ನ್ಯಾಕ್‌ ‘ಎ’ ಗ್ರೇಡ್ ಪಡೆಯುವುದೇ ನಮ್ಮ ಗುರಿ: ಹಲಸೆ

ಗುರುವಾರ , ಜೂಲೈ 18, 2019
29 °C

ನ್ಯಾಕ್‌ ‘ಎ’ ಗ್ರೇಡ್ ಪಡೆಯುವುದೇ ನಮ್ಮ ಗುರಿ: ಹಲಸೆ

Published:
Updated:

ದಾವಣಗೆರೆ: ‘ನ್ಯಾಕ್‌ ಸಮಿತಿಯು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ‘ಬಿ’ ಗ್ರೇಡ್‌ ನೀಡಿದೆ. ಹೊಸ ವಿಶ್ವವಿದ್ಯಾಲಯ ಆಗಿರುವುದರಿಂದ ಎಲ್ಲ ಅಗತ್ಯಗಳನ್ನು ತುಂಬುತ್ತಾ ಬರಲಾಗಿದೆ. ನನ್ನ ಅವಧಿ ಮುಗಿಯುವ ಒಳಗೆ ‘ಎ’ ಗ್ರೇಡ್‌ ಪಡೆಯುವ ಗುರಿ ಇದೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲ‍ಪತಿ ಡಾ. ಎಸ್‌.ವಿ. ಹಲಸೆ ತಮ್ಮ ಕನಸನ್ನು ಹಂಚಿಕೊಂಡರು.

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಕರೆ ಮಾಡಿದ ದಾವಣಗೆರೆಯ ವೆಂಕಟೇಶ್‌ ಬಾಬು, ‘ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಮೇಳ ಮಾಡಬೇಕು. ವಿಶ್ವವಿದ್ಯಾಲಯದಲ್ಲಿ ಉದ್ಯೋಗಾಧಾರಿತ ಕೋರ್ಸ್‌ಗಳನ್ನು ಹೆಚ್ಚು ಆರಂಭಿಸಬೇಕು. ವಿ.ವಿ. ಜೊತೆಗೆ ಕಾಲೇಜುಗಳನ್ನೂ ಅಭಿವೃದ್ಧಿಪಡಿಸಬೇಕು’ ಎಂಬ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ, ‘ವಿಶ್ವವಿದ್ಯಾಲಯ ಮತ್ತು ಅದರ ಅಡಿ ಬರುವ ಕಾಲೇಜುಗಳು ಒಟ್ಟೊಟ್ಟಿಗೆ ಅಭಿವೃದ್ಧಿಯಾಗಬೇಕು. ಕಾಲೇಜು ಬೆಳೆದರೆ ವಿಶ್ವವಿದ್ಯಾಲಯಗಳು ಬೆಳೆದಂತೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಉದ್ಯೋಗ ಮೇಳಗಳನ್ನು ಮಾಡುತ್ತಿದ್ದೇವೆ. ಅಜೀಂ ಪ್ರೇಮ್‌ಜಿ ಫೌಂಡೇಶನ್‌ ಇತ್ತೀಚೆಗೆ ನಡೆಸಿದ ಉದ್ಯೋಗ ಮೇಳದಲ್ಲಿ 25 ಮಂದಿಯನ್ನು ಆಯ್ಕೆ ಮಾಡಿದೆ. ಮೂರು ಮಂದಿಗೆ ಉದ್ಯೋಗ ನೀಡಿದೆ. ಕೇಂದ್ರ ಸರ್ಕಾರದ ಮದನ್‌ಮೋಹನ್‌ ಮಾಳವೀಯ ಯೋಜನೆಯಡಿ ಹೊಸ ಸಿಬ್ಬಂದಿಗೆ ತರಬೇತಿ ನೀಡುವ, ಅವರನ್ನು ಕೌಶಲಭರಿತರನ್ನಾಗಿ ಮಾಡಲು ಅನುದಾನ ತರಲಾಗುತ್ತಿದೆ. ಆರು ವರ್ಷಗಳಿಂದ ನಿರ್ಮಿಸಿದ ಕಟ್ಟಡ ಮತ್ತಿತರ ಕಾರ್ಯಗಳಿಗೆ ಕೊಡಲು ಬಾಕಿ ಇರುವ ₹ 6.91 ಕೋಟಿಯನ್ನು ಇದೇ ಅನುದಾನದಲ್ಲಿ ನೀಡಲಾಗುವುದು’ ಎಂದು ಹೇಳಿದರು.

* ಮಗಳು ಭೌತಶಾಸ್ತ್ರದಲ್ಲಿ ಎಸ್‌ಇಟಿ ಮಾಡಿದ್ದಾಳೆ. ಉದ್ಯೋಗ ಯಾವಾಗ ಸಿಗುತ್ತದೆ?

– ರೇವಣ್ಣ ಸಿದ್ಧಪ್ಪ, ವಿದ್ಯಾನಗರ, ದಾವಣಗೆರೆ

ವಿಶ್ವವಿದ್ಯಾಲಯದಿಂದ ಅಧಿಸೂಚನೆ ಹೊರಡಿಸಿದಾಗ ಅರ್ಜಿ ಸಲ್ಲಿಸಬೇಕು. ಹಾಗಂತ ಅದನ್ನೇ ನಂಬಿ ಕುಳಿತುಕೊಳ್ಳಬೇಡಿ. ಸರ್ಕಾರಿ ಪದವಿ ಕಾಲೇಜುಗಳ ಹುದ್ದೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದಾಗಲೂ ಅರ್ಜಿ ಸಲ್ಲಿಸುವಂತೆ ಹೇಳಿ.

* ದ್ವಿತೀಯ ಪಿಯು ಮುಗಿದ ಬಳಿಕ ಹಣದ ಸಮಸ್ಯೆಯಿಂದ ಎರಡು ವರ್ಷ ಕೆಲಸ ಮಾಡಿದೆ. ಈಗ ಡಿಗ್ರಿ ಮಾಡೋಣ ಎಂದರೆ ವಿಶ್ವವಿದ್ಯಾಲಯದಿಂದ ಪರವಾನಗಿ ಪತ್ರ ತರಬೇಕು ಎಂದು ಕಾಲೇಜಿನರು ಹೇಳುತ್ತಿದ್ದಾರೆ. ಏನು ಮಾಡಲಿ? ಶುಲ್ಕ ₹ 690 ಇದೆ. ಬಡವರಿಗೆ ಇದು ಜಾಸ್ತಿಯಾಗುವುದಿಲ್ಲವೇ?

– ಮಂಜುನಾಥ, ಕಣಗನಹಳ್ಳಿ, ಹಿರಿಯೂರು

ನೀವು ಸೇರಲು ಬಯಸುವ ಕಾಲೇಜಿನಿಂದ ನಿಮ್ಮನ್ನು ಸೇರಿಸಿಕೊಳ್ಳುವ ಬಗ್ಗೆ ಪತ್ರ ತನ್ನಿ. ನಾವು ‍ಪರವಾನಿಗೆ ಪತ್ರ ಕೊಡುತ್ತೇವೆ. ಒಬ್ಬ ವಿದ್ಯಾರ್ಥಿಯು ಕನಿಷ್ಠ ಶೇ 75ರಷ್ಟು ಹಾಜರಾತಿ ಹೊಂದಿರಬೇಕು. ಕಾಲೇಜಿನ ಆರಂಭದಲ್ಲೇ ಸೇರಿಕೊಂಡರೆ ಸಮಸ್ಯೆ ಇರುವುದಿಲ್ಲ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಸೇರಿಕೊಂಡರೆ ಭಾನುವಾರ ಕೂಡ ಪಾಠ ಮಾಡಿ ಅದನ್ನು ಸರಿದೂಗಿಸಬೇಕಾಗುತ್ತದೆ. ಇನ್ನು ಶುಲ್ಕವನ್ನು ಸಿಂಡಿಕೇಟ್‌ ತೀರ್ಮಾನಿಸುತ್ತದೆ. ಈ ಬಗ್ಗೆ ಸಿಂಡಿಕೇಟ್‌ನಲ್ಲಿ ಚರ್ಚಿಸಲಾಗುವುದು.

* ಬಿ.ಎ. ಅಂತಿಮ ವರ್ಷದ ಪರೀಕ್ಷೆ ನಡೆಯುತ್ತಿದೆ. ಬಿ.ಇಡಿಗೆ ಅರ್ಜಿ ಸಲ್ಲಿಸಬಹುದೇ?

– ಗಿರೀಶ್‌, ಮೊಳಕಾಲ್ಮುರು

ಡಿಗ್ರಿ ಮುಗಿದು ಪ್ರಮಾಣ ಪತ್ರ ಪಡೆದ ಬಳಿಕವಷ್ಟೇ ಅರ್ಜಿ ಸಲ್ಲಿಸಬಹುದು. ಡಿಗ್ರಿ ಮಾಡುತ್ತಿರುವಾಗಲೇ ಬಿ.ಇಡಿ ಮಾಡಲು ಬರುವುದಿಲ್ಲ.

* ಡಿಗ್ರಿ ಆಗಿದೆ. ಎಲ್‌ಎಲ್‌ಬಿ ಮಾಡಬಹುದೇ? ಯುಪಿಎಸ್‌ಸಿ ಪರೀಕ್ಷೆ ಬರೆಯಲು ಅವಕಾಶ ಇದೆಯೇ?

– ನಂದಿನಿ, ಚಳ್ಳಕೆರೆ

ನಮ್ಮ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾನೂನು ಕಾಲೇಜುಗಳು ಇಲ್ಲ. ಕಾನೂನು ವಿದ್ಯಾಲಯವೇ ಬೇರೆ ಇದೆ. ಅಲ್ಲಿ ಮಾಡಬಹುದು. ಹಿಂದೆ 28 ವರ್ಷಗಳ ಒಳಗಿನವಷ್ಟೇ ಯುಪಿಎಸ್‌ಸಿ ಪರೀಕ್ಷೆ ಬರೆಯಬಹುದಿತ್ತು. ಈಗ 32ಕ್ಕೆ ಏರಿಸಿದ್ದಾರೆ. ವಿದ್ಯಾನಗರದಲ್ಲಿರುವ ಫೈನ್‌ ಆರ್ಟ್ಸ್‌ ಕಾಲೇಜಿನಲ್ಲಿ ಡಿಸೆಂಬರ್‌ನಿಂದ ವಿಶ್ವವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ನೀಡಲಾಗುವುದು. ಹೊರಗಿನ ಆಸಕ್ತ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗುವುದು.

* ಡಿಗ್ರಿ ಮುಗಿದಿದೆ. ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡಿದ್ದಾರೆ. ಪರೀಕ್ಷೆಯಲ್ಲಿ ನಾನು ಇಂಗ್ಲಿಷ್‌ ಮಾಧ್ಯಮದಲ್ಲೇ ಉತ್ತರ ಬರೆದಿದ್ದೇನೆ. ನನಗೆ ಇಂಗ್ಲಿಷ್‌ ಮಾಧ್ಯಮ ಎಂದು ಪ್ರಮಾಣಪತ್ರ ನೀಡಲು ಸಾಧ್ಯವೇ?

– ಸಿದ್ದೇಶ್‌, ದೊಡ್ಡಬಾತಿ

ಹಾಗೆ ಒಂದು ತರಗತಿಯಲ್ಲಿ ಒಬ್ಬರಿಗೊಂದು, ಇನ್ನೊಬ್ಬರಿಗೊಂದು ಮಾಧ್ಯಮ ನಮೂದಿಸಲು ಬರುವುದಿಲ್ಲ. ಕಾಲೇಜಿನಲ್ಲಿ ಯಾವ ಮಾಧ್ಯಮ ಎಂದು ನಮೂದಿಸಿರುತ್ತಾರೋ ಅದೇ ಪ್ರಮಾಣಪತ್ರದಲ್ಲೂ ದಾಖಲಾಗುತ್ತದೆ.

* ಎಸ್‌ಸಿ–ಎಸ್‌ಟಿ ವಸತಿ ನಿಲಯಗಳಲ್ಲಿ ಊಟದ ಗುಣಮಟ್ಟ ಸರಿ ಇಲ್ಲ.

– ಸುರೇಶ್‌, ಹರಿಹರ

ವಿಶ್ವವಿದ್ಯಾಲಯದ ವಸತಿ ನಿಲಯಗಳಲ್ಲಿ ಎಸ್‌ಸಿಪಿ– ಟಿಎಸ್‌ಪಿ ಅನುದಾನದ ಮೂಲಕ ಶುಲ್ಕ ಕಟ್ಟಿಸಿಕೊಳ್ಳದೇ ಪರಿಶಿಷ್ಟ ಜಾತಿ, ಪಂಗಡದ ಮಕ್ಕಳಿಗೆ ಆಹಾರ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ತೊಂದರೆ ಇಲ್ಲ. ಆಯಾ ಕಾಲೇಜಿನ ವಸತಿ ನಿಲಯಗಳಿಗೆ ಕಾಲೇಜಿನವರೇ ಜವಾಬ್ದಾರರು.

* ಮರುಮೌಲ್ಯಮಾಪನದ ಫಲಿತಾಂಶ ತಡವಾಗುತ್ತಿದೆ. ಮರುಪರೀಕ್ಷೆ ಘೋಷಣೆಯಾಗುವ ಮೊದಲು ಫಲಿತಾಂಶ ಬಾರದೇ ಇದ್ದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ.

– ಕರಿಬಸಪ್ಪ, ಉಪನ್ಯಾಸಕ, ಹರಿಹರ

ಮರು ಮೌಲ್ಯಮಾಪನವನ್ನು ವೇಗವಾಗಿ ಮಾಡಲು ವ್ಯವಸ್ಥೆ ಮಾಡುತ್ತಿದ್ದೇವೆ. ಮೌಲ್ಯಮಾಪನ ಮುಗಿದ ಎರಡು ಮೂರು ದಿನಗಳ ಒಳಗೆ ಫಲಿತಾಂಶ ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ.

* ಸ್ನಾತಕೋತ್ತರ ಪದವಿ ಪ್ರವೇಶ ಪಡೆಯಲು ಸಾಧ್ಯವಾಗದವರಿಗೆ ಡಿಪ್ಲೊಮಾ ಕೋರ್ಸ್‌ ಪಡೆಯಲು ಅವಕಾಶ ಇದೆಯೇ?

– ರವಿ, ಚನ್ನಗಿರಿ

ಈಗಾಗಲೇ ಕಾಮರ್ಸ್‌ ವಿಭಾಗದಲ್ಲಿ ಸರ್ಟಿಫಿಕೇಟ್‌ ಕೋರ್ಸ್‌ ಆರಂಭಿಸಿದ್ದೇವೆ. ಉಳಿದ ವಿಭಾಗಗಳಲ್ಲೂ ಆರಂಭಿಸುವ ಯೋಜನೆ ಇದೆ.

* 10 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇನೆ. ಕುವೆಂಪು ವಿಶ್ವವಿದ್ಯಾಲಯ ಸಹಿತ ಹಲವು ವಿಶ್ವವಿದಾಲಯಗಳಲ್ಲಿ 5 ವರ್ಷ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದವರ ಸೇವೆ ಕಾಯಂಗೊಳಿಸಲಾಗಿದೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಆಗಿಲ್ಲ. ನಮ್ಮ ವಯಸ್ಸು ಮೀರುತ್ತಿದೆ.

– ಶೋಭಾ ನಾಯ್ಕ್‌, ದಾವಣಗೆರೆ

– ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ 10 ವರ್ಷ ತುಂಬಿರಬೇಕು. ಕಳೆದ ಬಾರಿ ಪರಿಶೀಲಿಸಿದಾಗ 9 ವರ್ಷಗಳು ದಾಟಿದ್ದವು. 10 ಆಗಿರಲಿಲ್ಲ. ಈ ಬಾರಿ ಮಾಡುತ್ತೇವೆ.

* ಉದ್ಯೋಗ ನೀಡುವ ಕಂಪನಿಗಳ ನಿರೀಕ್ಷೆಗೆ ಸರಿಯಾಗಿ ಪಠ್ಯಗಳು ಅಪ್‌ಟುಡೇಟ್‌ ಆಗುತ್ತಿಲ್ಲ. ಉದ್ಯೋಗ ಬಯಸಿ ಹೋದಾಗ ಕೆಲಸ ಕೊಡಲು ನಿರಾಕರಿಸುತ್ತಾರೆ.

– ಮಲ್ಲೇಶ್‌ ನಾಯ್ಕ್‌, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ, ದಾವಣಗೆರೆ

ಬೋರ್ಡ್‌ ಆಫ್‌ ಸ್ಟಡೀಸ್‌ ಸಿಲೇಬಸ್‌ ತಯಾರಿಸುತ್ತದೆ. ಸಾಮಾನ್ಯವಾಗಿ ಮೂರು ವರ್ಷಗಳಿಗೊಮ್ಮೆ ‍ಪಠ್ಯ ಪರಿಷ್ಕರಣೆ ಮಾಡಲಾಗುತ್ತದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪಠ್ಯ ತಯಾರಿಸುವ ಜವಾಬ್ದಾರಿ ವಿಷಯ ತಜ್ಞರದ್ದಾಗಿದೆ. ಕಾಲೇಜಿನ ಉಪನ್ಯಾಸಕರು ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಎಲ್ಲಾ ವಿಭಾಗಗಳ ಉಪನ್ಯಾಸಕರಿಗೆ ಈ ಬಗ್ಗೆ ಸೂಚನೆ ನೀಡುತ್ತೇನೆ.

* ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನುರಿತ ಉಪನ್ಯಾಸಕರು ಇದ್ದಾರೆ. ಅವರು ದಿನಕ್ಕೆ ಒಂದು ಗಂಟೆ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ತರಗತಿ ತೆಗೆದುಕೊಳ್ಳಬೇಕು. ಸುಸಜ್ಜಿತ ಗ್ರಂಥಾಲಯ ಇರಬೇಕು.

– ಷಣ್ಮುಖಪ್ಪ, ದಾವಣಗೆರೆ

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗಾಗಿ ಫೈನ್‌ಆರ್ಟ್ಸ್‌ ಕಾಲೇಜಿನಲ್ಲಿ ತರಬೇತಿ ಕೋರ್ಸ್‌ ಆರಂಭಿಸಲಾಗುತ್ತಿದೆ. ಸಾಮಾನ್ಯವಾಗಿ ಜೂನ್‌ನಲ್ಲಿ ಪ್ರಿಲಿಮನರಿ ಪರೀಕ್ಷೆ ಇರುತ್ತದೆ. ಅದಕ್ಕಾಗಿ ಡಿಸೆಂಬರ್‌ನಿಂದ ತರಬೇತಿ ಆರಂಭಿಸುತ್ತೇವೆ. ಸುಸಜ್ಜಿತ ಕಂಪ್ಯೂಟರ್‌ ಲೈಬ್ರೆರಿ ತೆರೆಯಲಾಗಿದ್ದು, ವಿದ್ಯಾರ್ಥಿಗಳಿಗೆ ಅಗತ್ಯ ಇರುವ ಎಲ್ಲವೂ ಅಲ್ಲಿ ಸಿಗಲಿದೆ.

* ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಫಲಿತಾಂಶ ತಡವಾಗಿ ಬರುತ್ತದೆ. ಅಷ್ಟು ಹೊತ್ತಿಗೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶವೂ ಮುಗಿದು ಹೋಗಿರುತ್ತದೆ.

– ಪಾಪಣ್ಣ, ಚಳ್ಳಕೆರೆ

ಸಾಧ್ಯವಾದಷ್ಟು ಬೇಗ ಫಲಿತಾಂಶ ನೀಡಲು ಪ್ರಯತ್ನ ಮಾಡಿದ್ದೇವೆ. ಮೌಲ್ಯಮಾಪನ ಮುಗಿದ 2–3 ದಿನಗಳ ಒಳಗೆ ಫಲಿತಾಂಶ ಘೊಷಣೆ ಮಾಡಲಾಗುವುದು.

* ಬಿ.ಇಡಿ ನಾಲ್ಕು ವರ್ಷಗಳ ಕೋರ್ಸ್‌ ಈ ವರ್ಷದಿಂದ ಆರಂಭವಾಗಲಿದೆಯೇ?

– ಎಸ್‌. ಬಸವರಾಜ್‌, ಡಯಟ್‌ ಉಪನ್ಯಾಸಕ, ಚಿತ್ರದುರ್ಗ

ನಾಲ್ಕು ವರ್ಷಗಳ ಬಿ.ಇಡಿ ಕೋರ್ಸ್‌ ನಡೆಸುವ ವಿಷಯ ಇನ್ನೂ ಸರ್ಕಾರದ ಹಂತದಲ್ಲಿದೆ. ಹೀಗಾಗಿ ಈ ವರ್ಷ ಹಿಂದಿನಂತೆ ಎರಡು ವರ್ಷಗಳ ಕೋರ್ಸ್‌ ಮುಂದುವರಿಯುತ್ತದೆ.

* ಬಿ.ಎಸ್ಸಿ ಆಗಿದೆ. ಎಂ.ಎಸ್ಸಿ ಮಾಡಬೇಕು. ಹೇಗೆ ಮಾಡುವುದು? ಶುಲ್ಕ ಎಷ್ಟು?

– ಪ್ರೇಮಾ, ಚಳ್ಳಕೆರೆ

ಪ್ರವೇಶ ಪರೀಕ್ಷೆ ಬರೆಯಬೇಕು. ಶುಲ್ಕಗಳು ಬೇರೆ ಬೇರೆ ಕೋರ್ಸ್‌ಗಳಿಗೆ ಬೇರೆ ಬೇರೆ ಇರುತ್ತದೆ. ಈ ವರ್ಷದಿಂದ ವಿದ್ಯಾರ್ಥಿನಿಯರಿಗೆ ಶುಲ್ಕವೇ ಇಲ್ಲ ಎಂದು ಘೋಷಣೆಯಾಗಿದೆ.

* ಮಗ ಬಿಕಾಂ ಮಾಡಿದ್ದಾನೆ. ಎಂಕಾಂ ಪ್ರವೇಶ ಹೇಗೆ?

– ಬಸವರಾಜ್‌, ಜವಳಘಟ್ಟ

ಸಿಇಟಿ ಬರೆಯಬೇಕು. ಜೂನ್‌ 25ರ ನಂತರ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು. ಅಲ್ಲಿಂದ ಒಂದು ತಿಂಗಳ ಕಾಲ ಅವಕಾಶ ಇರುತ್ತದೆ.

* ಬಿಕಾಂ ದ್ವಿತೀಯ ವರ್ಷ ಮುಗಿದಿದೆ. ಅಂತಿಮ ಬಿಕಾಂ ಅನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಡಬೇಕೆಂದಿದ್ದೇನೆ. ಹಾಗೆ ಬದಲಾಯಿಸಲು ಅವಕಾಶ ಇದೆಯೇ?

– ನಿಖಿಲಾ, ಚನ್ನಗಿರಿ

ನಮ್ಮ ವಿಶ್ವವಿದ್ಯಾಲಯದಿಂದ ಮೈಗ್ರೇಶನ್‌ ಸರ್ಟಿಫಿಕೇಟ್‌ ಪಡೆದು, ಬೆಂಗಳೂರಿನಲ್ಲಿ ಶಿಕ್ಷಣವನ್ನು ಮುಂದುವರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !