ಭಾನುವಾರ, ಜೂನ್ 20, 2021
29 °C
ಮುಖ್ಯಮಂತ್ರಿಗೆ ವಿಧಾನಪರಿಷತ್ ಸದಸ್ಯ ರಘುಆಚಾರ್ ಮನವಿ

ಕೊರೊನಾ ವಾರಿಯರ್ಸ್‌ಗಳಿಗೆ ವೇತನ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋವಿಡ್‌-19 ವಿರುದ್ಧ ಕಷ್ಟಪಟ್ಟು ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್‌ಗಳಿಗೆ ಪ್ರತಿ ತಿಂಗಳು ತಪ್ಪದೇ ವೇತನ ಪಾವತಿಸಲು ಕ್ರಮ ಕೈಗೊಳ್ಳಿ ಎಂದು ವಿಧಾನಪರಿಷತ್ ಸದಸ್ಯ ರಘುಆಚಾರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ರೋಗಿಗಳ ಆರೋಗ್ಯ ಸ್ಥಿತಿಗತಿ ವಿಚಾರಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 4 ತಿಂಗಳಿನಿಂದಲೂ ಅನೇಕ ವಾರಿಯರ್ಸ್‌ಗಳಿಗೆ ವೇತನವಾಗಿಲ್ಲ. ಇದರಿಂದ ಅವರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಈ ಕುರಿತು ಗಮನಹರಿಸಿ ಬಾಕಿ ವೇತನ ಪಾವತಿಗೆ ಸರ್ಕಾರ ಮುಂದಾಗಬೇಕಿದೆ’ ಎಂದು ಒತ್ತಾಯಿಸಿದರು.

‘ಕೆ.ಜೆ. ಹಳ್ಳಿ ಮತ್ತು ಡಿ.ಜಿ. ಹಳ್ಳಿ ಗಲಭೆ ನಡೆಯಬಾರದಿತ್ತು. ಶಾಸಕರ ಮನೆ ಮೇಲೆ ದಾಳಿ ಮಾಡುತ್ತಾರೆ ಎಂದರೆ ಏನರ್ಥ’ ಎಂದು ಪ್ರಶ್ನಿಸಿದ ಅವರು, ‘ತನಿಖೆ ನಡೆಯುತ್ತಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗೃಹ ಇಲಾಖೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವಿಶ್ವಾಸವಿದೆ’ ಎಂದು ಹೇಳಿದರು.

ಪಕ್ಷಾತೀತವಾಗಿ ಬೆಂಬಲಿಸುತ್ತೇನೆ: ‘ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತವಾಗಿ ಇರುತ್ತದೆ. ನನ್ನನ್ನು ಪ್ರೀತಿಸುವ ಯಾವುದೇ ಪಕ್ಷದ ಅಭ್ಯರ್ಥಿ ಕರೆದರೂ ಅವರ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ‌. ನಮ್ಮ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು ಸೂಚಿಸುವ ಅಭ್ಯರ್ಥಿ ಪರವಾಗಿಯೂ ಪ್ರಚಾರ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

ಕೊರೊನಾ ಕುರಿತು ಆತಂಕ ಬೇಡ: ‘ಕೊರೊನಾ ಸೋಂಕು ತಗುಲಿತು ಎಂದು ಆತಂಕಪಡುವ ಅಗತ್ಯವಿಲ್ಲ. ಅದರಿಂದ ನಮ್ಮಲ್ಲಿ ಸಾವಿನ ಪ್ರಮಾಣ ಕಡಿಮೆ ಇದ್ದು, ಪ್ರಾಣಭಯ ಪಡಬೇಡಿ. ಜೀವ ಹೋಗಬೇಕೆಂದಿದ್ದರೆ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ರಘುಆಚಾರ್ ಹೇಳಿದರು.

‘ಪ್ರಾಣಭಯಕ್ಕೆ ಹೆದರಿದ್ದರೆ, ಎರಡನೇ ಬಾರಿ ಆಸ್ಪತ್ರೆಯೊಳಗೆ ನಾನೂ ಬರುತ್ತಿರಲಿಲ್ಲ. ಇದು ಸಂಪೂರ್ಣ ಗುಣಮುಖವಾಗುವ ಕಾಯಿಲೆ. ಹೊಸದಾಗಿ ಬಂದ ರೋಗಿಗಳಿಗೆ ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವವರು ಧೈರ್ಯ ತುಂಬಬೇಕೆ ಹೊರತು ನೀವು ಅಳುತ್ತ ಭೀತಿ ಸೃಷ್ಟಿಸಬಾರದು’ ಎಂದು ಆಸ್ಪತ್ರೆಯಲ್ಲಿದ್ದ ಕೆಲ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು