ಮಂಗಳವಾರ, ಅಕ್ಟೋಬರ್ 20, 2020
26 °C
ಭರಮಸಾಗರದಲ್ಲಿ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ

ಖರೀದಿ ಕೇಂದ್ರ ಸ್ಥಾಪನೆಗೆ ವಾರದ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭರಮಸಾಗರ: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಬೇಕು, ಖರೀದಿ ಕೇಂದ್ರ ತೆರೆಯಬೇಕು, ಬೆಳೆ ವಿಮೆ ಬಿಡುಗಡೆ ಮಾಡಬೇಕು, ಹಾಲಿನ ದರ ಹೆಚ್ಚಿಸಬೇಕು ಹಾಗೂ ಸರ್ಕಾರ ಹೊರಡಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ‘ಖರೀದಿ ಕೇಂದ್ರಗಳನ್ನು ತೆರೆಯುವಲ್ಲಿ, ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಹುಡುಕುವಲ್ಲಿ ಜಿಲ್ಲಾಡಳಿತ ನಿರ್ಲಕ್ಷಿಸಿದೆ. ವಾರದ ಒಳಗಾಗಿ ಜಿಲ್ಲೆಯ ಮುಖ್ಯ ಅಧಿಕಾರಿಯ ನ್ನೊಳಗೊಂಡಂತೆ ರೈತ ಮುಖಂಡರ ಸಭೆಯನ್ನು ಚಿತ್ರದುರ್ಗದಲ್ಲಿ ಕರೆದು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಟಿ.ಸುರೇಶ್ ಬಾಬು ಮಾತನಾಡಿ, ‘ಜಿಲ್ಲೆಯಲ್ಲಿ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೇ ಬಂಡವಾಳವೂ ಸಿಗದಂತಾಗಿದೆ. ಕೇಂದ್ರ ಸರ್ಕಾರ
₹1,850 ಬೆಂಬಲ ಬೆಲೆ ನಿಗದಿಪಡಿಸಿದೆ. ರಾಜ್ಯ ಸರ್ಕಾರ ಇದಕ್ಕೆ ₹150 ಸೇರಿಸಿ ₹2000 ನಿಗದಿಪಡಿಸಬೇಕು.
ಎಂಟು ದಿನದೊಳಗಾಗಿ ಖರೀದಿ ಕೇಂದ್ರಗಳನ್ನು ತೆರೆಯಬೇಕು’ ಎಂದು ಒತ್ತಾಯಿಸಿದರು.

‘ಮೆಕ್ಕೆಜೋಳದ ಖಣಜವಾದ ಭರಮಸಾಗರದಿಂದ ಹೋರಾಟ ಆರಂಭಿಸಿದ್ದೇವೆ. 8 ದಿನದಲ್ಲಿ ಸ್ಪಂದಿಸದೆ ಇದ್ದರೆ ಇಲ್ಲಿಂದ ಜಿಲ್ಲಾ ಕೇಂದ್ರಕ್ಕೆ ಜಾಥಾ ಹೋಗಲಾಗುವುದು’ ಎಂದು ಎಚ್ಚರಿಸಿದರು.

ರೈತರು ಪಟ್ಟಣದ ಮುಖ್ಯಬೀದಿಗಳಲ್ಲಿ ಜಾಥಾ ನಡೆಸಿ ಮೆಕ್ಕೆಜೋಳ ಖರೀದಿ ಕೇಂದ್ರ, ಬೆಂಬಲ ಬೆಲೆಗೆ ಒತ್ತಾಯಿಸಿ ಘೋಷಣೆ ಕೂಗಿದರು.

ಪ್ರತಿಭಟನಾ ಸಭೆ ಆರಂಭವಾಗಿ ಎರಡು ಗಂಟೆಯಾದರೂ ಜಿಲ್ಲಾಡಳಿತ ದಿಂದ ಯಾವೊಬ್ಬ ಅಧಿಕಾರಿಗಳು ಬಾರದೇ ಇದ್ದಾಗ ಹೆದ್ದಾರಿ ತಡೆಗೆ ಮುಂದಾಗುವುದಾಗಿ ಹೇಳಿದರು. ನಂತರ ಬಂದ ಚಿತ್ರದುರ್ಗ ತಹಶೀಲ್ದಾರ್ ವೆಂಕಟೇಶಯ್ಯ ಅವರಿಗೆ ಮನವಿ ಸಲ್ಲಿಸಿದರು.

ಸಭೆಯ ನಂತರ ಬಂದ ಸಹಾಯಕ ಕೃಷಿ ನಿರ್ದೇಶಕಿ ಭಾರತಮ್ಮ ಅವರನ್ನು ರೈತ ಮುಖಂಡರು ತರಾಟೆಗೆ ತೆಗೆದುಕೊಂಡರು. ‘ರೈತರು ಬಿಸಿಲಲ್ಲಿ ಕೂಳಿತಿದ್ದರೂ ಅವರ ಕೂಗು ನಿಮಗೆ ಕೇಳಿಸದಿರುವುದು ನಾಚಿಕೆ ಸಂಗತಿ’ ಎಂದರು.

ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಎಂ.ಬಿ.ತಿಪ್ಪೇಸ್ವಾಮಿ, ಸಿ.ಆರ್.ತಿಮ್ಮಣ್ಣ, ಜಿಲ್ಲಾ ಮಹಿಳಾ ಸಂಚಾಲಕಿ ಕುರ್ಕಿ ಸಿದ್ದಮ್ಮ, ಕೆ.ಸಿ.ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸಿ.ನಾಗರಾಜು, ಹಮಪಯ್ಯನಮಾಳಿಗೆ ಧನಂಜಯ, ಬೇಡರಶಿವನಕೆರೆ ಪ್ರವೀಣ್, ಆರ್.ಸಿ.ಮಂಜಪ್ಪ, ರೇವಣ್ಣ ಸಜ್ಜನಕೆರೆ,ತಾಲ್ಲೂಕು ಉಪಾಧ್ಯಕ್ಷ ಎಮ್ಮೇಹಟ್ಟಿ ಕೆಂಚಯಲ್ಲಪ್ಪ, ಕೋಗುಂಡೆ ರವಿ, ಪ್ರಸನ್ನಕುಮಾರ್, ಇಸಾಮುದ್ರ ಪ್ರಭು, ಓಬಳಾಪುರ ಶ್ರೀಧರ್, ಕೊಳಹಾಳು ರಮೇಶ್, ಮುದ್ದಾಪುರ ಸಿ.ನಾಗರಾಜ್, ಆರ್.ಎಚ್.ಹನುಮಂತಪ್ಪ, ಎನ್.ಎಚ್.ಮಂಜುನಾಥ್, ಮೊಳಕಾಲ್ಮುರು
ರವಿ, ಲಕ್ಷ್ಮೀಕಾಂತ, ಇಮಾಂಸಾಬ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.