ಬುಧವಾರ, ನವೆಂಬರ್ 25, 2020
24 °C

ಸ್ತ್ರೀಯರಿಗಿಲ್ಲದ ಸ್ಥಾನಮಾನ: ಪಂಡಿತಾರಾಧ್ಯ ಶ್ರೀ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ‘ಪುರುಷರಿಗಿಂತ ಸ್ತ್ರೀಯರು ಎಲ್ಲ ಕ್ಷೇತ್ರಗಳಲ್ಲೂ ಅದ್ಭುತ ಸಾಧನೆ ಮಾಡಿದ್ದಾರೆ. ಆದರೆ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಸ್ತ್ರೀಯರಿಗೆ ಪುರುಷರಿಗಿರುವ ಸ್ಥಾನಮಾನಗಳು ಇಲ್ಲದೇ ಇರುವುದು ವಿಷಾದನೀಯ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದಲ್ಲಿ ಶನಿವಾರ ಬೆಳಿಗ್ಗೆ ನಡೆದ ಚಿಂತನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

‘12ನೇ ಶತಮಾನದಲ್ಲಿ ಶರಣರು ಗಂಡು-ಹೆಣ್ಣು ಎಂಬ ಅಂತರವನ್ನು ನೀಗಿ ಇಬ್ಬರೂ ಸಮಾನ ಎನ್ನುವುದನ್ನು ಎತ್ತಿಹಿಡಿದರು. ಅನುಭವ ಮಂಟಪದಲ್ಲಿ ಚರ್ಚೆ ಮಾಡಲು ಅವಕಾಶಕೊಟ್ಟರು. ಗಂಡ ತಪ್ಪು ಮಾಡಿದರೆ ಹೆಂಡತಿಯೇ ಎಚ್ಚರಿಸುತ್ತಿದುದು ಆಯ್ದಕ್ಕಿ ಮಾರಯ್ಯ-ಲಕ್ಕಮ್ಮನ ಪ್ರಕರಣದಲ್ಲಿ ಕಂಡುಬರುತ್ತದೆ. ಪುರುಷ ಮತ್ತು ಸ್ತ್ರೀ ಸಮಾಜದ ಎರಡು ಕಣ್ಣುಗಳಿದ್ದಂತೆ. ಪ್ರತಿದಿನ ಕಸಗುಡಿಸುವ ಕೆಲಸ ಮಾಡುತ್ತಿದ್ದ ಸತ್ಯಕ್ಕ ತಾನು ಕಸ ಹೊಡೆಯುವಾಗ ಹೊನ್ನು, ವಸ್ತ್ರಗಳು ಸಿಕ್ಕಿದರೆ, ಅದನ್ನು ನಾನು ಕಸ ಎಂದು ಗುಡಿಸಿಹಾಕುತ್ತೇನೆಯೇ ಹೊರತು ಕೈ ಮುಟ್ಟಿ ಎತ್ತಲಾರೆ ಎನ್ನುವಳು. ಈ ಪ್ರಜ್ಞೆ ಇಂದು ಎಲ್ಲ ಮಹಿಳೆಯರಲ್ಲಿ ಬಂದಲ್ಲಿ ಕಲ್ಯಾಣರಾಜ್ಯ ನಮ್ಮದಾಗಲು ಸಾಧ್ಯ’ ಎಂದು ಸಲಹೆ ನೀಡಿದರು.
‘ಜನಪ್ರತಿನಿಧಿಗಳು ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡರೆ, ಪ್ರಾಮಾಣಿಕತೆಯನ್ನು ಬೆಳೆಸಿಕೊಂಡರೆ ಪ್ರಜೆಗಳು ಪ್ರಾಮಾಣಿಕರಾಗುತ್ತಾರೆ. ಶರಣರು ಎಂದೂ ಪಲಾಯನವಾದಿಗಳಾಗಿರಲಿಲ್ಲ. ಸಮಸ್ಯೆಗಳನ್ನೇ ಸದಾ ಮುಂದು ಮಾಡುವುದಕ್ಕಿಂತ ಅವುಗಳನ್ನು ಪರಿಹಾರ ಮಾಡುವತ್ತ ಆಲೋಚನೆಯನ್ನು ಮಾಡಬೇಕು. ನಮ್ಮೆಲ್ಲರ ಹುಟ್ಟಿನ ಗುಟ್ಟು ಒಂದೇ ಆಗಿರುವುದರಿಂದ ಯಾರಲ್ಲೂ ಜಾತಿ, ಶ್ರೇಷ್ಠ, ಕನಿಷ್ಠ ಹುಡುಕಬಾರದು. ಈ ಕಾರಣದಿಂದಲೇ ಬಸವಣ್ಣನವರು ಲಿಂಗದೀಕ್ಷೆಗೆ ಒತ್ತು ಕೊಟ್ಟದ್ದು. ಆದರೆ ಇಂದು ಆಧುನಿಕ ಜಗತ್ತು ಬಸವಣ್ಣನವರ ನಿಲುವಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜನಪ್ರತಿನಿಧಿಯಾಗಿ ಮಹಿಳೆ’ ಕುರಿತು ಸಾಣೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಚ್‌.ಎಂ. ಶಕುಂತಳಾ ಮಾತನಾಡಿದರು.

ಶಿವಸಂಚಾರದ ನಾಗರಾಜ್ ಸಾಣೇಹಳ್ಳಿ ಮತ್ತು ಸಾಹಿತ್ಯ ರಮೇಶ್ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಿವಮಂತ್ರ ಲೇಖನ ಬರೆಯಲಾಯಿತು. ಅಧ್ಯಾಪಕಿ ಕಾವ್ಯಾ ಕಾರ್ಯಕ್ರಮ ನಡೆಸಿಕೊಟ್ಟರು. ಶಿವಕುಮಾರ ಕಲಾಸಂಘದವರು ‘ಉರಿಲಿಂಗ ಪೆದ್ದಿ’ ನಾಟಕ ಪ್ರದರ್ಶಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.