ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಕಾಲೊನಿಯಲ್ಲಿ ಸ್ವಾಮೀಜಿ ಹೆಜ್ಜೆಗುರುತು

ಪೇಜಾವರ ಸ್ವಾಮೀಜಿಗೂ ಕೋಟೆನಾಡಿಗೆ ಬಿಡಿಸಲಾಗದ ನಂಟು
Last Updated 29 ಡಿಸೆಂಬರ್ 2019, 16:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗಕ್ಕೂ ಉಡುಪಿಯ ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿಗೂ ಬಿಡಿಸಲಾರದ ನಂಟಿದೆ. ಜಾತಿ ತಾರತಮ್ಯ ನಿವಾರಿಸಿ ಸಾಮಾಜಿಕ ಸಾಮರಸ್ಯ ಮೂಡಿಸಲು ಪ್ರಯತ್ನಿಸಿದ ಅವರ ಹೆಜ್ಜೆ ಗುರುತುಗಳು ಇಂದಿಗೂ ದಲಿತರ ಕಾಲೊನಿಯಲ್ಲಿ ಉಳಿದಿವೆ.

ಜಾತಿಯ ಕಾರಣಕ್ಕೆ ನಡೆಯುತ್ತಿದ್ದ ಅಸಮಾನತೆಯನ್ನು ತೊಡೆದುಹಾಕಲು ಪೇಜಾವರ ಶ್ರೀ ಸಂಚರಿಸಿದ ದಲಿತರ ಕಾಲೊನಿಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಶತಮಾನಗಳ ಬಳಿಕ ಪೂಜ್ಯರೊಬ್ಬರು ಕಾಲೊನಿಗೆ ಬಂದಿದ್ದನ್ನು ಹಬ್ಬದಂತೆ ಸಂಭ್ರಮಸಿ ಪಾದಪೂಜೆ ನೆರವೇರಿಸಿದ್ದ ಮನೆಗಳಲ್ಲಿ ದುಃಖ ಆವರಿಸಿದೆ. ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡ ಭಾವ ಅವರನ್ನು ಕಾಡುತ್ತಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯ ಹೆಚ್ಚಾಗಿರುವ ಚಿತ್ರದುರ್ಗದ ಬಗ್ಗೆ ಪೇಜಾವರ ಶ್ರೀಗಳಿಗೆ ವಿಶೇಷ ಕಾಳಜಿ ಇತ್ತು. ಜಾತಿ ಅಸಮಾನತೆಯನ್ನು ಹೋಗಲಾಡಿಸಲು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಗೆ ಶಕ್ತಿಯಾಗಿ ನಿಂತಿದ್ದರು. ದಶಕದ ಹಿಂದೆಯೇ ಚನ್ನಯ್ಯ ಸ್ವಾಮೀಜಿಯನ್ನು ಬ್ರಾಹ್ಮಣರ ಬೀದಿಯಲ್ಲಿ ಪಾದಯಾತ್ರೆ ಮಾಡಿಸಿದ್ದರು. 1960ರಿಂದ ಸ್ವತಃ ತಾವೇ ದಲಿತರ ಕಾಲೊನಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದರು.

ಸೂರನಹಳ್ಳಿ ಪಾದಯಾತ್ರೆ:ಅಸ್ಪೃಶ್ಯತೆ ನಿವಾರಣೆಗೆ ಸಂಬಂಧಿಸಿದಂತೆ ಪೇಜಾವರ ಸ್ವಾಮೀಜಿ 2008ರಲ್ಲಿ ಮಾಡಿದ ಭಾಷಣ ಅವರನ್ನು ಚಳ್ಳಕೆರೆ ತಾಲ್ಲೂಕಿನ ಸೂರನಹಳ್ಳಿಗೆ ಕರೆತಂದಿತು. ಅವರ ನೆನಪಿಗಾಗಿ ಗ್ರಾಮದಲ್ಲಿ ಸುಂದರ ಉದ್ಯಾನ ನಿರ್ಮಣವಾಗಿದೆ.

ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ವರದಿಯನ್ನು ಗಮನಿಸಿದ ಸೂರನಹಳ್ಳಿ ಶ್ರೀನಿವಾಸ್‌ ಎಂಬ ಯುವಕ ಪೇಜಾವರ ಶ್ರೀಗೆ ಪತ್ರ ಬರೆದಿದ್ದರು. ತಮ್ಮೂರಿನ ದಲಿತರ ಕಾಲೊನಿಯ ಶೋಚನೀಯ ಸ್ಥಿತಿಯನ್ನು ಪತ್ರದಲ್ಲಿ ವಿವರಿಸಿದ್ದರು. ಅಸ್ಪೃಶ್ಯತೆ ನಿವಾರಣೆಗೆ ಗ್ರಾಮಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದರು. ಪತ್ರ ಓದಿದ ಸ್ವಾಮೀಜಿ, 2009ರ ಫೆಬ್ರುವರಿಯಲ್ಲಿ ಏಕಾಏಕಿ ಗ್ರಾಮಕ್ಕೆ ಭೇಟಿ ನೀಡಿದರು.

ಸ್ವಾಮೀಜಿ ದಲಿತರ ಕೇರಿಗೆ ಬಂದಿದ್ದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿತ್ತು. ಗ್ರಾಮದ ದೇಗುಲದಲ್ಲಿ ಪೂಜೆ ನೆರವೇರಿಸಿದ ಸ್ವಾಮೀಜಿ ದಲಿತರ ಕಾಲೊನಿಯಲ್ಲಿ ಹೆಜ್ಜೆಹಾಕಿದರು. ಯಾವ ಸಿದ್ಧತೆಯು ಇಲ್ಲದೇ ಸರಳವಾಗಿ ನಡೆದ ಈ ಅಭಿಯಾನ ಗ್ರಾಮಸ್ಥರಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ. ಈ ನೆನಪಿಗಾಗಿ ಗ್ರಾಮದಲ್ಲಿ ಉದ್ಯಾನ ನಿರ್ಮಾಣವಾಗಿದ್ದು, ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಗ್ರಂಥಾಲಯವೂ ಇದೆ.

ಬುದ್ಧನಗರದಲ್ಲಿ ಪಾದಪೂಜೆ:2014ರಲ್ಲಿ ಗುರುರಾಜ ಸೇವಾ ಸಂಘ ಏರ್ಪಡಿಸಿದ್ದ ಸಮಾರಂಭಕ್ಕೆ ಪೇಜಾವರ ಸ್ವಾಮೀಜಿ ಬಂದಿದ್ದರು. ಆಗಲೂ ದಲಿತರ ಕೇರಿಗಳಲ್ಲಿ ಅವರು ಪಾದಯಾತ್ರೆ ಕೈಗೊಂಡಿದ್ದರು.

ಬುದ್ಧನಗರದ ದಲಿತರ ಬೀದಿಯಲ್ಲಿ ಕೈಗೊಂಡಿದ್ದ ಪಾದಯಾತ್ರೆ ಕೋಟೆನಗರಿಯಲ್ಲಿ ಸಂಚಲವುಂಟು ಮಾಡಿತ್ತು. ಅನೇಕರು ಮನೆಗೆ ಕರೆದು ಪಾದಪೂಜೆ ನೆರವೇರಿಸಿದ್ದರು.

ಪೇಜಾವರ ಮಠಕ್ಕೂ ಚಿತ್ರದುರ್ಗಕ್ಕೂ 50 ವರ್ಷಗಳ ನಂಟಿದೆ. ಪ್ರತಿ ವರ್ಷವೂ ಸ್ವಾಮೀಜಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಸಂಪ್ರದಾಯಸ್ಥ ಮಾಧ್ವ ಪರಂಪರೆಯ ಮಠವಾದರೂ ಎಲ್ಲ ಸಮುದಾಯದ ಸಮಾರಂಭದಲ್ಲಿ ಪೇಜಾವರ ಶ್ರೀ ಪಾಲ್ಗೊಳ್ಳುತ್ತಿದ್ದರು. ಮರುಘಾ ಮಠದ ಶರಣ ಸಂಸ್ಕೃತಿ ಉತ್ಸವ, ತರಳಬಾಳು ಮಠದ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಹಾಜರಾಗಿದ್ದರು. ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡುವ ಅವರ ಆಸೆ ಮಾತ್ರ ಕೈಗೂಡಲಿಲ್ಲ.

ಡಿ.8 ಕೊನೆಯ ಭೇಟಿ:ಭಗವದ್ಗೀತಾ ಅಭಿಯಾನದ ಅಂಗವಾಗಿ ನಡೆದ ‘ಗೀತಾ ಜಯಂತಿ’ ಪೇಜಾವರ ಶ್ರೀಗಳ ಚಿತ್ರದುರ್ಗದ ಕೊನೆಯ ಕಾರ್ಯಕ್ರಮ. ಡಿ.7ರಂದು ಆಯೋಜಿಸಿದ್ದ ಅಭಿಯಾನದ ಸಮಾರೋಪ ಸಮಾರಂಭಕ್ಕೆ ವಿಶ್ವೇಶತೀರ್ಥ ಸ್ವಾಮೀಜಿ ಮುಖ್ಯ ಅತಿಥಿಗಳಾಗಿದ್ದರು. ಅವರು ಸನ್ಯಾಸತ್ವ ಸ್ವೀಕರಿಸಿದ 82ನೇ ವರ್ಷಾಚಾರಣೆಯನ್ನು ಅಂದೇ ಹಮ್ಮಿಕೊಂಡಿದ್ದರಿಂದ ಡಿ.8ರಂದು ಚಿತ್ರದುರ್ಗಕ್ಕೆ ಬಂದಿದ್ದರು.

ಇದೇ ವರ್ಷದ ಆರಂಭದಲ್ಲಿ ನಡೆದ ಹರಿದಾಸ ಹಬ್ಬ, ಬ್ರಾಹ್ಮಣ ಸಂಘದ ಶತಮಾನೋತ್ಸವ ಸಮಾರೋಪ ಸಮಾರಂಭ ಹಾಗೂ ಗೋನೂರು ಸಮೀಪದ ಮುತ್ತಯ್ಯನಹಟ್ಟಿಯ ರಾಜರಾಜೇಶ್ವರಿ ದೇಗುಲದ ಉದ್ಘಾಟನಾ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು.

ಅಯ್ಯಣ್ಣನಪೇಟೆಯಲ್ಲಿ ವಾಸ್ತವ್ಯ:‍ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಚಿತ್ರದುರ್ಗಕ್ಕೆ ಬಂದಾಗ ಹೆಚ್ಚಾಗಿ ವಾಸ್ತವ್ಯ ಹೂಡುತ್ತಿದ್ದದು ಅಯ್ಯಣ್ಣನಪೇಟೆಯಲ್ಲಿ. ತ್ಯಾಗರಾಜ ಬೀದಿಯ ಗೋವಿಂದಮೂರ್ತಿ ಅವರ ಮನೆಯಲ್ಲಿ ಸದಾ ತಂಗುತ್ತಿದ್ದರು.

ಸ್ವಾಮೀಜಿ ಎಲ್ಲಿಗೆ ಹೋದರು ತಮ್ಮೊಂದಿಗೆ ಶ್ರಿಕೃಷ್ಣ ಮೂರ್ತಿ ಇರುತ್ತಿತ್ತು. ಎರಡು ಗಂಟೆ ಪೂಜೆ ಮಾಡುತ್ತಿದ್ದರು. ಜಪತಪ, ಪ್ರಾರ್ಥನೆ, ರಾಮ–ವಿಠ್ಠಲ ದೇವರ ಪೂಜೆಗಳನ್ನು ಚಾಚೂತಪ್ಪದೇ ಮಾಡುತ್ತಿದ್ದರು. ಸುಬ್ರತೀರ್ಥರ ಪೂರ್ವಾಶ್ರಮದ ಮನೆ ಎಂಬ ಕಾರಣಕ್ಕೆ ಇದು ಅವರಿಗೆ ಇಷ್ಟವಾಗಿತ್ತು.

‘1972ರಿಂದ ಮನೆಗೆ ಬರುತ್ತಿದ್ದರು. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ ತಪ್ಪದೇ ಭೇಟಿ ನೀಡುತ್ತಿದ್ದರು’ ಎಂದು ಸ್ಮರಿಸಿಕೊಳ್ಳುತ್ತಾರೆ ಗೋವಿಂದಮೂರ್ತಿ.

ಸಾಮಾನ್ಯವಾಗಿ ಬಾವಿ ಇರುವ ಮನೆಯನ್ನು ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಬಾವಿಯ ನೀರಿನಲ್ಲಿ ಪೂಜೆ ನೆರವೇರಿಸಿ ಪ್ರಸಾದ ರೀತಿಯಲ್ಲಿ ಸ್ವೀಕರಿಸುತ್ತಿದ್ದರು. ರಾತ್ರಿ 12ರ ನಂತರ ಅವರು ಪ್ರಯಾಣ ಮಾಡುತ್ತಿರಲಿಲ್ಲ.

ತ್ರಿಮತಸ್ಥರನ್ನು ಒಗ್ಗೂಡಿಸಲು ಶ್ರಮ:ತ್ರಿಮತಸ್ಥರನ್ನು ಒಗ್ಗೂಡಿಸಲು ಶ್ರಮಿಸಿದ್ದ ಪೇಜಾವರ ಸ್ವಾಮೀಜಿ, ಬ್ರಾಹ್ಮಣ ಸಮುದಾಯದ ಇತರ ಮಠಾಧೀಶರೊಂದಿಗೆ ಚಿತ್ರದುರ್ಗದಲ್ಲಿ ಎರಡು ಬಾರಿ ವೇದಿಕೆ ಹಂಚಿಕೊಂಡಿದ್ದರು.

ಬ್ರಾಹ್ಮಣ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹಾಗೂ ಮೇಲುಕೋಟೆ ಆನಂದಾಶ್ರಮದ ಶಠಕೋಪ ರಾಮಾನುಜ ಜೀಯರ್‌ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆಚಾರ್ಯತ್ರಯರ ಅನುಯಾಯಿಗಳು ಹೀಗೆ ಒಂದೆಡೆ ಸೇರುವುದು ಅಪರೂಪ.

‘ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರ ಅನುಯಾಯಿಗಳ ನಡುವೆ ತಾತ್ವಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ, ತ್ರಿಮತಸ್ಥರ ನಡುವೆ ಸಮಾನ ಅಂಶಗಳು ಸಾಕಷ್ಟಿವೆ. ಪರಸ್ಪರ ಕೆಸರು ಎರೆಚುವುದನ್ನು ಬಿಟ್ಟು ಒಗ್ಗೂಡುವ ಅಗತ್ಯವಿದೆ. ಸಮಾಜದ ಭದ್ರ ಗೋಡೆಯಾಗಿರುವ ವೈದಿಕ ಧರ್ಮವನ್ನು ಉಳಿಸಬೇಕಿದೆ’ ಎಂದು ಬ್ರಾಹ್ಮಣ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಕಿವಿಮಾತು ಹೇಳಿದ್ದರು.

ಬೆಕ್ಕಿನ ಕಥೆ ಹೇಳಿದ್ದ ಸ್ವಾಮೀಜಿ:ಪೇಜಾವರ ಸ್ವಾಮೀಜಿ ಅವರನ್ನು ಸದಾ ಕಾಡುತ್ತಿದ್ದದು ಶೀಥ– ನೆಗಡಿ ಮಾತ್ರ. ಇದು ಭಕ್ತರಲ್ಲಿ ಕುತೂಹಲ ಮೂಡಿಸಿತ್ತು. ಚಿತ್ರದುರ್ಗಕ್ಕೆ ಭೇಟಿ ನೀಡಿದಾಗ ಭಕ್ತರೊಬ್ಬರು ಈ ವಿಚಾರವನ್ನು ನೇರವಾಗಿ ಪ್ರಸ್ತಾಪಿಸಿದ್ದರು ಎಂಬುದನ್ನು ಜೋಯಿಸ್ ಹುಲಿರಾಜ್‌ ನೆನಪಿಸಿಕೊಂಡರು.

‘ಚಿಕ್ಕವನಿದ್ದಾಗ ಮಳೆಯಲ್ಲಿ ಆಟವಾಡುತ್ತಿದ್ದೆ. ಚಾವಣಿ ಸೋರಿಕೆಯಾಗಿ ತೊಟ್ಟಿಕ್ಕುವ ನೀರಿಗೆ ಬೆಕ್ಕಿನ ಮರಿ ಹಿಡಿಯುತ್ತಿದ್ದೆ. ಬೆಕ್ಕು ಮಳೆಯಲ್ಲಿ ನೆನೆಯುತ್ತಿತ್ತು. ಆ ಪರಿ ಬೆಕ್ಕು ನೆನೆದಿದ್ದ ಪರಿಣಾಮ ಶೀಥ–ನೆಗಡಿ ನಮ್ಮನ್ನು ಅಂಟಿತು’ ಎಂದು ಪೇಜಾವರ ಶ್ರೀ ಕಥೆಯೊಂದನ್ನು ಹೇಳಿದ್ದರು.

ಶೀಥದಿಂದ ರಕ್ಷಣೆ ಪಡೆಯಲು ಸದಾ ಪ್ರಯತ್ನಿಸುತ್ತಿದ್ದರು. ತಲೆಗೆ ಕೇಸರಿ ಬಣ್ಣದ ಟೋಪಿ ಬಳಸುತ್ತಿದ್ದರು. ಹವಾನಿಯಂತ್ರಿತ ವ್ಯವಸ್ಥೆಯನ್ನು ಅವರು ಇಷ್ಟಪಡುತ್ತಿರಲಿಲ್ಲ. ಕೆಲವೊಮ್ಮೆ ಫ್ಯಾನು ಕೂಡ ಬಳಸುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT