ಮಂಗಳವಾರ, ನವೆಂಬರ್ 12, 2019
20 °C

ಚಿತ್ರದುರ್ಗ: ಪ್ರಯೋಗಾರ್ಥ ‘ಫಾಸ್ಟ್ಯಾಗ್‌’ಗೆ ಚಾಲನೆ

Published:
Updated:
Prajavani

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಕೇಂದ್ರದ ಲೇನ್‌ಗಳನ್ನು ‘ಫಾಸ್ಟ್ಯಾಗ್‌’ಗಳಾಗಿ ಪರಿವರ್ತಿಸುತ್ತಿರುವ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಪ್ರಾಧಿಕಾರ, ಗುಯಿಲಾಳು ಟೋಲ್‌ ಕೇಂದ್ರದಲ್ಲಿ ಪ್ರಯೋಗಾರ್ಥ ಸೇವೆಗೆ ಶುಕ್ರವಾರ ಚಾಲನೆ ನೀಡಿತು.

ಡಿ.1ರಿಂದ ದೇಶದ ಎಲ್ಲ ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಕೇಂದ್ರದಲ್ಲಿ ‘ಫಾಸ್ಟ್ಯಾಗ್‌’ ಅನುಷ್ಠಾನಗೊಳಿಸಲಾಗುತ್ತಿದೆ. ಟೋಲ್‌ ಕೇಂದ್ರಗಳಲ್ಲಿ ವಾಹನ ದಟ್ಟಣೆ ತಪ್ಪಿಸಲು ಹಾಗೂ ನಗದು ರಹಿತ ವಹಿವಾಟು ಉತ್ತೇಜಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಗುಯಿಲಾಳು ಟೋಲ್‌ ಕೇಂದ್ರದಲ್ಲಿ ಒಂದು ತಿಂಗಳು ಮೊದಲೇ ಇದು ಅನುಷ್ಠಾನಗೊಳ್ಳುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಚಿತ್ರದುರ್ಗ ವಿಭಾಗದ ನಿರ್ದೇಶಕ ಡಿ.ಎಸ್‌.ನಾಯ್ಡು, ಎಂ.ಕೆ.ಜಿ.ಸ್ವಾಮಿ, ಕೆ.ಎನ್‌.ಮೂರ್ತಿ ಅವರು ಗುಯಿಲಾಳು ಟೋಲ್‌ ಕೇಂದ್ರಕ್ಕೆ ಭೇಟಿ ನೀಡಿ ಪ್ರಯೋಗಾರ್ಥ ಸೇವೆಗೆ ಚಾಲನೆ ನೀಡಿದರು. ಟೋಲ್‌ ಕೇಂದ್ರವನ್ನು ಪರಿಶೀಲಿಸಿ ವಾಹನ ಚಾಲಕರು ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಿದರು.

ಈ ಟೋಲ್‌ ಕೇಂದ್ರದಲ್ಲಿರುವ ಐದು ಲೇನ್‌ಗಳು ಡಿ.1ರಿಂದ ‘ಫಾಸ್ಟ್ಯಾಗ್‌’ಗಳಾಗಿ ಪರಿವರ್ತನೆ ಹೊಂದಲಿವೆ. ಒಂದು ಲೇನ್‌ನಲ್ಲಿ ಮಾತ್ರ ಹಣ ಪಾವತಿಗೆ ಅವಕಾಶ ಕಲ್ಪಿಸಲಾಗುತ್ತದೆ. ಬಸ್‌, ಲಾರಿ, ಕಾರು ಸೇರಿದಂತೆ ಎಲ್ಲ ವಾಹನಗಳು ‘ಫಾಸ್ಟ್ಯಾಗ್‌’ ಹೊಂದುವುದು ಕಡ್ಡಾಯವಾಗಲಿದೆ. ಇಲ್ಲವಾದರೆ ಎರಡು ಪಟ್ಟು ಟೋಲ್‌ ಕಟ್ಟಬೇಕಾಗುತ್ತದೆ.

‘ಫಾಸ್‌ಟ್ಯಾಗ್‌’ ಬಳಕೆಗೆ ವಾಹನ ಮಾಲೀಕರು ಬ್ಯಾಂಕಿನಲ್ಲಿ ಖಾತೆ ತೆರೆದು, ಹಣ ತುಂಬಬೇಕು. ರೇಡಿಯೊ ತರಾಂಗಂತರ ಒಳಗೊಂಡ ಫಾಸ್‌ಟ್ಯಾಗ್‌ ಸ್ಟಿಕ್ಕರ್‌ ಅನ್ನು ವಾಹನದ ಮುಂಬದಿಯ ಗಾಜಿನ ಮೇಲೆ ಅಂಟಿಸಬೇಕು. ಈ ಸ್ಟಿಕ್ಕರ್‌ ಇರುವ ವಾಹನ ಟೋಲ್‌ ಕೇಂದ್ರ ಪ್ರವೇಶಿಸಿದಾಗ ನಿಗದಿತ ಖಾತೆಯಿಂದ ಹಣ ಕಡಿತವಾಗುತ್ತದೆ. ಈ ವ್ಯವಸ್ಥೆ 2016ರಲೇ ಜಾರಿಗೆ ಬಂದಿತ್ತು. ಆದರೆ, ಇದು ಕಡ್ಡಾಯವಾಗಿರಲಿಲ್ಲ.

ಪ್ರತಿಕ್ರಿಯಿಸಿ (+)