ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಈರುಳ್ಳಿ ಬೆಳೆ ನಾಶ; ಪರಿಹಾರ ವಿತರಣೆಗೆ ಒತ್ತಾಯ

ಸೂರ್ಯಕಾಂತಿ ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯಿಸಿ ರೈತಸಂಘ ಪ್ರತಿಭಟನೆ
Published : 23 ಆಗಸ್ಟ್ 2024, 16:21 IST
Last Updated : 23 ಆಗಸ್ಟ್ 2024, 16:21 IST
ಫಾಲೋ ಮಾಡಿ
Comments

ಚಿತ್ರದುರ್ಗ: ಜಿಲ್ಲೆಯಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ಈರುಳ್ಳಿ ಹಾಗೂ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲೆಯು ಕಳೆದ ವರ್ಷ ಭೀಕರ ಬರದಿಂದ ತತ್ತರಿಸಿದೆ. ಇದರಿಂದ ರೈತರು ಸಾಲಗಾರರಾಗಿದ್ದಾರೆ. ಈ ಸಾಲ ತೀರಿಸಲು ಹೊಸದಾಗಿ ಬೆಳೆ ಹಾಕಿದ್ದರು. ಉತ್ತಮ ಮಳೆ ಸುರಿಯುತ್ತಿರುವ ಕಾರಣ ಉತ್ತಮ ಬೆಳೆ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಈರುಳ್ಳಿ ಮತ್ತು ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಹೀಗಾಗಿ ಸರ್ಕಾರ ರೈತರ ಬೆಂಬಲಕ್ಕೆ ಬರಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಈ ವರ್ಷ ಬೆಳೆ ಬಂದರೂ ರೈತರು ತಮ್ಮ ಸಾಲ ತೀರಿಸಲು ಸಾಧ್ಯವಾಗದೇ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಈ ಕೂಡಲೇ ಬೆಳೆ ಸಮೀಕ್ಷೆ ನಡೆಸಬೇಕು. ವೈಜ್ಞಾನಿಕ ರೀತಿಯಲ್ಲಿ ಬೆಳೆ ಸಮೀಕ್ಷೆ ನಡೆಸಿ ರೈತರ ಖಾತೆಗಳಿಗೆ ಬೆಳೆ ಪರಿಹಾರ ಹಣವನ್ನು ಹಾಕಬೇಕು. ಈ ಭಾಗದಲ್ಲಿ ರೈತರಿಗೆ ಈರುಳ್ಳಿ ವಾಣಿಜ್ಯ ಬೆಳೆಯಾಗಿದ್ದು ನಷ್ಟದಿಂದ ರೈತರು ಕಂಗಾಲಾಗಿದ್ದಾರೆ ಎಂದು ಹೇಳಿದರು.

ಈಚೆಗೆ ಸುರಿದ ಜಿಟಿಜಿಟಿ ಮಳೆಯಿಂದಾಗಿ ಹೊಸದುರ್ಗ ತಾಲ್ಲೂಕಿನಲ್ಲಿ ಮಣ್ಣಿನ ತೇವಾಂಶ ಹೆಚ್ಚಾಗಿ ಈರುಳ್ಳಿ ಬೆಳೆಗಳಿಗೆ ಥ್ರಿಪ್ಸ್ ನುಶಿ ಕೀಟ ಕಾಡುತ್ತಿದೆ. ನೇರಳೆ ಎಲೆ ಮಚ್ಚೆ ರೋಗ ಬಾಧೆಯೂ ತೀವ್ರಗೊಂಡಿದೆ. ಬೆಳೆಯನ್ನು ರಕ್ಷಿಸಲು, ರೋಗ ನಿರ್ವಹಣೆ ಮಾಡಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಮಾರ್ಗದರ್ಶನ ಮಾಡಬೇಕು. ರೈತರ ತೋಟಕ್ಕೆ ಬಂದು ಅಧಿಕಾರಿಗಳು ಪ್ರಾತ್ಯಕ್ಷಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಪರಿಹಾರ ಕೂಡಿಸುವುದರ ಜೊತೆಗೆ ಬೆಳೆ ವಿಮೆಗೆ ಒಳಪಟ್ಟವರಿಗೆ ತಕ್ಷಣ ಬೆಳೆ ವಿಮೆ ಕೊಡಿಸಬೇಕು‌. ಚಿತ್ರದುರ್ಗ ತಾಲ್ಲೂಕಿನಲ್ಲಿ ಹೆಚ್ಚಾಗಿ ಋಷ್ಕಿ ಜಮೀನುಗಳಲ್ಲಿ ಸೂರ್ಯಕಾಂತಿ ಬೆಳೆಯನ್ನು ಬೆಳೆದಿದ್ದಾರೆ. ಇದರ ಖರೀದಿಗೆ ಸರ್ಕಾರ ಬೆಂಬಲಬೆಲೆ ಯೋಜನೆಯಡಿ ಖರೀದಿ ಕೇಂದ್ರ ತೆರೆಯಬೇಕು. ಆ ಮೂಲಕ ಹೆಚ್ಚು ಬೆಲೆ ನೀಡಿ ಸೂರ್ಯಕಾಂತಿಯನ್ನು ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜನ, ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ಶಶಿಧರ್, ಕೃಷ್ಣಮೂರ್ತಿ, ರಂಗಸ್ವಾಮಿ, ಬಾಬುರೆಡ್ಡಿ, ಹರಳಯ್ಯ, ರಾಜಶೇಖರಪ್ಪ, ಲೋಕೇಶ್ ಪ್ರತಾಪ್ ರೆಡ್ಡಿ ಇದ್ದರು.

ಧಾರಾಕಾರ ಮಳೆಯಿಂದ ಈರುಳ್ಳಿ ಬೆಳೆಗೆ ಹಾನಿ ಶೀಘ್ರ ಬೆಳೆ ಸಮೀಕ್ಷೆ ಕೈಗೊಳ್ಳುವಂತೆ ಒತ್ತಾಯ ತೇವಾಂಶ ಹೆಚ್ಚಳದಿಂದಾಗಿ ಈರುಳ್ಳಿಗೆ ಕೀಟಬಾಧೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT