ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನಗಳೆಲ್ಲವೂ ಇಲ್ಲಿ ಅಧ್ವಾನ!

ಮುರಿದ ಬೆಂಚು l ಚೆಲ್ಲಿದ ಕಸ l ಸೊಳ್ಳೆಗಳ ಉತ್ಪತ್ತಿ, ಅನೈತಿಕ ಚಟುವಟಿಕೆಯ ತಾಣ
Last Updated 18 ನವೆಂಬರ್ 2019, 9:54 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಳಿಸಂಜೆಯ ಸಮಯದಲ್ಲಿ ಹುಲ್ಲು ಹಾಸಿನ ಮೇಲೆ ಕುಳಿತಿದ್ದವರ ಕಿವಿಗೆ ಆಕಾಶವಾಣಿಯ ಚಿತ್ರಗೀತೆ ಇಂಪು ನೀಡುತ್ತಿತ್ತು. ಇಷ್ಟದ ಹಾಡುಗಳನ್ನು ಆಸ್ವಾದಿಸುತ್ತ ಆಗಸ ದಿಟ್ಟಿಸುತ್ತಿದ್ದವರ ಮನಸು ದಿಗಂತ ದಾಟುತ್ತಿತ್ತು. ಬಾನಂಗಳದಲ್ಲಿ ಸೂರ್ಯ ಜಾರಿ ಕತ್ತಲು ಆವರಿಸುವ ಹೊತ್ತಿಗೆ ಕಾರಂಜಿಯೂ ಉಕ್ಕುತ್ತಿತ್ತು. ಕಣ್ಣಿಗೆ ಹಬ್ಬವನ್ನುಂಟು ಮಾಡುವ ನಯನ ಮನೋಹರ ದೃಶ್ಯಕ್ಕೆ ಮನಸೋಲದವರೇ ಇರಲಿಲ್ಲ.

ನಗರದ ಯೂನಿಯನ್‌ ಪಾರ್ಕ್‌ ಇಂತಹದೊಂದು ಅದ್ಭುತ ತಾಣವಾಗಿತ್ತು ಅಂದರೆ ನಂಬಲು ಯಾರಿಂದಲೂ ಸಾಧ್ಯವಿಲ್ಲ. ಹಸಿರಿನಿಂದ ಕಂಗೊಳಿಸುತ್ತಿದ್ದ ಉದ್ಯಾನ, ಕೋಟೆ ನಗರಿಯ ಪಿಕ್‌ನಿಕ್‌ ತಾಣದಂತೆ ರೂಪುಗೊಂಡಿತ್ತು ಎಂಬ ಕುರುಹು ಕೂಡ ಈಗಲ್ಲಿ ಸಿಗುವುದಿಲ್ಲ. ಕಾರಂಜಿ ನೋಡಲು ಕೆಆರ್‌ಎಸ್‌ಗೆ ಹೋಗಬೇಕು ಎಂಬ ಕಾಲದಲ್ಲೇ ಉದ್ಯಾನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿತ್ತು. ಇಂತಹ ಉದ್ಯಾನವೊಂದು ಸಂಪೂರ್ಣ ಸೊರಗಿ ಹೋಗಿದೆ.

ನಗರ ವ್ಯಾಪ್ತಿಯ ಯಾವ ಉದ್ಯಾನವೂ ಜನಾಕರ್ಷಣೆಯ ತಾಣಗಳಾಗಿ ಉಳಿದಿಲ್ಲ. ಇಳಿಸಂಜೆ ಕಳೆಯಲು ಉದ್ಯಾನಕ್ಕೆ ಭೇಟಿ ನೀಡುವುದನ್ನು ಬಹುತೇಕರು ಕೈಬಿಟ್ಟಿದ್ದಾರೆ. ಬೆಳಗಿನ ಸಮಯದಲ್ಲಿ ಕೆಲವರು ವಾಯುವಿಹಾರ ನಡೆಸುತ್ತಾರೆ. ಉಳಿದಂತೆ ಉದ್ಯಾನಗಳಲ್ಲಿ ಪುಂಡರು, ಮಾದಕ ವಸ್ತು ವ್ಯಸನಿಗಳು, ದಾರಿತಪ್ಪಿದ ಜೋಡಿಗಳು ಮಾತ್ರ ಕಾಣಿಸಿಗುತ್ತವೆ. ಉದ್ಯಾನಗಳು ಅನೈತಿಕ ಚಟುವಟಿಕೆಯ ತಾಣಗಳಾಗಿ ಬದಲಾಗಿವೆ.

ಉದ್ಯಾನಗಳನ್ನು ನಗರದ ಶ್ವಾಸಕೋಶ ಗಳೆಂದೇ ಗುರುತಿಸಲಾಗುತ್ತದೆ. ವಿಶಾಲ ಪ್ರದೇಶ ದಲ್ಲಿ ಕಂಗೊಳಿಸುವ ಉದ್ಯಾನ ಜನರ ವಿಶ್ರಾಂತಿಯ ತಾಣಗಳೂ ಹೌದು. ಗಿಡ, ಮರ, ಆಕರ್ಷಕ ಪುಷ್ಪಗಳು ಮನಸನ್ನು ಪ್ರಫುಲ್ಲಗೊಳಿಸಬೇಕು. ಆದರೆ, ನಗರದ ಯಾವ ಉದ್ಯಾನಕ್ಕೆ ಹೋದರೂ ಮನಸಿಗೆ ಕಿರಿಕಿರಿ ಉಂಟಾಗುತ್ತದೆ. ಸರಸ್ವತಿಪುರಂ ಹಾಗೂ ಮದಕರಿ ನಾಯಕ ವೃತ್ತದಲ್ಲಿರುವ ಉದ್ಯಾನದಲ್ಲಿ ಮಾತ್ರ ಹಸಿರು ಕಂಗೊಳಿಸುತ್ತಿದೆ. ಉಳಿದಂತೆ ಯಾವ ಉದ್ಯಾನದಲ್ಲಿಯೂ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ ಇದೆ.

ಮೂಲ ಸೌಲಭ್ಯ ಕೊರತೆ: ಮೂಲಸೌಲಭ್ಯ ಇಲ್ಲದೇ ಉದ್ಯಾನಗಳು ಸೊರಗಿ ಹೋಗಿವೆ. ಮುರಿದ ಬೆಂಚು, ಅಲ್ಲಲ್ಲಿ ಚೆಲ್ಲಿದ ಕಸ, ಹುಲ್ಲು ಹಾಸು ಒಣಗಿದ್ದು ಸಾಮಾನ್ಯವಾಗಿದೆ. ಐದು ನಿಮಿಷ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ ಉದ್ಯಾನಗಳಲ್ಲಿದೆ. ಸೊಳ್ಳೆ, ನೊಣಗಳ ಆವಾಸ ತಾಣಗಳಾಗಿ ಪರಿವರ್ತನೆ ಹೊಂದಿವೆ. ಮರದಿಂದ ಉದುರುವ ಎಲೆ ಕೊಳೆತು ಕೊಚ್ಚೆ ನಿರ್ಮಾಣವಾಗಿದೆ. ಇದರಿಂದ ಸೊಳ್ಳೆ ಹೆಚ್ಚಿದ್ದು, ಉದ್ಯಾನದಲ್ಲಿ ಸಂಚರಿಸಲು ಕೂಡ
ಸಾಧ್ಯವಾಗದ ಸ್ಥಿತಿ ಇದೆ.

ರೋಟರಿ ಬಾಲಭವನ ಪಕ್ಕದ ಉದ್ಯಾನ ಮಕ್ಕಳ ಆಟವಾಡುವ ಸ್ಥಳವಾಗಿತ್ತು. ಚಿಕ್ಕ ಮಕ್ಕಳು ಇಲ್ಲಿಗೆ ಬಂದು ಆಟವಾಡುತ್ತಿದ್ದರು. ಇದರ ನಿರ್ವಹಣೆಯ ಹೊಣೆಯನ್ನು ನಗರಸಭೆಯು ಗ್ರಂಥಾಲಯಕ್ಕೆ ವಹಿಸಿದೆ. ಜವಾಬ್ದಾರಿ ಹಸ್ತಾಂತರದ ಸಮಯದಲ್ಲಿ ಇದು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮುರಿದ ಆಟಿಕೆ, ದೂಳು ಏಳುವ ಉದ್ಯಾನ ಪ್ರವೇಶಿಸಲು ಮಕ್ಕಳು ಕೂಡ ಹಿಂದೇಟು ಹಾಕುತ್ತಿದ್ದಾರೆ.

ಅಸಮರ್ಪಕ ನಿರ್ವಹಣೆ: ನಗರ ವ್ಯಾಪ್ತಿಯ ಉದ್ಯಾನಗಳಲ್ಲಿ ವ್ಯವಸ್ಥಿತ ನಿರ್ವಹಣೆ ಇಲ್ಲ. ನಿರ್ವಹಣೆಗೆ ಸಿಬ್ಬಂದಿಯನ್ನು ಈವರೆಗೆ ನೇಮಕ ಮಾಡಿಕೊಂಡಿಲ್ಲ. ಹೊಸ ರೂಪ ಪಡೆದ ಉದ್ಯಾನಗಳು ಕೂಡ ಕೆಲವೇ ದಿನಗಳ ಬಳಿಕ ಸೊರಗಿ ಹೋಗುತ್ತವೆ. ಮತ್ತೆ ಇವುಗಳನ್ನು ಅಭಿವೃದ್ಧಿಪಡಿಸುವ ಕೂಗು ಏಳುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಯೂನಿಯನ್‌ ಪಾರ್ಕ್‌ಗೆ ಕೋಟಿಗಟ್ಟಲೆ ಹಣ ವೆಚ್ಚ ಮಾಡಲಾಗಿದೆ.

ಉದ್ಯಾನಕ್ಕೆ ಭೇಟಿ ನೀಡುವ ಜನರು ತಿನಿಸುಗಳನ್ನು ತಿಂದು ಅಲ್ಲೇ ಬಿಸಾಡುತ್ತಾರೆ. ಬಹುತೇಕ ಉದ್ಯಾನಗಳಲ್ಲಿ ಪ್ಲಾಸ್ಟಿಕ್‌ ಕಸ ರಾರಾಜಿಸುತ್ತಿದೆ. ಎಲ್ಲೆಂದರಲ್ಲಿ ಬಿದ್ದ ಈ ಕಸವನ್ನು ಎತ್ತಿ ಹಾಕಲು ಸಿಬ್ಬಂದಿಯೇ ಇಲ್ಲ. ಕೆಲವೇ ದಿನಗಳಲ್ಲಿ ಕಸ ಹೊಳೆತು ದುರ್ನಾತ ಬೀರುತ್ತದೆ. ಹಸಿರು ಹೊದಿಕೆಗೆ ಲಾನ್‌ ಹಾಕಲಾಗುತ್ತದೆ. ಆದರೆ, ಅದಕ್ಕೆ ಸರಿಯಾದ ಸಮಯದಲ್ಲಿ ನೀರು ಬಿಡಬೇಕು. ಕಳೆ ಬೆಳೆಯದಂತೆ ನಿರ್ವಹಣೆ ಮಾಡಬೇಕು. ಇಂತಹ ಯಾವ ಕೆಲಸವೂ ನಗರ ವ್ಯಾಪ್ತಿಯ ಉದ್ಯಾನಗಳಲ್ಲಿ ನಡೆಯುತ್ತಿಲ್ಲ.

ಜಿಲ್ಲಾ ಆಸ್ಪತ್ರೆಯ ಮುಂಭಾಗದ ಸ್ವಾಮಿ ವಿವೇಕಾನಂದ ಉದ್ಯಾನದ ನಿರ್ವಹಣೆ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಹೆಗಲ ಮೇಲಿದೆ. ಇಡೀ ನಗರದಲ್ಲಿ ಇದೊಂದು ಉದ್ಯಾನದಲ್ಲಿ ಮಾತ್ರ ಹಸಿರು ಕಾಣಿಸುತ್ತದೆ. ಕೆಲ ಸಿಬ್ಬಂದಿಗಳನ್ನು ನಿರ್ವಹಣೆಗೆ ನೇಮಕ ಮಾಡಲಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು ಹೆಚ್ಚಾಗಿ ಈ ಉದ್ಯಾನದಲ್ಲಿ ಕುಳಿತುಕೊಳ್ಳುತ್ತಾರೆ. ಊಟ, ತಿಂಡಿಯ ಪ್ಲಾಸ್ಟಿಕ್‌ ಕವರ್‌ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT