ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಾವತಿ ನದಿಯಲ್ಲಿ ಮರಳುಗಣಿಗಾರಿಕೆಗೆ ವಿರೋಧ

ಅಧಿಕಾರಿಗಳ ವಿರುದ್ಧ ತೋರೆಬೀರನಹಳ್ಳಿ ಗ್ರಾಮಸ್ಥರ ಆಕ್ರೋಶ
Last Updated 25 ಜನವರಿ 2019, 14:15 IST
ಅಕ್ಷರ ಗಾತ್ರ

ಪರಶುರಾಂಪುರ: ಸಮೀಪದ ತೋರೆಬೀರನಹಳ್ಳಿಯ ವೇದಾವತಿ ನದಿಯಲ್ಲಿ ಮರಳು ತುಂಬಲು ಟೆಂಡರ್‌ ಕರೆದು ಅವಕಾಶ ಮಾಡಿಕೊಟ್ಟಿರುವುದನ್ನು ವಿರೋಧಿಸಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಚಳ್ಳಕೆರೆ ತಹಶೀಲ್ದಾರ್‌ ಮಲ್ಲಿಕಾರ್ಜುನಪ್ಪ, ಡಿವೈಎಸ್ಪಿ ರೋಷನ್ ಬೇಗ್, ಸಿಪಿಐ ತಿಮ್ಮಣ್ಣ ಮತ್ತು ಐವರು ಪಿಎಸ್ಐ ಹಾಗೂ ಪೋಲಿಸ್ ಸಿಬ್ಬಂದಿಯೊಂದಿಗೆ ಬಂದ ಗುತ್ತಿಗೆದಾರರು ಮರಳು ತುಂಬಲು ಮುಂದಾದಾಗ ರೈತರು ಅದನ್ನು ತಡೆದು ಪ್ರತಿಭಟಿಸಿದರು.

‘ಕುಡಿಯಲು ನೀರಿಲ್ಲ. ಅಂತರ್ಜಲ ಸಂಪೂರ್ಣ ಬತ್ತಿಹೋಗಿದೆ. ಜನ ಜಾನುವಾರಗಳ ಜೊತೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ರೈತರ ಫಸಲುಗಳು ಉಳಿಯುವುದು ಕಷ್ಟವಾಗಿದೆ. ಇಂತಹ ಸಮಯದಲ್ಲಿ ಟೆಂಡರ್ ಕರೆದು ಮರಳು ತುಂಬುತ್ತೇವೆ ಎಂದು ತಹಶೀಲ್ದಾರ್‌ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕೆಲವು ರೈತರು ಕೈಯಲ್ಲಿ ವಿಷದ ಬಾಟಲಿ ಹಿಡಿದು, ‘ಪ್ರಾಣ ಬೇಕಾದರೂ ಕೊಡುತ್ತೇವೆ ಇಲ್ಲಿಂದ ಒಂದು ಹಿಡಿ ಮರಳು ಕೊಡುವುದಿಲ್ಲ’ ಎಂದು ಪಟ್ಟು ಹಿಡಿದು ಕುಳಿತರು. ಅಧಿಕಾರಿಗಳು ಅವರನು ಮನವೊಲಿಸಲು ಪ್ರಯತ್ನಿಸಿದರು. ಗುತ್ತಿಗೆದಾರರು ಟೆಂಡರ್ ಕರೆದು ಒಂದು ವರ್ಷ ಕಳೆದಿದೆ. ಅವರು ಸರ್ಕಾರಕ್ಕೆ ತೆರಿಗೆ ಕಟ್ಟಿ ಟೆಂಡರ್ ಮೂಲಕ ನಿಯಮಿತವಾಗಿ ಮರಳನ್ನು ತುಂಬುತ್ತಾರೆ. ಅವರಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಅದಕ್ಕೂ ಮಣಿಯದ ರೈತರನ್ನು ಬಂಧಿಸಿ, ಸಂಜೆ ವೇಳೆಗೆ ಬಿಡುಗಡೆ ಮಾಡಿದರು. ಗುತ್ತಿಗೆದಾರರಿಗೆ ಕೆಲಸ ಮಾಡಲು ಅನುವು ಮಾಡಿಕೊಟ್ಟರು.

ಕಳೆದ ಒಂದು ವರ್ಷದ ಹಿಂದೆಯೇ ಟೆಂಡರ್ ಆಗಿದ್ದು ಈಗಾಗಲೇ ಹಲವು ಬಾರಿ ಗುತ್ತಿಗೆದಾರರು ಮರಳು ತೆಗೆಯಲು ಬಂದಾಗ ರೈತರು ಪ್ರತಿಭಟನೆ ಮಾಡಿ ಅವರನ್ನು ವಾಪಸ್ ಕಳುಹಿಸಿದ್ದರು. ಈ ಬಾರಿ ಹೆಚ್ಚಿನ ಪೊಲೀಸರೊಂದಿಗೆ ಬಂದು ನಮ್ಮ ಮೇಲೆ ದೌರ್ಜನ್ಯ ಎಸಗಿ ಮರಳು ಗಣಿಗಾರಿಕೆ ಮಾಡುವವರಿಗೆ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ರೈತರಿಗೆ ಕುಡಿಯಲು ನೀರಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಗಮನವಿಲ್ಲ. ಅನೇಕ ಬಾರಿ ಸಮಸ್ಯೆ ಬಗ್ಗೆ ತಹಶೀಲ್ದಾರರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗ ಮುಂದಾಗಲಿಲ್ಲ ಗುತ್ತಿಗೆದಾರರಿಗೆ ರಕ್ಷಣೆ ನೀಡಲು ಅಧಿಕಾರಿಗಳ ದಂಡೇ ಬಂದಿದೆ ಎಂದು ರೈತರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಶ್ರೀನಿವಾಸ್, ಮಂಜುನಾಥ್, ಮಾರುತೇಶ, ನಾಗೇಶ್, ರಂಗಸ್ವಾಮಿ, ಕೆಂಚಪ್ಪ, ಈಶ್ವರಮ್ಮ, ಭಾಗ್ಯಮ್ಮ, ಶಿವಮ್ಮ, ವಿನೋದಮ್ಮ, ಮಂಜಕ್ಕ, ಲಲಿತಮ್ಮ ಇದ್ದರು.

ಬರ ಪರಿಹಾರ ಯೋಜನೆಗಳನ್ನು ಹಾಕಿಕೊಳ್ಳದೆ ಬರಪೀಡಿತ ತಾಲ್ಲೂಕಿನ ರೈತರ ಮೇಲೆ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಮರಳು ತೆಗೆಯಲು ಬಿಡುವುದಿಲ್ಲ ಎಂದು ರೈತರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT