ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಎಕರೆಯಲ್ಲಿದ್ದ ಈರುಳ್ಳಿ ಬೆಳೆ ನಾಶ

ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಕಂಗೆಟ್ಟ ಬೆಳೆಗಾರ
Last Updated 26 ಸೆಪ್ಟೆಂಬರ್ 2021, 4:13 IST
ಅಕ್ಷರ ಗಾತ್ರ

ಹೊಸದುರ್ಗ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತದಿಂದ ಕಂಗೆಟ್ಟ ತಾಲ್ಲೂಕಿನ ಬಾಗೂರು ಗ್ರಾಮ ಪಂಚಾಯಿತಿಯ ಕೆ.ಟಿ.ನಗರದ ಬೆಳೆಗಾರ ಲೋಕಣ್ಣ ತಮ್ಮ 3 ಎಕರೆ ಜಮೀನಿನಲ್ಲಿದ್ದ ಈರುಳ್ಳಿ ಬೆಳೆಯನ್ನು ಟ್ರ್ಯಾಕ್ಟರ್‌ ಸಹಾಯದಿಂದ ಶನಿವಾರ ನಾಶಪಡಿಸಿದ್ದಾರೆ.

ಎರಡು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಸಿಕ್ಕಿತ್ತು. ಈ ಬಾರಿಯೂ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಿಂದ ಲೋಕಣ್ಣ ಸುಮಾರು ₹ 80 ಸಾವಿರ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದರು. ಜುಲೈ ಹಾಗೂ ಆಗಸ್ಟ್‌ನಲ್ಲಿ ಮೋಡಕವಿದ ವಾತಾವರಣ ಇದ್ದ ಕಾರಣ ಬೆಳೆಗೆ ಕೊಳೆರೋಗ ತಗುಲಿದ್ದರಿಂದ ಬೆಳೆ ಉಳಿಯುವುದೋ ಇಲ್ಲವೋ ಎಂಬ ಆತಂಕ ಎದುರಾಯಿತು. ಆಗಲೂ ಮತ್ತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧ ಸಿಂಪಡಿಸಿದ್ದರಿಂದ ಬೆಳೆ ರೋಗದಿಂದ ಮುಕ್ತವಾಯಿತು. ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಟಾವಿಗೆ ಬಂದಿರುವ ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕಿಳಿದಿದೆ. 60 ಕೆ.ಜಿ ತೂಕದ ಪ್ಯಾಕೆಟ್‌ ಸಣ್ಣಗೆಡ್ಡೆ ₹ 100ರಿಂದ ₹ 200, ಗುಣಮಟ್ಟದ ದೊಡ್ಡಗೆಡ್ಡೆ ₹ 500ರಿಂದ ₹ 600ರವರೆಗೆ ಮಾರಾಟವಾಗುತ್ತಿದೆ.

‘ನನ್ನದು 3 ಎಕರೆಯಿಂದ ಸುಮಾರು 250 ಪ್ಯಾಕೆಟ್‌ ಆಗಬಹುದು. ಈರುಳ್ಳಿ ಹೆಚ್ಚು ಸಣ್ಣದು ಹಾಗೂ ಸ್ವಲ್ಪ ದೊಡ್ಡ ಗಾತ್ರದ್ದು ಇವೆ. ಈಗ ಈರುಳ್ಳಿ ಕಿತ್ತು ಮಾರುಕಟ್ಟೆಗೆ ಸಾಗಿಸಲು ಕೀಳಿಸುವುದು, ಕೊಯ್ಯಿಸುವ ಕೂಲಿ, ಟ್ರ್ಯಾಕ್ಟರ್‌ ಬಾಡಿಗೆ, ಖಾಲಿ ಚೀಲ ತರುವುದು, ಮಾರುಕಟ್ಟೆಗೆ ಸಾಗಿಸಲು ವಾಹನ ಬಾಡಿಗೆ ಸೇರಿ ಮತ್ತೆ ₹ 50 ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತದೆ. ಇಷ್ಟೆಲ್ಲ ಖರ್ಚು ಬರುವ ಜತೆಗೆ ಈರುಳ್ಳಿ ಸ್ವಚ್ಛ ಮಾಡಿಕೊಳ್ಳಲು ಮತ್ತೆ ಒಂದು ವಾರ ನಾನು ಹೆಣಗಬೇಕು. ಈರುಳ್ಳಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಅಂದಾಜು ₹ 1.50 ಲಕ್ಷದಷ್ಟು ಸಿಗಬಹುದು. ಬೆಳೆ ಬೆಳೆಯಲು ಖರ್ಚು ಮಾಡಿರುವ ಹಣವಷ್ಟೇ ಸಿಗುವುದಾದರೆ ಮತ್ತ್ಯಾಕೆ ಕಷ್ಟಪಡಬೇಕು. ಹೀಗಾಗಿ ಮನನೊಂದು ಜಮೀನಿನಲ್ಲಿಯೇ ಕೊಳೆಯಲಿ ಎಂದು ನಾಶ ಪಡಿಸುತ್ತಿದ್ದೇನೆ’ ಎಂದು ಬೆಳೆಗಾರ ಲೋಕಣ್ಣ
ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT