುಣ್ಣಿಮೆ ನಡೆಯಲಿದೆ.

ತರಳಬಾಳು ಹುಣ್ಣಿಮೆ ಆಯೋಜಿಸಲು ಅವಕಾಶ ನೀಡುವಂತೆ ರಾಜ್ಯದ ವಿವಿಧ ಕಡೆಯಿಂದ ಬಂದ ಮನವಿ ಪರಿಶೀಲಿಸಿ ತರಳಬಾಳು ಹುಣ್ಣಿಮೆಯ ಕೊನೆಯಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮುಂದಿನ ವರ್ಷ ತರಳಬಾಳು ಹುಣ್ಣಿಮೆ ನಡೆಯುವ ಸ್ಥಳದ ಬಗ್ಗೆ ಮಾಹಿತಿ ನೀಡುವುದು ವಾಡಿಕೆ. ಅದರಂತೆ ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಂದಿನ ತರಳಬಾಳು ಹುಣ್ಣಿಮೆ ಮಹೋತ್ಸವ ಸಿರಿಗೆರೆ ಸಮೀಪದ ಭರಮಸಾಗರದಲ್ಲಿ ನಡೆಯಲಿದೆ ಎಂದು ಪ್ರಕಟಿಸಿದರು.

ಸಿರಿಗೆರೆಯಲ್ಲಿ 1949ರಲ್ಲಿ ಲಿಂ. ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಪ್ರಥಮ ಬಾರಿಗೆ ತರಳಬಾಳು ಹುಣ್ಣಿಮೆ ಆರಂಭವಾಯಿತು. 1952ರಲ್ಲಿ ಜೆ.ಎಂ. ಇಮಾಮ್‌ಸಾಬ್ ಅಧ್ಯಕ್ಷತೆಯಲ್ಲಿ ಜಗಳೂರಿನಲ್ಲಿ ನಡೆಯಿತು. ಅಲ್ಲಿಂದ ಇಲ್ಲಿವರೆಗೆ ರಾಜ್ಯದ ವಿವಿಧ ಊರುಗಳಲ್ಲಿ 75 ತರಳಬಾಳು ಹುಣ್ಣಿಮೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಸಾಸಲುಹಳ್ಳ (ತರಳಬಾಳು ವೃತ್ತ), ಭೀಮಸಮುದ್ರ, ದಾವಣಗೆರೆ ಪ್ರತ್ಯೇಕ ಜಿಲ್ಲೆ ಆಗುವ ಮೊದಲು ಜಗಳೂರು, ಹರಿಹರ, ದಾವಣಗೆರೆ, ಆನಗೋಡಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮ ನಡೆದಿದೆ.

ಭರಮಸಾಗರ ಏತನೀರಾವರಿ ಯೋಜನೆ ಯಶಸ್ಸಿನಲ್ಲಿ ಸಿರಿಗೆರೆ ಶ್ರೀಗಳ ಪಾತ್ರ ಪ್ರಮುಖವಾಗಿದೆ. ಈಗ ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲು ಸ್ವಾಮೀಜಿ ಅನುಮತಿ ನೀಡಿರುವುದರಿಂದ ಗ್ರಾಮೀಣ ಭಾಗದ ಜನರ ಬಹುದಿನದ ಬಯಕೆ ಈಡೇರಿದಂತಾಗಿದೆ ಎಂದು ತರಳಬಾಳು ವಿದ್ಯಾಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.