ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣವೇ ಗುರಿ ಆಗಿದ್ದರೆ ಅದಾನಿ, ಅಂಬಾನಿ ಸಾಲಿನಲ್ಲಿ ಇರುತ್ತಿದ್ದೆ: ಜನಾರ್ದನ ರೆಡ್ಡಿ

Last Updated 5 ಫೆಬ್ರುವರಿ 2023, 6:26 IST
ಅಕ್ಷರ ಗಾತ್ರ

ಹಿರಿಯೂರು: ‘ಬೇರೆಯವರಂತೆ ಕುತಂತ್ರದ ರಾಜಕೀಯ ಮಾಡಲಿಲ್ಲ. ರೆಡ್ಡಿ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗುತ್ತಾನೆ ಎಂದು ಬಂಧಿಸಿ 12 ವರ್ಷ ಜೈಲಿನಲ್ಲಿ ಇಟ್ಟಿದ್ದರು. ಯಾವುದೇ ಸರ್ಕಾರಿ ಜಮೀನು, ಜಾಗ ಕಬಳಿಸಿಲ್ಲ. ನಮ್ಮವರೇ ನನ್ನನ್ನು ಬಂಧನದಲ್ಲಿ ಇರುವಂತೆ ಮಾಡಿ, ರಾಜಕೀಯವಾಗಿ ತುಳಿಯಲು ಆರಂಭಿಸಿದರು’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಶನಿವಾರ ಪಕ್ಷದಿಂದ ಏರ್ಪಡಿಸಿದ್ದ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಉದ್ಯಮದಲ್ಲಿ ತೊಡಗಿದ್ದೆ. ತಾಯಿ ಸುಷ್ಮಾ ಸ್ವರಾಜ್ ಅವರಿಗೋಸ್ಕರ ರಾಜಕೀಯ ಪ್ರವೇಶಿಸಿದ್ದೆ. ಹಣ ಮಾಡುವುದೇ ಗುರಿಯಲ್ಲ. ಉದ್ಯಮದಲ್ಲಿ ಮುಂದುವರಿದಿದ್ದರೆ ಇಂದು ಆದಾನಿ, ಅಂಬಾನಿ ಸಾಲಿನಲ್ಲಿ ಇರುತ್ತಿದ್ದೆ. ಆದರೆ ನಮ್ಮವರೇ ನನಗೆ ಮೋಸ ಮಾಡಿದರು. ಸ್ವಂತ ಊರಿನಲ್ಲಿ ಇರಲು ಅವಕಾಶ ಕೊಡಲಿಲ್ಲ. ಜೊತೆಯಲ್ಲಿದ್ದವರು ಮೋಸ ಮಾಡಿದರು. ಇದಕ್ಕೆಲ್ಲ ಉತ್ತರ ಕೊಡಬೇಕು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಲಾಗಿದೆ’ ಎಂದರು.

‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹಿರಿಯೂರನ್ನು ಗುಡಿಸಲು ಮುಕ್ತ ತಾಲ್ಲೂಕು ಮಾಡುತ್ತೇನೆ. ವಾಣಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತೇನೆ. ಮಹಿಳೆಯರ ಅಭಿವೃದ್ಧಿ, ಯುವಕ ಯುವತಿಯರಿಗೆ ಉದ್ಯೋಗ ಕೊಡಿಸುವೆ. ಈ ಕ್ಷೇತ್ರದ ಪಕ್ಷದ ಅಭ್ಯರ್ಥಿಯಾಗಿ ಗನ್ನಾಯಕನಹಳ್ಳಿ ಎಚ್. ಮಹೇಶ್ ಅವರನ್ನು ಘೋಷಿಸಲಾಗಿದ್ದು, ಪಕ್ಷಕ್ಕೆ ಬಲ ತುಂಬಿ’ ಎಂದು ಮನವಿ ಮಾಡಿದರು.

‘ಜನಾರ್ದನ ರೆಡ್ಡಿಯವರ ಬಗ್ಗೆ ಯಾರು, ಏನೇ ಮಾತಾಡಿದರೂ, ಆರೋಪಿಸಿದರೂ ಅವರು ಪುಟವಿಟ್ಟ ವಜ್ರ. ಅವರನ್ನು ರಾಜಕೀಯ ನಾಯಕ ಅನ್ನುವುದಕ್ಕಿಂತ ಉತ್ತಮ ಮನಸ್ಸಿನ ವ್ಯಕ್ತಿ ಎನ್ನುವುದು ಸೂಕ್ತ. ನಾವು ಅನೇಕ ಕಷ್ಟಗಳನ್ನು ಎದುರಿಸಿ ಬಂದಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಸವಣ್ಣನವರ ತತ್ವಗಳ ಆಧಾರದ ಮೇಲೆ ಕೆ.ಆರ್.ಪಿ. ಪಕ್ಷ ಸ್ಥಾಪಿಸಿದ್ದೇವೆ. ಒಮ್ಮೆ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿ’ ಎಂದು ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾಲಕ್ಷ್ಮಿ ಮನವಿ ಮಾಡಿದರು.

‘ರೆಡ್ಡಿ ಅವರನ್ನು ತುಳಿಯಲು ಯತ್ನಿಸಿದಷ್ಟು ಛಲದ ವ್ಯಕ್ತಿಯಾಗಿರುವ ಅವರು ಸಿಡಿದೆದ್ದು ಮೇಲೆ ಬರುತ್ತಾರೆ. ಆಸೆ–ಆಮಿಷಗಳಿಗೆ ಬಗ್ಗದ ನಾಯಕ. ಹಿರಿಯೂರು ಕ್ಷೇತ್ರವನ್ನು 40 ವರ್ಷ ಆಳಿದ ನಾಯಕರು ಜನರ ಉದ್ಧಾರಕ್ಕೆ ಶ್ರಮಿಸಲಿಲ್ಲ. ಮತದ ಮಾರಾಟವನ್ನು ಈ ಬಾರಿಯ ಚುನಾವಣೆಯಲ್ಲಿ ತಪ್ಪಿಸಬೇಕು. ವಲಸಿಗರ ಆಮಿಷಗಳಿಗೆ ಕ್ಷೇತ್ರದ ಮತದಾರರು ಬಲಿಯಾಗಬಾರದು. ಸ್ಥಳೀಯರಿಗೆ ಆದ್ಯತೆ ನೀಡಿ’ ಎಂದು ಪಕ್ಷದ ಅಭ್ಯರ್ಥಿ ಎಚ್. ಮಹೇಶ್ ಕೋರಿದರು.

ದಮ್ಮೂರು ಶೇಖರ್, ಮೆಹಫಾಜ್ ಆಲಿಖಾನ್, ಎಚ್. ರಾಜಶೇಖರ ಯ್ಯ, ಬಿ. ತಿಪ್ಪೇಸ್ವಾಮಿ, ವೀರೇಂದ್ರ, ನಿವೃತ್ತ ಆರ್‌ಐ ಶಿವಬಸಪ್ಪ, ಮೇಟಿಕುರ್ಕೆ ಕರಿಯಣ್ಣ, ವೆಂಕಟೇಶ್, ಹೇಮಲತಾ, ನರೇಂದ್ರ ಇದ್ದರು.

40 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧೆ

ಹಿರಿಯೂರು: ‘2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವಂತಹ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. 40 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧೆ ಮಾಡಲಿದೆ. ನಾನು ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷ ಘೋಷಣೆ ಆದ ದಿನದಿಂದ ಬಹುತೇಕರು ಪ್ರೀತಿ ತೋರಿಸಿದ್ದಾರೆ. ಸ್ಥಳೀಯ ಅಭ್ಯರ್ಥಿ ಮಹೇಶ್ ನೇತೃತ್ವದಲ್ಲಿ ಉತ್ತಮ ಬಹಿರಂಗ ಸಮಾವೇಶ ನಡೆದಿದೆ. ನನ್ನ ಕೆಲಸ ಮಾಡುತ್ತಿದ್ದೇನೆ. ಯಾರನ್ನೂ ಕಾಯುತ್ತ ಕುಳಿತಿಲ್ಲ. ಭಗವಂತನ ಆಶೀರ್ವಾದದಿಂದ ಜನರು ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಬರುತ್ತಿದ್ದಾರೆ. 30 ಕ್ಷೇತ್ರಗಳಲ್ಲಿ ಇದೇ ಮಾದರಿ ಸಭೆ ನಡೆಯುತ್ತಿವೆ’ ಎಂದರು.

‘ಹಿಂದೂ- ಮುಸ್ಲಿಂ ಭೇದ ಮರೆತು ಜನರು ಪಕ್ಷಕ್ಕೆ ಬರುತ್ತಿದ್ದಾರೆ. ಯಾರ ಮುಲಾಜಿಗೂ ನಾನಿಲ್ಲ, ಯಾರನ್ನೂ ಕರೆದಿಲ್ಲ’ ಎಂದು ಹೇಳಿದರು.

ಶ್ರೀರಾಮಲು ಅವರು ಮೊಳಕಾಲ್ಮುರು ಬಿಟ್ಟು ಬಳ್ಳಾರಿಯಲ್ಲಿ ಸ್ಪರ್ಧಿಸಲಿದ್ದಾರೆ ಅವರ ವಿರುದ್ಧ ಅಭ್ಯರ್ಥಿ ಹಾಕುತ್ತಿರಾ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ರಾಮುಲು ಹಾಗೂ ನನ್ನ ಸ್ನೇಹ ಬೇರೆ. ಅವರು ನನ್ನ ಜತೆಗೆ ಬರಬೇಕು ಎಂಬ ಅಪೇಕ್ಷೆ ಇಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT