ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲ ಕೊಠಡಿಯಲ್ಲಿ ‘ಹೊಂದಾಣಿಕೆ ಕಲಿಕೆ’

ಶತಮಾನದ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ – ಮೈಮರೆತರೆ ಜೀವಕ್ಕೆ ಕುತ್ತು
Last Updated 26 ಜುಲೈ 2022, 6:00 IST
ಅಕ್ಷರ ಗಾತ್ರ

ಚಿತ್ರದುರ್ಗ: 20 ಕೊಠಡಿ, 3 ಶೌಚಾಲಯ, 2,723 ವಿದ್ಯಾರ್ಥಿನಿಯರು.... ಇದು ಶತಮಾನ ಕಂಡಿರುವ ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸ್ಥಿತಿ.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌.ನಿಜಲಿಂಗಪ್ಪ ಸೇರಿ ಅನೇಕ ಸಾಧಕರು ವಿದ್ಯಾಭ್ಯಾಸ ನಡೆಸಿದ ಕಾಲೇಜು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. 1865ರಲ್ಲಿ ಮದ್ರಾಸ್‌ ಬೋರ್ಡ್‌ ಮೆಟ್ರಿಕ್‌ ಶಿಕ್ಷಣಕ್ಕೆ ಈ ಕಟ್ಟಡವನ್ನು ನಿರ್ಮಿಸಿತ್ತು. ಜನಸಂಖ್ಯೆ ಹೆಚ್ಚಾದಂತೆ 1975ರಲ್ಲಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲಾಯಿತು. ಇದೀಗ ಒಂದೇ ಕಟ್ಟಡದಲ್ಲಿ ಪಾಳಿಯ ಮೇಲೆ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜನ್ನು ನಡೆಸಲಾಗುತ್ತಿದೆ.

ಗ್ರಾಮೀಣ ಭಾಗದ ಪಾಲಕರ ಆಶಾಕಿರಣವಾಗಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮಾತ್ರ ಆಂತಕದಲ್ಲೇ ಪಾಠ ಕಲಿಯಬೇಕಾದ ಸ್ಥಿತಿ ಇದೆ. ಇಲ್ಲಿ ಒಟ್ಟು 34 ಕೊಠಡಿಗಳಿದ್ದು, ಅದರಲ್ಲಿ 20 ಮಾತ್ರ ತರಗತಿ ನಡೆಸಲು ಯೋಗ್ಯವಾಗಿವೆ. ಉಳಿದ 14 ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಮಳೆಗಾಲದಲ್ಲಿ ಕೊಠಡಿಗಳಿಗೆ ಬೀಗ ಹಾಕಲಾಗುತ್ತಿದೆ.

ಪ್ರೌಢಶಾಲೆಯಲ್ಲಿ 510, ಪ್ರಥಮ ಮತ್ತು ದ್ವಿತೀಯ ಪಿಯಸಿಯ ಕಲಾ ವಿಭಾಗದಲ್ಲಿ 1060, ವಿಜ್ಞಾನ ವಿಭಾಗದಲ್ಲಿ 697, ವಾಣಿಜ್ಯ ವಿಭಾಗದಲ್ಲಿ 596, ಗಣಕ ವಿಜ್ಞಾನ 260 ಹಾಗೂ ಸಂಖ್ಯಾಶಾಸ್ತ್ರದಲ್ಲಿ 110 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಥಮ ಪಿಯುಸಿಗೆ ಪ್ರವೇಶಾತಿ ನಡೆಯುತ್ತಿರುವ ಕಾರಣ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಕಾಲೇಜಿನ ಸಿಬ್ಬಂದಿ.

ಕಟ್ಟಡ ಶತಮಾನ ದಾಟಿರುವ ಕಾರಣ ಬಹುತೇಕ ಎಲ್ಲ ಕೊಠಡಿಗಳು ಬಿರುಕು ಬಿಟ್ಟಿವೆ. ಜೋರಾಗಿ ಮಳೆ ಬಂದರೆ ಸಾಕು ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ಪ್ರಾಂಶುಪಾಲರಿಗೆ ಆತಂಕ ಎದುರಾಗುತ್ತದೆ. ಕೊಠಡಿಗಳ ಸಮಸ್ಯೆ ಕಾರಣಕ್ಕೆ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜನ್ನು ಪಾಳಿಯ ಮೇಲೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡುತ್ತಾರೆ ಅವರು.

ಹೊಸ ಕಟ್ಟಡ ನಿರ್ಮಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲರಾದ ಎಚ್‌. ನಾಗರಾಜ್‌.

ಮಳೆ ಬರುವಾಗ ತರಗತಿ ಪ್ರವೇಶಿಸಲು ಭಯವಾಗುತ್ತದೆ. ಯಾವಾಗ ಚಾವಣಿ ಬೀಳುತ್ತದೆಯೋ ಎಂಬ ಆತಂಕದಲ್ಲೇ ಪಾಠ ಕೇಳಬೇಕಿದೆ. ಗ್ರಾಮೀಣ ಭಾಗದ ಜೀವನಾಡಿಯಾಗಿರುವ ಕಾಲೇಜಿಗೆ ಕಾಯಕಲ್ಪ ನೀಡಿ.

ಕೆ. ನೇತ್ರಾವತಿ, ವಿದ್ಯಾರ್ಥಿನಿ

ಕೊಠಡಿಗಳ ಸಮಸ್ಯೆಯಿಂದ ಡೆಸ್ಕ್‌ಗೆ ಐದರಿಂದ ಆರು ಜನ ಕುಳಿತು ಪಾಠ ಕೇಳುವ ಸ್ಥಿತಿ ಇದೆ. ಶೌಚಾಲಯದ ಸಮಸ್ಯೆ ಗಂಭೀರವಾಗಿದೆ. ಹೊಸ ಕಟ್ಟಡ ನಿರ್ಮಿಸಿದರೆ ಶಾಶ್ವತ ಪರಿಹಾರ ನೀಡಿದಂತಾಗುತ್ತದೆ.

ಬಿ.ಎಂ. ಮಂಜುಶ್ರೀ, ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT