ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಕಾಲೇಜು ಉಳಿಸಲು ಬೆಂಗಳೂರಿಗೆ ಪಾದಯಾತ್ರೆ: ಶಾಸಕ ಟಿ.ರಘುಮೂರ್ತಿ

ಹೋರಾಟ ತೀವ್ರಗೊಳಿಸಲು ನಿರ್ಧಾರ
Last Updated 9 ಆಗಸ್ಟ್ 2020, 13:43 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ವಿರೋಧಿಸಿ ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿರುವ ಶಾಸಕ ಟಿ.ರಘುಮೂರ್ತಿ ಅವರು ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ಘೋಷಣೆ ಮಾಡಿದರು.

‘ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಅಡ್ಡಿಪಡಿಸಿವೆ. ಒನಕೆ ಓಬವ್ವ ವೃತ್ತದ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದೇವೆ. ಸೋಮವಾರ ತುರುವನೂರಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಲಾಗುವುದು’ ಎಂದು ಶಾಸಕ ಟಿ.ರಘುಮೂರ್ತಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ 463 ಪದವಿ ಕಾಲೇಜುಗಳಿವೆ. ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ಕ್ಕೂ ಕಡಿಮೆ ಇದೆ. ನೂತನ ಕಾಲೇಜು ಮಂಜೂರಾತಿಗೆ ಬಿಜೆಪಿ ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹೊಸ ಕಾಲೇಜು ಆರಂಭಿಸುವ ಬದಲು ಕಾಂಗ್ರೆಸ್‌ ಶಾಸಕ ಕ್ಷೇತ್ರದ ಕಾಲೇಜುಗಳನ್ನು ಸ್ಥಳಾಂತರಿಸುವುದು ರಾಜಕೀಯ ಪ್ರೇರಿತ. ಈ ಬಗ್ಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಗಮನ ಸೆಳೆಯಲಾಗುವುದು’ ಎಂದು ಹೇಳಿದರು.

‘ತುರುವನೂರು ಅತ್ಯಂತ ಹಿಂದುಳಿದ ಪ್ರದೇಶ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದ ಕಾಲೇಜಿನಿಂದ ವಿದ್ಯಾರ್ಥಿನಿಯರಿಗೆ ಅನುಕೂಲವಾಗಿದೆ. ಶಾಸಕ ಸ್ಥಾನ ಕಳೆದುಕೊಂಡರೂ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಕಾಲೇಜು ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಮಾಜಿ ಸದಸ್ಯ ರವಿಕುಮಾರ್‌, ಕಾಂಗ್ರೆಸ್‌ ಮುಖಂಡ ಬಾಲಕೃಷ್ಣಸ್ವಾಮಿ ಇದ್ದರು.

ಮಠಾಧೀಶರ ಬೆಂಬಲ

ತುರುವನೂರು ಸರ್ಕಾರಿ ಪದವಿ ಕಾಲೇಜು ಉಳಿಸಲು ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ದಲಿತ ಮತ್ತು ಹಿಂದುಳಿದ ಸಮುದಾಯದ ಮಠಾಧೀಶರ ಒಕ್ಕೂಟದ ಬೆಂಬಲವಿದೆ ಎಂದು ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ತಿಳಿಸಿದರು.

ಕರ್ನಾಟಕ ನವನಿರ್ಮಾಣ ಸೇನೆ ಹಮ್ಮಿಕೊಂಡಿರುವ ಸಹಿ ಸಂಗ್ರಹ ಚಳವಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಬರದ ನಾಡಿನ ಕಾಲೇಜನ್ನು ಬೇರೆಡೆಗೆ ಸ್ಥಳಾಂತರ ಮಾಡುವುದು ನಿಜಕ್ಕೂ ಅನ್ಯಾಯ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರೇ ಹೆಚ್ಚಾಗಿರುವ ಪ್ರದೇಶ ಇನ್ನಷ್ಟು ಹಿಂದುಳಿಯುತ್ತದೆ. ಬಡ ವಿದ್ಯಾರ್ಥಿಗಳ ಪರವಾಗಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳುವ ಇಚ್ಛೆ ಎಲ್ಲ ಮಠಾಧೀಶರಿಗೂ ಇದೆ’ ಎಂದು ಹೇಳಿದರು.

‘ಕಾಲೇಜು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್‌ ನಾರಾಯಣ ಅವರೊಂದಿಗೆ ಚರ್ಚಿಸಲಾಗುವುದು. ರಾಜಕೀಯ ದುರುದ್ದೇಶದಿಂದ ಕಾಲೇಜು, ಯೋಜನೆ ಕಿತ್ತುಕೊಳ್ಳುವುದು ತಪ್ಪು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೆಚ್ಚು ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಟಿ.ರಘುಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಶಿವಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT