ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ನರೇಗಾ ಅಡಿ ಹಣ್ಣಿನ ತೋಟ ನಿರ್ಮಿಸಿದ ರೈತರು

ಚಳ್ಳಕೆರೆ ತಾಲ್ಲೂಕಿನ ವಿವಿಧ ಗ್ರಾಮಗಳ 750 ಎಕರೆ ಪ್ರದೇಶದಲ್ಲಿ ಸೀಬೆ, ದಾಳಿಂಬೆ, ಪಪ್ಪಾಯ, ಹೈಬ್ರೀಡ್‌ ತೆಂಗು
Last Updated 14 ಡಿಸೆಂಬರ್ 2021, 3:42 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ನರೇಗಾ ಯೋಜನೆಯ ಸದ್ಬಳಕೆ ಮಾಡಿಕೊಂಡು ಒಟ್ಟು 750 ಎಕರೆ ಪ್ರದೇಶದಲ್ಲಿ ಸೀಬೆ, ದಾಳಿಂಬೆ, ಪಪ್ಪಾಯ ಮತ್ತು ಹೈಬ್ರೀಡ್‌ ತೆಂಗಿನ ತೋಟವನ್ನು ನಿರ್ಮಿಸಿದ್ದಾರೆ.

ಗಜ್ಜುಗನಹಳ್ಳಿ, ಜೋಗಿಹಟ್ಟಿ, ತೊರೆಕೋಲಮ್ಮನಹಳ್ಳಿ, ಜೋಗಿಹಟ್ಟಿ, ಎನ್.ದೇವರಹಳ್ಳಿ, ನೇರಲಗುಂಟೆ ವರವು ಕಾವಲು ಸೇರಿ ವಿವಿಧ
ಗ್ರಾಮಗಳ ರೈತರು ತೋಟಗಾರಿಕಾ ಇಲಾಖೆಯಲ್ಲಿ ದೊರೆಯುವ ಸಹಾಯಧನದಿಂದ ತಮ್ಮ ಕೊಳವೆಬಾವಿಯಲ್ಲಿ ಲಭ್ಯವಾದ ನೀರಿಗೆ ಡ್ರಿಪ್ ಅಳವಡಿಸಿಕೊಂಡು ಸಾವಯವ ಕೃಷಿ ವಿಧಾನದಲ್ಲಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಮೂಲಕ ತೋಟ ವಿಸ್ತರಣೆ ಹಾಗೂ ಬಯಲುಸೀಮೆಯ ಹಣ್ಣಿನ ಬೆಳೆಗೆ ನರೇಗಾ ಯೋಜನೆ ವರದಾನವಾಗಿದೆ.

10–15 ವರ್ಷಗಳಿಂದ ಈರುಳ್ಳಿ–ಶೇಂಗಾ ಬೆಳೆಗಳಿಗೆ ಅಧಿಕ ಬಂಡವಾಳ ಹಾಕಿ ಕೈ ಸುಟ್ಟುಕೊಂಡ ರೈತರು, ಎರಡು ವರ್ಷಗಳಿಂದ ಸೀಬೆ, ದಾಳಿಂಬೆ, ಪಪ್ಪಾಯ ಮುಂತಾದ ಹಣ್ಣಿನ ಬೆಳೆಯ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬೆಳೆಯಿಂದ ಬಂದ ಆದಾಯದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

‘ಆಂಧ್ರಪ್ರದೇಶ, ತಮಿಳುನಾಡು ಅಣ್ಣಾಮಲೈ ತೋಟಗಾರಿಕಾ ವಿಶ್ವವಿದ್ಯಾಲಯ ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ನರ್ಸರಿಯಿಂದ ಎರಡು ವಿವಿಧ ತಳಿಯ ಸೀಬೆ ಸಸಿಗಳನ್ನು ತಂದಿದ್ದೆವು. ಸಾಗಾಣಿಕೆ ವೆಚ್ಚ ಸೇರಿ ಒಂದು ಸಸಿಗೆ ಕನಿಷ್ಠ ₹30ರಿಂದ ₹40 ವೆಚ್ಚವಾಯಿತು. ಎತ್ತಿನ ಬೇಸಾಯದಿಂದ ಹದಗೊಳಿಸಿದ ಭೂಮಿಯಲ್ಲಿ 6 ಅಡಿ ಅಂತರದಲ್ಲಿ ಒಂದು ಅಡಿ ಆಳ ತೋಡಿದ ಗುಂಡಿಗೆ ಹಸಿರೆಲೆ ಹಾಗೂ ಕೊಟ್ಟಿಗೆ ಗೊಬ್ಬರ ಹಾಕಿದ ನಂತರ ಒಂದೆರಡು ತಿಂಗಳಿಗೆ ಸಸಿ ನಾಟಿ ಮಾಡಬೇಕು. ವಾರಕ್ಕೆ 2 ಬಾರಿ ನೀರು ಹಾಯಿಸಿ ಬೆಳೆ ನಿರ್ವಹಣೆ ಚೆನ್ನಾಗಿ ಮಾಡಬೇಕು’ ಎಂದು ತೊರೆಕೋಲಮ್ಮನಹಳ್ಳಿ ಗ್ರಾಮದ ರೈತ ಎಲ್‍ಐಸಿ ರಾಜಣ್ಣ ವಿವರಿಸಿದರು.

‘ನಾಟಿ ಮಾಡಿದ ಒಂದೆರಡು ವರ್ಷಕ್ಕೆ ಫಲ ಬರುತ್ತದೆ. ಪ್ರಾರಂಭದಲ್ಲಿ ಪ್ರತಿ ಗಿಡ ಕನಿಷ್ಠ 5–6 ಕೆ.ಜಿ. ಹಣ್ಣು ದೊರೆಯುತ್ತದೆ. ಬೆಳೆ ನಿರ್ವಹಣೆ ಸರಿಯಾಗಿದ್ದರೆ ಹಣ್ಣಿನ ಗಾತ್ರ ಹೆಚ್ಚುವುದರ ಜತೆಗೆ ರುಚಿಯಾದ ಹಣ್ಣು ಸಿಗುತ್ತದೆ. ಇದರಿಂದ ಉತ್ತಮ ಆದಾಯವೂ ಸಿಗುತ್ತದೆ’ ಎನ್ನುತ್ತಾರೆ ಅವರು.

‘ಈರುಳ್ಳಿ ಬೆಳೆಯುತ್ತಿದ್ದ ಒಂದು ಎಕರೆ ಪ್ರದೇಶದಲ್ಲಿ ಸೀಬೆಯ 332 ಗಿಡಗಳನ್ನು ಬೆಳೆಸಿದ್ದೇನೆ. ವರ್ಷಕ್ಕೆ 3 ಬಾರಿ ಕಟಾವ್ ಮಾಡುತ್ತೇನೆ. ಇದರಿಂದ ₹ 1.80 ಲಕ್ಷ ಆದಾಯ ಗಳಿಸಿದ್ದೇನೆ’ ಎಂದು ಗಜ್ಜುಗನಹಳ್ಳಿ ಮಂಜಣ್ಣ ಹೇಳಿದರು.

ನರೇಗಾ ಅಡಿ ₹ 25 ಲಕ್ಷ ವೆಚ್ಚ
ಹಣ್ಣಿನ ಬೆಳೆ ಬೆಳೆಯುವ ಆಸಕ್ತ ರೈತರಿಗೆ ನರೇಗಾ ಯೋಜನೆಯಡಿ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗೆ ಶೇಕಡ 90ರಷ್ಟು ಹಾಗೂ ಸಾಮಾನ್ಯ ವರ್ಗದವರಿಗೆ ಶೇಕಡ 45ರಷ್ಟು ಸಹಾಯಧನ ನೀಡಲಾಗುವುದು. ಹಣ್ಣಿನ ಬೆಳೆ ಬೆಳೆಯುವ ವಿಧಾನ, ಬೆಳೆ ನಿರ್ವಹಣೆ, ತಾಂತ್ರಿಕ ಮಾಹಿತಿಯನ್ನು ರೈತರಿಗೆ ನೀಡಲಾಗುವುದು. ನರೇಗಾ ಯೋಜನೆಯಡಿ 2021ನೇ ಸಾಲಿನಲ್ಲಿ ಕೂಲಿ ಕಾರ್ಮಿಕರ ವೆಚ್ಚ ಹಾಗೂ ಪ್ರದೇಶ ವಿಸ್ತರಣೆಗೆ ₹ 25 ಲಕ್ಷ ವೆಚ್ಚ ಮಾಡಲಾಗಿದೆ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT