ಸೋಮವಾರ, ಜನವರಿ 18, 2021
27 °C
ರೈತರು ಮತ್ತು ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ರೈತರ ಆರೋಪ

‘ಬ್ಯಾಂಕ್‌ಗಳಲ್ಲಿ ಕನ್ನಡೇತರ ಸಿಬ್ಬಂದಿ: ಗ್ರಾಹಕರಿಗೆ ಕಿರಿಕಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ‘ನಗರದಲ್ಲಿರುವ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಹಳಷ್ಟು ಸಿಬ್ಬಂದಿಗೆ ಕನ್ನಡ ಬಾರದ ಕಾರಣಕ್ಕೆ ಗ್ರಾಮೀಣ ಪ್ರದೇಶದಿಂದ ಬರುವ ಜನಸಾಮಾನ್ಯರಿಗೆ ತೀವ್ರ ಕಿರಿ ಕಿರಿ ಆಗುತ್ತಿದೆ’ ಎಂದು ರೈತರು ಆರೋಪಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಹಶೀಲ್ದಾರ್ ಸತ್ಯನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ರೈತರು ಮತ್ತು ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಈ ಆರೋಪ ಕೇಳಿ ಬಂದಿತು.

‘ಆರು ತಿಂಗಳ ಒಳಗೆ ಸ್ಥಳೀಯ ಭಾಷೆ ಕಲಿಯಬೇಕು ಎಂದು ಕೇಂದ್ರ ಸರ್ಕಾರದ ನಿರ್ದೇಶನವಿದೆ. ಇಂಗ್ಲಿಷ್‌–ಹಿಂದಿ ಬಾರದವರಂತೂ ಬ್ಯಾಂಕಿಂಗ್ ವ್ಯವಹಾರ ಮಾಡಲು ಪರಿತಪಿಸುತ್ತಾರೆ. ಬ್ಯಾಂಕ್ ವ್ಯವಸ್ಥಾಪಕರು ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದರು.

‘ಸರ್ಕಾರದಿಂದ ಸಾಲಮನ್ನಾ ಕುರಿತು ಬ್ಯಾಂಕ್ ಅಧಿಕಾರಿಗಳು ಸರಿಯಾದ ಮಾಹಿತಿ ತಿಳಿಸುತ್ತಿಲ್ಲ. ಪ್ರಗತಿ ಗ್ರಾಮೀಣ ಬ್ಯಾಂಕ್‌ನವರು ಸಾಲ ಪಾವತಿಸುವಂತೆ ನೋಟಿಸ್ ಮೇಲೆ ನೋಟಿಸ್ ನೀಡಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಸರ್ಕಾರದಿಂದ ಬಂದಿರುವ ಸಬ್ಸಿಡಿ ಹಣ ಮಾತ್ರ ಕೊಡುವ ನೀವು, ಏಕೆ ಸಾಲ ಕೊಡುತ್ತಿಲ್ಲ? ಉದ್ಯೋಗ ಖಾತ್ರಿ ಯೋಜನೆಯಡಿ ಬರುವ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಂಡರೆ ಹೇಗೆ? ಬ್ಯಾಂಕ್‌ಗಳಲ್ಲಿ ಪಾಸ್‌ಬುಕ್ ಎಂಟ್ರಿ ಮಾಡಿಸುವುದಕ್ಕೆ ನೂಕುನುಗ್ಗಲು ಇರುತ್ತದೆ. ಪಾಸ್‌ಬುಕ್ ದಾಖಲು ಮಾಡಿ ಕೊಡುವ ಯಂತ್ರವನ್ನು ಸರಿಪಡಿಸಲು ನಿಮಗೆ ಕಷ್ಟವೇ?’ ಎಂದು ರೈತರು ಪ್ರಶ್ನಿಸಿದರು.

‘ನಾವು ರೈತರನ್ನು ಗೌರವದಿಂದ ನಡೆಸಿಕೊಂಡಿದ್ದೇವೆ. ಕೆಲವರು ಸೊಸೈಟಿಯಲ್ಲಿ ಸಾಲ ತೆಗೆದುಕೊಂಡು, ಬ್ಯಾಂಕಿಗೆ ಬಂದು ಸಾಲಮನ್ನಾ ಬಗ್ಗೆ ಕೇಳ್ತಾರೆ. ಆಧಾರ್ ನಂಬರ್ ಲಿಂಕ್ ಆಗಿರುವುದರಿಂದ ಎರಡು ಕಡೆ ಸಾಲಮನ್ನಾ ಆಗಲು ಸಾಧ್ಯವೇ? ನಾವು ಹಳ್ಳಿಗಳಿಗೆ ಹೋದ್ರೆ, ಯಾಕ್ರೀ ಬಂದಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ. 83 ಜನರಿಗೆ ನೋಟಿಸ್ ನೀಡಿದ್ದು, 10 ಜನ ಮಾತ್ರ ಬಂದು ಉತ್ತರಿಸಿದ್ದಾರೆ. ಉಳಿದವರ ಪೋನ್ ಸ್ವಿಚ್ಡ್‌ ಆಫ್ ಬರುತ್ತದೆ. ನಾವೂ ಮೇಲಧಿಕಾರಿಗಳಿಗೆ ಉತ್ತರ ನೀಡಬೇಕಲ್ಲವೆ?’ ಎಂದು ಮೇಟಿಕುರ್ಕೆ ಬ್ಯಾಂಕ್‌ ಶಾಖೆ ವ್ಯವಸ್ಥಾಪಕ ರಾಜೇಶ್ ಕೇಳಿದರು.

‘ಒಂದೆರಡು ದಿನಗಳಲ್ಲಿ ಲೀಡ್ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ ರೈತರ ಸಮಸ್ಯೆ ಪರಿಹರಿಸಲಾಗುವುದು. ಪರಸ್ಪರ ಹೊಂದಾಣಿಕೆ ಇರಬೇಕು’ ಎಂದು ತಹಶೀಲ್ದಾರ್ ಜಿ.ಎಚ್.ಸತ್ಯನಾರಾಯಣ ತಿಳಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಕಸವನಹಳ್ಳಿ ರಮೇಶ್, ಸಿದ್ದರಾಮಣ್ಣ, ಕಲ್ಪನಾ, ಆಲೂರು ರವೀಂದ್ರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು