ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಡನಾಡಿ’ ಮಕ್ಕಳ ಆಪ್ತಸಮಾಲೋಚನೆ

ನ್ಯಾಯಸಮ್ಮತವಾಗಿ ನಡೆಯುವವರಿಗೆ ತೊಂದರೆ ಕೊಡಬಾರದು: ಪರಶುರಾಂ
Last Updated 24 ನವೆಂಬರ್ 2022, 2:58 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಒಡನಾಡಿ ಸೇವಾ ಸಂಸ್ಥೆಯ ‘ಮಡಿಲು’ ಕೇಂದ್ರದಲ್ಲಿರುವ 18 ವರ್ಷದೊಳಗಿನ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ಬಾಲಮಂದಿರ, ಬಾಲಕರ ವೀಕ್ಷಣಾಲಯ ಹಾಗೂ ‘ಸಖಿ’ ಒನ್ ಸ್ಟಾಪ್ ಕೇಂದ್ರದ ಆಪ್ತಸಮಾಲೋಚಕರು ಬುಧವಾರ ಆಪ್ತಸಮಾಲೋಚನೆಗೆ ಒಳಪಡಿಸಿದರು.

‘ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸುವಂತೆ ವಿದ್ಯಾರ್ಥಿನಿಯರನ್ನು ಪ್ರಚೋದಿಸಲಾಗಿದ್ದು, ಈ ಕುರಿತು ತನಿಖೆ ನಡೆಸಬೇಕು’ ಎಂದು ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಸಲ್ಲಿಸಿದ್ದ ದೂರು ಆಧರಿಸಿ ಆಪ್ತಸಮಾಲೋಚನೆ ನಡೆದಿದೆ. ಅವರಿಗೆ ಸಂಸ್ಥೆಯವರು ಸಹಕಾರ ನೀಡಿದರು’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನಡೆಯನ್ನು ನಾವು ಸ್ವಾಗತಿಸುತ್ತೇವೆ. ಚಿತ್ರದುರ್ಗ ಜಿಲ್ಲೆಯ ಮಕ್ಕಳ ರಕ್ಷಣಾ ಘಟಕದವರೂ ಇದೇ ರೀತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಮಠದಲ್ಲಿದ್ದ ಮಕ್ಕಳನ್ನು ರಾತ್ರೋರಾತ್ರಿ ಹೊರ ಕಳುಹಿಸಿದ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಂಸ್ಥೆಯ ನಿರ್ದೇಶಕ ಪರಶುರಾಮ್ ಆಗ್ರಹಿಸಿದರು.

‘ನಮ್ಮ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ, ಸಂತ್ರಸ್ತರಾದವರು ಯಾವ ಸಂಸ್ಥೆಯನ್ನೂ ಅವಲಂಬಿಸಬಾರದು ಎಂಬ ಸಂದೇಶವನ್ನು ನೀಡಲಾಗುತ್ತಿದೆ. ಇದು ಸರಿಯಲ್ಲ. ನ್ಯಾಯಸಮ್ಮತವಾಗಿ ನಡೆಯುವವರಿಗೆ ತೊಂದರೆ ಕೊಡಬಾರದು’ ಎಂದು ಪ್ರತಿಪಾದಿಸಿದರು.

‘ಚಿತ್ರದುರ್ಗದಿಂದ ಬಂದಿದ್ದ ಸಂತ್ರಸ್ತ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಹಾಗೂ ನ್ಯಾಯಾಧೀಶರ ಎದುರು ನಾವು ಹಾಜರುಪಡಿಸಿದ್ದೆವು. ಇದು, ಅಪರಾಧವೇ? ಈ ಬಗ್ಗೆ ನ್ಯಾಯಾಧೀಶರ ಸು‍ಪರ್ದಿಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗೂ ಪತ್ರ ಬರೆದಿದ್ದೇವೆ. ರಾಷ್ಟ್ರಪತಿಗಳ ಕಚೇರಿಗೂ ಬರೆಯಲಾಗಿದೆ. ಲೋಕಾಯುಕ್ತಕ್ಕೂ ದೂರು ನೀಡಲು ನಿರ್ಧರಿಸಲಾಗಿದೆ’ ಎಂದರು.

‘ಬಾಲಕಿಯರ ವಿಚಾರಣೆ ನಡೆಸುವುದಕ್ಕೆ ಪೊಲೀಸರು, ಚಿತ್ರದುರ್ಗದಿಂದ ಅವರ ತಾಯಿಯನ್ನು ಒಡನಾಡಿಗೆ ಕರೆತಂದಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT