ಶನಿವಾರ, ಡಿಸೆಂಬರ್ 7, 2019
21 °C

ಉತ್ತಮ ಧಾರಣೆಯ ಆಶಯ: ಈರುಳ್ಳಿ ಬೆಳೆಯಲು ಚಿತ್ರದುರ್ಗ ರೈತರ ಆಸಕ್ತಿ

ಬೋರೇಶ ಎಂ.ಜೆ Updated:

ಅಕ್ಷರ ಗಾತ್ರ : | |

Prajavani

ತುರುವನೂರು (ಚಿತ್ರದುರ್ಗ ಜಿಲ್ಲೆ): ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಮುಖಿಯಾಗುತ್ತಿದ್ದಂತೆ, ಬೆಳೆಗಾರರು ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆಯಲು ರೈತರು ಚಿತ್ತ ಹರಿಸಿದ್ದಾರೆ.

ಸತತ ನಾಲ್ಕೈದು ವರ್ಷಗಳಿಂದ ಮಳೆ ಅಭಾವ, ಬರ, ದರ ಕುಸಿತದಿಂದ ಕಂಗಲಾಗಿದ್ದ ಈರುಳ್ಳಿ ಬೆಳೆಗಾರರಲ್ಲಿ ಇದೀಗ ಮಾರುಕಟ್ಟೆಯಲ್ಲಿ ಏರಿಕೆಯಾಗಿರುವ ಈರುಳ್ಳಿ ಧಾರಣೆ ಭಾರಿ ಭರವಸೆ ಮೂಡಿಸಿದೆ.

ಈರುಳ್ಳಿ ಬೆಳೆ ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ ಬಯಲುಸೀಮೆಯ ಚಿತ್ರದುರ್ಗ ಜಿಲ್ಲೆಯೂ ಒಂದಾಗಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಸಮರ್ಪಕವಾಗಿ ಮಳೆಯಾಗದ ಹಿನ್ನಲೆಯಲ್ಲಿ ಈರುಳ್ಳಿ ಬಿತ್ತನೆ ಪ್ರಮಾಣವೂ ಕಡಿಮೆಯಾಗಿತ್ತು. ಆದರೆ, ನವೆಂಬರ್ ತಿಂಗಳಲ್ಲಿ ಸುರಿದ ಅಧಿಕ ಮಳೆಗೆ ಹಲವೆಡೆ ಈರುಳ್ಳಿ ಬೆಳೆ ಜಮೀನಿನಲ್ಲಿಯೇ ಕೊಳೆತು ಹೋಗಿತ್ತು.

ಈರುಳ್ಳಿ ಬಿತ್ತನೆಯಾದ ಮೇಲೆ ನಿರಂತರವಾಗಿ ಸುರಿದ ವಿಪರೀತ ಮಳೆಯಿಂದ ಶೇ 50 ರಷ್ಟು ಬೆಳೆ ರೋಗಕ್ಕೆ ತುತ್ತಾಗಿತ್ತು. ಹಾಗಾಗಿ ಈರುಳ್ಳಿ ಇಳುವರಿ ಗಣನೀಯವಾಗಿ ಕಡಿಮೆಯಾಗಿ ದೇಶದಲ್ಲಿ ಈರುಳ್ಳಿಗೆ ಬಂಗಾರದ ಬೆಲೆ ಬಂದಿದೆ. ಮತ್ತೊಮ್ಮೆ ರೈತರು ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ಹಿಂಗಾರು ಮಳೆ ರೈತನ ಕೈ ಹಿಡಿದಿದಿದ್ದು, ಭರವಸೆಯ ಹೊಂಗಿರಣವೊಂದು ಮೂಡಿದಂತಾಗಿದೆ. ನೀರಾವರಿ ಸೌಲಭ್ಯವಿರುವ ರೈತರು ಈರುಳ್ಳಿ ಬೀಜ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

‘ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಕ್ವಿಂಟಲ್‌ಗೆ ₹ 8 ಸಾವಿರದಿಂದ 10 ಸಾವಿರದವರೆಗೂ ಇದೆ. ಸತತ ಬರ, ದರ ಕುಸಿತದಿಂದ ಕಂಗಲಾಗಿದ್ದ ಬೆಳೆಗಾರರಲ್ಲಿ ಈ ಧಾರಣೆ ಹೊಸ ಚೈತನ್ಯ ತುಂಬಿದೆ. ಮುಂದಿನ ದಿನಗಳಲ್ಲಿ ಇದೇ ದರ ಸಿಗಬಹುದು ಎಂಬ ನಿರೀಕ್ಷೆಯಿಂದ ಮೂರು ಎಕರೆಯಲ್ಲಿ ಈರುಳ್ಳಿ ಬೆಳೆ ಬಿತ್ತನೆ ಮಾಡಿದ್ದೇನೆ’ ಎನ್ನುತ್ತಾರೆ ಗೋನೂರು ಗ್ರಾಮದ ರೈತ ತಿಪ್ಪೇಸ್ವಾಮಿ.

‘ಮುಂಗಾರು ಹಂಗಾಮಿನಲ್ಲಿ ಹನಿ ನೀರಾವರಿ ಮೂಲಕ ಎರಡು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. ನೀರಿನ ಅಭಾವ ಹಾಗೂ ವಿಪರೀತ ಮಳೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬರಲಿಲ್ಲ. ಹಿಂಗಾರು ಹಂಗಾಮಿಗೆ ಎರಡು ಎಕರೆಯಲ್ಲಿ ಮತ್ತೊಮ್ಮೆ ಈರುಳ್ಳಿ ಹಾಕಿದ್ದೇನೆ’ ಎನ್ನುತ್ತಾರೆ ಹೊಸಚೂರಿಪಾಪಯ್ಯನಹಟ್ಟಿಯ ರೈತ ಪಾಪಯ್ಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು