ಕಾವಿ ಧರಿಸಿದ ಮಾತ್ರಕ್ಕೆ ಯೋಗ್ಯತೆ ಬದಲಾಗದು: ಶಾಂತವೀರ ಸ್ವಾಮೀಜಿ

7
ಆರೋಗ್ಯ ಕಾರ್ಯಾಗಾರ ಸಭೆ

ಕಾವಿ ಧರಿಸಿದ ಮಾತ್ರಕ್ಕೆ ಯೋಗ್ಯತೆ ಬದಲಾಗದು: ಶಾಂತವೀರ ಸ್ವಾಮೀಜಿ

Published:
Updated:
Deccan Herald

ಹೊಸದುರ್ಗ: ಯೋಗ ಮತ್ತು ಯೋಗ್ಯತೆ ಗಳಿಸಲು ಕಾವಿ ಬೇಕಿಲ್ಲ. ಮೈಮೇಲೆ ಕಾವಿ ಬಟ್ಟೆ ಧರಿಸಿದ ತಕ್ಷಣ ವ್ಯಕ್ತಿಯ ಯೋಗ್ಯತೆ ಬದಲಾಗಿದೆ ಎನ್ನಲಾಗದು. ಒಬ್ಬ ಸ್ವಾಮೀಜಿ ಅವಾಂತರ ಮಾಡಿದ್ದರೆ ಎಲ್ಲಾ ಮಠಾಧೀಶರು ಮಾಡಿದಂತಾಗುವುದಿಲ್ಲ ಎಂದು ಇಲ್ಲಿನ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಸಿದ್ದರಾಮೆಶ್ವರ ಸಮುದಾಯ ಭವನದಲ್ಲಿ ಶಿವಮೊಗ್ಗ ಯೋಗ ವಿಸ್ಮಯ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ ಆರೋಗ್ಯ ಕುರಿತ ಕಾರ್ಯಾಗಾರದ ನೇತೃತ್ವ ವಹಿಸಿ ಮಾತನಾಡಿದರು.

ಕೈಕಾಲು ಅಲ್ಲಾಡಿಸಿ, ಆಸನ ಮಾಡಿದ ಮಾತ್ರಕ್ಕೆ ಯೋಗ ಎನ್ನಲಾಗದು. ಯೋಗ ಎಂದರೆ ತನ್ಮಯ, ಕೂಡು ಎಂದರ್ಥವಾಗುತ್ತದೆ. ಯೋಗ ಮಾಡುವವರಲ್ಲಿ ಆದರ್ಶ ಆಲೋಚನೆ ಇದ್ದರೆ ಮಾತ್ರ ಜೀವನ ಸುಧಾರಣೆಯಾಗುತ್ತದೆ. ಆರೋಗ್ಯ ಸದೃಢವಾಗಿ ಇರಬೇಕಾದರೆ ಧನಾತ್ಮಕ ಚಿಂತನೆ ಇರಬೇಕು. ಯೋಗ ಮತ್ತು ವ್ಯಕ್ತಿಯ ಯೋಗ್ಯತೆ ಮಧ್ಯೆ ಸಾಮ್ಯತೆ ಇದ್ದಲ್ಲಿ ಬದುಕು ಹಸನಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಐಷರಾಮಿ ಜೀವನಕ್ಕೆ ಮಾರಹೋಗಿ ಮಾನಸಿಕ ಒತ್ತಡದ ಬದುಕಿಗೆ ಸಿಲುಕಿಕೊಂಡು ರೋಗಕ್ಕೆ ತುತ್ತಾಗುವುದಕ್ಕಿಂತ, ಇರುವುದರಲ್ಲಿಯೇ ತೃಪ್ತಿಕರ ಜೀವನ ನಡೆಸಬೇಕು. ರೋಗಮುಕ್ತ ಜೀವನಕ್ಕೆ ಸಾಧು–ಸಂತರ, ಶಿವಶರಣರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ನಿತ್ಯವೂ ಯೋಗ, ಧ್ಯಾನ, ಪ್ರಾಣಯಾಮ ಮಾಡಬೇಕು. ಹಾಗೆಯೇ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.

ಶಿವಮೊಗ್ಗ ಯೋಗ ವಿಸ್ಮಯ ಸಂಸ್ಥೆಯ ಮುಖ್ಯಸ್ಥ ಅನಂತ್‌ಜೀ ಮಾತನಾಡಿ, ‘ಪ್ರಸ್ತುತ ಜನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಅನಿಯಮಿತ ಜೀವನ ಪದ್ಧತಿ ಹಾಗೂ ಕಲುಷಿತ ಆಹಾರ ಸೇವನೆ ಮುಖ್ಯ ಕಾರಣ. ಉತ್ತಮ ಆಹಾರ ಹಾಗೂ ನಿಯಮಿತ ಯೋಗ ಮತ್ತು ಪ್ರಾಣಯಾಮದಿಂದ ಆರೋಗ್ಯವಂತರಾಗಿ ಬದುಕಲು ಸಾಧ್ಯವಾಗುತ್ತದೆ. ಕಾಯಿಲೆ ಹಾಗೂ ಸಾವಿಗೂ ಸಂಬಂಧ ಕಟ್ಟದೇ, ನಮ್ಮ ಕಾಯಿಲೆಗೆ ನಾವೇ ಚಿಕಿತ್ಸೆ ಕಂಡುಕೊಳ್ಳುವ ಸ್ವಯಂ ವೈದ್ಯರಾಗಬೇಕು’ ಎಂದು ವಿವರಿಸಿದರು.

ತಹಶೀಲ್ದಾರ್‌ ಕವಿರಾಜು, ಎಸ್‌.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಸ್‌. ಕಲ್ಮಠ್‌ ಮಾತನಾಡಿದರು.

ಯೋಗ ಶಿಕ್ಷಕರಾದ ತ್ಯಾಗರಾಜಾಚಾರ್‌, ಅರುಣಕುಮಾರಿ, ಸರಸ್ವತಿ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕಿನ ವಿವಿಧೆಡೆಯ ಜನರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !