ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ತಮಟೆ ಚಳವಳಿ; ಎದ್ದೇಳು ಜನ ಸೇವಕ ಹೋರಾಟಕ್ಕೆ ಚಾಲನೆ
Published : 29 ಆಗಸ್ಟ್ 2024, 15:55 IST
Last Updated : 29 ಆಗಸ್ಟ್ 2024, 15:55 IST
ಫಾಲೋ ಮಾಡಿ
Comments

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿರುವ ‘ಎದ್ದೇಳು ಜನ ಸೇವಕ ಹೋರಾಟ’ಕ್ಕೆ ಗುರುವಾರ ತಮಟೆ ಚಳವಳಿ ಮೂಲಕ ಚಾಲನೆ ನೀಡಲಾಯಿತು.

ನಗರದ ಜೆಸಿಆರ್ ಬಡಾವಣೆಯಲ್ಲಿರುವ ಸಂಸದ ಗೋವಿಂದ ಕಾರಜೋಳ ಅವರ ನಿವಾಸದ ಮುಂದೆ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ನೇತೃತ್ವದಲ್ಲಿ ಜಮಾಯಿಸಿದ ಹೋರಾಟಗಾರರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆ 2007-08ರಲ್ಲಿ ಆರಂಭವಾಗಿದ್ದು, ರಾಜ್ಯ ಸರ್ಕಾರ ಈವರೆಗೂ ₹ 9,700 ಕೋಟಿ ವ್ಯಯಿಸಿದೆ. ಆದರೆ, 2014ರಲ್ಲಿ ಆರಂಭವಾದ ಎತ್ತಿನಹೊಳೆ ಯೋಜನೆಗೆ ₹ 15,900 ಕೋಟಿ ವ್ಯಯಿಸಿದೆ. ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವುದರ ಹಿಂದೆ ಇರುವ ರಾಜಕೀಯ ಇಚ್ಛಾಶಕ್ತಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳ ನಿರ್ಲಕ್ಷ್ಯತನ, ರಾಜ್ಯ ಸರ್ಕಾರದ ಉದಾಸೀನ ಮನೋಭಾವದಿಂದಾಗಿ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಜಿಲ್ಲೆಯ ಜನರು ದಂಗೆ ಏಳುವ ಮುನ್ನ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಅಬ್ಬಿನಹೊಳಲು ಬಳಿ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಈವರೆಗೂ ಸಾಧ್ಯವಾಗಿಲ್ಲ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮೂರು ತಿಂಗಳ ಹಿಂದೆ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದ್ದರು. ಆದರೆ, ₹ 2,000 ಕೋಟಿ ಬಿಲ್‌ ಬಾಕಿ ಇರುವುದರಿಂದ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಗುತ್ತಿಗೆದಾರರನ್ನು ಉಳಿಸಿಕೊಳ್ಳುವ ಪ್ರಯತ್ನ ಕಾಣಿಸುತ್ತಿಲ್ಲ. ಅವರು ಕೆಲಸ ನಿಲ್ಲಿಸಿದಲ್ಲಿ ಯೋಜನೆಗೆ ಮತ್ತಷ್ಟು ಹಿನ್ನಡೆಯಾಗುತ್ತದೆ. ಕಾಮಗಾರಿ ಆರಂಭವಾಗಿ 17 ವರ್ಷ ಕಳೆದರೂ ಈವರೆಗೂ ಪೂರ್ಣಗೊಂಡಿಲ್ಲ. ಜಿಲ್ಲೆಯ ಜನರ ತಾಳ್ಮೆ ಪರೀಕ್ಷಿಸಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ. ಸುಳ್ಳು ಭರವಸೆಯಲ್ಲಿಯೇ ದಿನ ದೂಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಲು ಯಾರಿಗೂ ಆಸಕ್ತಿ ಇಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಪಟ್ಟು ಹಿಡಿದರು.

ಪ್ರತಿಭಟನಕಾರರ ಅಹವಾಲು ಆಲಿಸಿದ ಸಂಸದ ಗೋವಿಂದ ಎಂ.ಕಾರಜೋಳ, ‘ಭದ್ರಾ ಮೇಲ್ದಂಡೆಗೆ ಕೇಂದ್ರ ಬಜೆಟ್‌ನಲ್ಲಿ ಅನುದಾನ ಘೋಷಿಸಲಾಗಿದೆ. ಅನುದಾನ ಪಡೆಯಲು ಪ್ರತ್ಯೇಕ ಖಾತೆ ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಕೇಂದ್ರ ಸಚಿವರ ಜೊತೆ ಮಾತನಾಡಿ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗುತ್ತಿಗೆದಾರರ ಬಾಕಿ ಹಣ ಪಾವತಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದರು.

‘ಭದ್ರಾ ಮೇಲ್ದಂಡೆಗೆ ಈವರೆಗೂ ₹ 9,500 ಕೋಟಿ ಖರ್ಚಾಗಿದ್ದು, ಇದರಲ್ಲಿ ₹ 5,500 ಕೋಟಿ ದೊಡ್ಡ ಮೊತ್ತವನ್ನು ಬಿಜೆಪಿ ಸರ್ಕಾರ ನೀಡಿದೆ. ಉಳಿದ ಸರ್ಕಾರಗಳು ಬದ್ಧತೆ ಪ್ರದರ್ಶಿಸಿಲ್ಲ’ ಎಂದು ದೂರಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್‌.ಧನಂಜಯ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಕಾರ್ಯಾಧ್ಯಕ್ಷ ಹೊರಕೇರಪ್ಪ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್‌, ಕರುನಾಡು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಸುರೇಶ್ ಬಾಬು, ಶಿವರುದ್ರಪ್ಪ, ದೊಡ್ಡಉಳ್ಳಾರ್ತಿ ಕರಿಯಣ್ಣ, ಚೇತನ ಯಳನಾಡು, ತಿಪ್ಪೇಸ್ವಾಮಿ, ಸಿದ್ದೇಶ್‌, ಇಸಾಮುದ್ರ ಪ್ರಭು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT