ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಅಚ್ಚುಕಟ್ಟು ಪ್ರದೇಶದ ಮಹಿಳೆಯರಿಂದ ಗಂಗಾಪೂಜೆ

ವಾಣಿ ವಿಲಾಸಕ್ಕೆ ದಾಖಲೆಯ ನೀರು * ಜಲಚರಗಳಿಗೆ ರೈತ ಮುಖಂಡರಿಂದ ಆಹಾರ ಧಾನ್ಯ ಅರ್ಪಣೆ
Last Updated 18 ಡಿಸೆಂಬರ್ 2021, 4:26 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದಲ್ಲಿ 64 ವರ್ಷದ ನಂತರ 125 ಅಡಿ ನೀರು ಸಂಗ್ರಹವಾಗಿರುವುದರಿಂದ ರೈತ ಮುಖಂಡರು ಜಲಚರಗಳಿಗೆ ಆಹಾರ ಧಾನ್ಯ ಅರ್ಪಿಸಿದರೆ, ರಂಗನಾಥಸ್ವಾಮಿ ದೇಗುಲದ ಸಮೀಪ ಅಚ್ಚುಕಟ್ಟು ಪ್ರದೇಶದ ಮಹಿಳೆಯರು ಗಂಗಾಪೂಜೆ ನೆರವೇರಿಸಿದರು.

ವಾಣಿವಿಲಾಸ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರ ಹೋರಾಟ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರೈತ ಹೋರಾಟಗಾರರು, ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಕೋಡಿ ಬೀಳುವತ್ತ ಸಾಗಿರುವ ಜಲಾಶಯದ ಸೊಬಗನ್ನು ಕಣ್ತುಂಬಿಕೊಂಡರು.

ರೈತರು ತಮ್ಮ ತಮ್ಮ ಮನೆಗಳಿಂದ ತಂದಿದ್ದ ಮಂಡಕ್ಕಿ, ರಾಗಿ, ಗೋಧಿ, ಅಕ್ಕಿ ಇತರೆ ಧಾನ್ಯಗಳು, ಹಣ್ಣು–ತರಕಾರಿಗಳನ್ನು ಅಣೆಕಟ್ಟೆಯ ಮೇಲಿನಿಂದ ಜಲಾಶಯಕ್ಕೆ ಅರ್ಪಿಸಿದರು. ಹಾರನ ಕಣಿವೆ ರಂಗನಾಥಸ್ವಾಮಿ ದೇವಸ್ಥಾನ ಸಮೀಪ ಇರುವ ಕೋಡಿಯ ಬಳಿ ಮಹಿಳೆಯರು ನೀರಿಗೆ ಹಾಲು, ತುಪ್ಪ, ಬಾಳೆಹಣ್ಣು ಅರ್ಪಿಸುವ ಮೂಲಕ ಗಂಗಾಪೂಜೆ ಸಲ್ಲಿಸಿದರು. ಪೂಜೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಅರಿಶಿನ, ಕುಂಕುಮ, ಹಸಿರು ಬಳೆ, ಕುಪ್ಪಸ ನೀಡಲಾಯಿತು. ಹಿರಿಯೂರಿನ ಉದ್ಯಮಿ ಆನಂದ್ ಶೆಟ್ಟಿ ಅನ್ನಸಂತರ್ಪಣೆ ಏರ್ಪಡಿಸಿದ್ದರು.

ಪ್ರವಾಸಿ ತಾಣ ಮಾಡಲು ಆಗ್ರಹ: ‘112 ವರ್ಷದ ಇತಿಹಾಸವಿರುವ ವಾಣಿವಿಲಾಸ ಜಲಾಶಯ ಎರಡನೇ ಬಾರಿಗೆ ಭರ್ತಿಯಾಗುವತ್ತ ಸಾಗಿದೆ. ವಿಶ್ವೇಶ್ವರಯ್ಯ ನೀರಾವರಿ ನಿಗಮದವರು ಜಲಾಶಯದ ಸುತ್ತಲ ಪರಿಸರವನ್ನು ಸುಂದರಗೊಳಿಸುವ ಮೂಲಕ ಉತ್ತಮ ಪ್ರವಾಸಿ ತಾಣವನ್ನಾಗಿಸಬೇಕು. ಜಲಾಶಯ ನಿರ್ಮಾಣಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅಧ್ಯಯನ ಪೀಠ ಹಾಗೂ ಪುತ್ಥಳಿ ಸ್ಥಾಪಿಸಬೇಕು. ಅಣೆಕಟ್ಟೆಯ ಕೆಳಭಾಗದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಎರಡು ಉದ್ಯಾನಗಳನ್ನು ಹಸನುಗೊಳಿಸಬೇಕು. ಉತ್ತಮ ವಸತಿ–ಉಪಹಾರಗೃಹ ಆರಂಭಿಸಬೇಕು. ಜೊತೆಗೆ ಸ್ಥಗಿತಗೊಂಡಿರುವ ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ಪುನರ್‌ ಆರಂಭಿಸಲು ಗಂಭೀರ ಪ್ರಯತ್ನ ನಡೆಸಿ, ಈ ವರ್ಷದ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದರು.

ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಅಧ್ಯಕ್ಷ ಕಸವನಹಳ್ಳಿ ರಮೇಶ್, ಆಲೂರು ಸಿದ್ದರಾಮಣ್ಣ, ಆರನಕಟ್ಟೆ ಶಿವಕುಮಾರ್, ಕೆ.ಟಿ. ತಿಪ್ಪೇಸ್ವಾಮಿ, ಬಬ್ಬೂರು ಸುರೇಶ್, ಬಿ. ರಾಜಶೇಖರ್, ಶಿವಣ್ಣ, ನಾರಾಯಣಾಚಾರ್, ರಾಜೇಂದ್ರ, ಆನಂದಶೆಟ್ಟಿ, ಕೆ.ವಿ. ಅಮರೇಶ್, ಶ್ರೀನಿವಾಸ್, ಆರ್.ಕೆ. ಗೌಡ್ರು, ಮಾಳಿಗೆ ಮಂಜುನಾಥ್, ಗೀತಮ್ಮ, ಕಲಾವತಿ, ಪರಿಸರವಾದಿ ಚೌಡಪ್ಪ, ಕಲ್ಯಾಣಿ, ಮಂಜುಳಾ, ಕೀರ್ತಿ ಹನುಮಂತರಾಯ, ಪುಣ್ಯವತಿ, ಛಾಯಾ, ರತ್ನಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT