ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠಕ್ಕೆ ಉತ್ತರಾಧಿಕಾರಿ ನೇಮಕ: ಸಂತಸದಿಂದ ಸಮ್ಮತಿ ಸೂಚಿಸಿದ ಪೋಷಕರು

ಮುರುಘಾ ಮಠಕ್ಕೆ ಕರೆತಂದಿತು ಬಸವತತ್ವದ ಬಗೆಗಿನ ಸೆಳೆತ
Last Updated 28 ಮೇ 2022, 3:47 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮಗ ಸನ್ಯಾಸದೀಕ್ಷೆ ಸ್ವೀಕರಿಸಿ ಮಠದ ಉತ್ತರಾಧಿಕಾರಿಯಾಗಲು ಸಂಪೂರ್ಣ ಒಪ್ಪಿಗೆ ಇದೆ. ಪ್ರತಿಷ್ಠಿತ ಮಠದ ಸಾರಥ್ಯವನ್ನು ಪುತ್ರ ವಹಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಧರ್ಮ ಮತ್ತು ಸಮಾಜಸೇವೆಗೆ ಜೀವನ ಸಮರ್ಪಣೆ ಮಾಡಿಕೊಳ್ಳುತ್ತಿರುವುದಕ್ಕೆ ಏಕೆ ದುಃಖಪಡಬೇಕು...’

ಮುರುಘಾ ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡ ಬಸವಾದಿತ್ಯ ದೇವರು ಅವರ ಪೂರ್ವಾಶ್ರಮದ ತಾಯಿ ಚಂದ್ರಕಲಾ ಅವರ ಪ್ರಶ್ನೆ ಇದು. ಪುತ್ರನು ಮಠದ ಉತ್ತರಾಧಿಕಾರಿಯಾಗುವುದಕ್ಕೆ ಅವರು ಸಮ್ಮತಿಸಿದ್ದಾರೆ. ಇದೊಂದು ಸಂತಸದ ಸಂದರ್ಭದಂತೆ ಅವರು ಸಂಭ್ರಮಿಸಿದರು.

ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಗ್ರಾಮದ ಶಿವಮೂರ್ತಯ್ಯ ಹಾಗೂ ಚಂದ್ರಕಲಾ ದಂಪತಿಯ ಪುತ್ರ ಬಸವಾದಿತ್ಯ. ಮೊದಲ ಪುತ್ರಿ ಅಮೂಲ್ಯ, ದಾವಣಗೆರೆಯಲ್ಲಿ ಬಿಎಎಂಎಸ್‌ ವ್ಯಾಸಂಗ ಮಾಡುತ್ತಿದ್ದಾರೆ. ಕೆನರಾ ಬ್ಯಾಂಕಿನಲ್ಲಿ ಪಿಗ್ಮಿ ಸಂಗ್ರಹಿಸುತ್ತಿದ್ದ ಶಿವಮೂರ್ತಯ್ಯ ಅವರಿಗೆ ಸ್ವಗ್ರಾಮದಲ್ಲಿ ಜಮೀನು ಇದೆ. 2010ರಿಂದ ಚಿತ್ರದುರ್ಗದ ವಿದ್ಯಾನಗರದಲ್ಲಿ ನೆಲೆಸಿದ್ದಾರೆ.

2005ರ ಮಾರ್ಚ್‌ 6ರಂದು ಜನಿಸಿದ ಬಸವಾದಿತ್ಯ ಅವರು 1ರಿಂದ 7ನೇ ತರಗತಿಯವರೆಗೆ ಕಾನ್ವೆಂಟ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. 8ರಿಂದ ಎಸ್ಸೆಸ್ಸೆಲ್ಸಿವರೆಗೆ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಬಳಿಕ ಮುರುಘಾ ಮಠದ ಗುರುಕುಲ ಸೇರಿದ್ದು, ಎಸ್‌ಜೆಎಂ ಸ್ವತಂತ್ರ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದಿದ್ದಾರೆ. ಅಧ್ಯಾತ್ಮ, ಬಸವತತ್ವದ ಬಗೆಗಿನ ಸೆಳೆತ ಚಿಕ್ಕಂದಿನಿಂದಲೂ ಅವರನ್ನು ಮುರುಘಾ ಮಠದತ್ತ ಒಲವು ಮೂಡಿಸಿದೆ.

ದೊಡ್ಡಮ್ಮನಿಂದ ಮಠದ ಸಂಪರ್ಕ:‘ನಾಯಕನಹಟ್ಟಿ ನನ್ನ ತವರು. ಶ್ರೀಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ಬೆಳೆದಿದ್ದರಿಂದ ಬಸವತತ್ವ, ಅಧ್ಯಾತ್ಮದ ಬಗ್ಗೆ ಅರಿವಿತ್ತು. ಮೂರು ದಶಕದಿಂದ ಮಠಕ್ಕೆ ಬರುತ್ತಿದ್ದೆವು. ಪ್ರತಿ ತಿಂಗಳು ನಡೆಯುವ ಆಶೀರ್ವಚನ ಕಾರ್ಯಕ್ರಮವನ್ನು ತಪ್ಪಿಸುತ್ತಿರಲಿಲ್ಲ. ನನ್ನ ಅಕ್ಕ ದಾಕ್ಷಾಯಿಣಿ ಒಬ್ಬರೇ ಬರುವ ಪ್ರಸಂಗ ಎದುರಾಗುತ್ತಿತ್ತು. ಆಗ ಪುತ್ರ ಬಸವಾದಿತ್ಯನನ್ನು ಜೊತೆಗೆ ಕಳುಹಿಸುತ್ತಿದ್ದೆವು. ಗುರುಗಳ ಆಶೀರ್ವಚನ ಪುತ್ರನನ್ನು ಸೆಳೆಯಿತು’ ಎಂದು ಮಠದ ನಂಟು ಬೆಳೆದ ಪರಿಯನ್ನು ಚಂದ್ರಕಲಾ ವಿವರಿಸಿದರು.

ಬಾಲಕನಿಗೆ ಅಧ್ಯಾತ್ಮದಲ್ಲಿ ಒಲವು ಇರುವುದನ್ನು ಗುರುತಿಸಿದ ಶಿವಮೂರ್ತಿ ಮುರುಘಾ ಶರಣರು ಗುರುಕುಲದಲ್ಲಿ ಶಿಕ್ಷಣ ಮುಂದುವರಿಸುವಂತೆ ಸೂಚಿಸಿದ್ದರು. ಎಸ್ಸೆಸ್ಸೆಲ್ಸಿ ಬಳಿಕ ಮತ್ತೊಮ್ಮೆ ಇದೇ ಸೂಚನೆ ಬಂದಾಗ ಪೋಷಕರು ಮಗನನ್ನು ಮಠದ ಸುಪರ್ದಿಗೆ ಒಪ್ಪಿಸಿದರು. ಒಂದೂವರೆ ವರ್ಷದಿಂದ ಬಿಳಿಬಟ್ಟೆ ಧರಿಸಿ ನಿತ್ಯ ಬಸವತತ್ವ ಅಧ್ಯಯನ, ಪಿಯು ವ್ಯಾಸಂಗವನ್ನು ಒಟ್ಟಿಗೆ ಮುಂದುವರಿಸಿದ್ದರು. ಆದರೆ, ಉತ್ತರಾಧಿಕಾರಿ ಬಗ್ಗೆ ಕುಟುಂಬಕ್ಕೆ ಸುಳಿವು ಸಿಕ್ಕಿರಲಿಲ್ಲ ಎನ್ನಲಾಗಿದೆ.

ಪೋಷಕರಿಗೆ ಶರಣರ ಕರೆ:‘ಗುರುಗಳೊಂದಿಗೆ ಉತ್ತರಕರ್ನಾಟಕಕ್ಕೆ ಪ್ರಯಾಣ ಮಾಡಿದ್ದ ಮಗ ಗುರುವಾರ ರಾತ್ರಿ ಮನೆಗೆ ಬಂದಿದ್ದರು. ಮಡಿ ಬಟ್ಟೆಯನ್ನು ತೆಗೆದುಕೊಂಡು ಮಠಕ್ಕೆ ಮರಳುವ ಸಿದ್ಧತೆಯಲ್ಲಿದ್ದರು. ಆಗ ಪುತ್ರನ ಮೊಬೈಲ್‌ಗೆ ಶರಣರು ಕರೆ ಮಾಡಿದರು. ಆಗ ನಮ್ಮೊಂದಿಗೆ ಮಾತನಾಡಿದ ಗುರುಗಳು, ಪುತ್ರನಿಗೆ ಹೊಸ ಜವಾಬ್ದಾರಿ ನೀಡುತ್ತಿದ್ದು, ತಪ್ಪದೇ ಹಾಜರಾಗುವಂತೆ ಸೂಚಿಸಿದರು. ಗುರುಗಳ ಆಜ್ಞೆಯಂತೆ ಶುಕ್ರವಾರ ಬೆಳಿಗ್ಗೆ ಮಠಕ್ಕೆ ಬಂದಾಗ ವಿಷಯ ಗೊತ್ತಾಗಿದ್ದು’ ಎಂದರು.

‘ಮಠ ಹಾಗೂ ಜವಾಬ್ದಾರಿಯ ಕುರಿತು ಗುರುಗಳು ಪುತ್ರನೊಂದಿಗೆ ಗಹನವಾಗಿ ಚರ್ಚಿಸಿದಂತೆ ಕಾಣುತ್ತಿದೆ. ಎಷ್ಟೋ ವಿಚಾರಗಳನ್ನು ಮಗ ನಮ್ಮೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಧಾರ್ಮಿಕ ಜೀವನದತ್ತ ಒಲವು ಬೆಳೆಸಿಕೊಂಡಾಗ ಪ್ರೋತ್ಸಾಹ ನೀಡಿದೆವು. ಎಲ್ಲರೂ ವೈದ್ಯ, ಎಂಜಿನಿಯರ್‌ಗಳಾದರೆ ಸಮಾಜಕ್ಕೆ ಪ್ರಯೋಜನವೇನು’ ಎಂದರು.

*
2021ರ ಜೂನ್‌ ತಿಂಗಳಲ್ಲಿ ಕುಟುಂಬದ ಇತರ ನಾಲ್ವರೊಂದಿಗೆ ಪುತ್ರ ಲಿಂಗದೀಕ್ಷೆ ಪಡೆದಿದ್ದರು. ಬಸವತತ್ವ, ಪೂಜಾ ಕೈಂಕರ್ಯ ಕಲಿಯಲು ಮಠದಲ್ಲೇ ಉಳಿದರು. ಉತ್ತರಾಧಿಕಾರಿ ನೇಮಕ ಅನಿರೀಕ್ಷಿತ.
–ಚಂದ್ರಕಲಾ, ಬಸವಾದಿತ್ಯರ ಪೂರ್ವಾಶ್ರಮದ ತಾಯಿ

*
ಕುಟುಂಬವನ್ನು ತೊರೆದು ವಿದೇಶದಲ್ಲಿರುವ ಅನೇಕರು ಪೋಷಕರನ್ನೂ ನೋಡಿಕೊಳ್ಳುವುದಿಲ್ಲ. ಕೆಲವರು ಸೇನೆ ಸೇರಿ ದೂರದಲ್ಲಿ ಇರುತ್ತಾರೆ. ಬಸವಾದಿತ್ಯ ಮಠವೊಂದಕ್ಕೆ ಉತ್ತರಾಧಿಕಾರಿ ಆಗಿದ್ದು ಹರ್ಷದ ಸಂಗತಿ.
–ದಾಕ್ಷಾಯಿಣಿ, ಬಸವಾದಿತ್ಯರ ಪೂರ್ವಾಶ್ರಮದ ದೊಡ್ಡಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT