ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಗೆ ಹಳದಿ ಬಣ್ಣದ ಚಿತ್ತಾರವಿಟ್ಟ ‘ಪೆಲ್ಟೋಫೋರಂ’

ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಹೂ ಬಿಡುವ ಮರ
Last Updated 22 ಏಪ್ರಿಲ್ 2022, 5:27 IST
ಅಕ್ಷರ ಗಾತ್ರ

ಹೊಸದುರ್ಗ: ಸಾಲು ಮರಗಳು, ಮರದ ತುಂಬೆಲ್ಲ ಚಾಚಿಕೊಂಡಿರುವ ಹಳದಿ ಬಣ್ಣದ ಹೂ, ಅಲ್ಲದೇ ರಸ್ತೆಯುದ್ದಕ್ಕೂ ಹರಡಿರುವ ಹೂಗಳು ಅಲ್ಲಿ ಸಂಚರಿಸುವವರಿಗೆ ಸ್ವಾಗತ ಕೋರುವಂತಿವೆ. ಮಾವಿನಕಟ್ಟೆಯಿಂದ ಹೊಸದುರ್ಗಕ್ಕೆ ಹೋಗುವ ರಸ್ತೆ ಬದಿಯಲ್ಲಿ ಸಾಲು ಸಾಲು ಪೆಲ್ಟೋಫೋರಂ ಮರಗಳಿದ್ದು, ದಾರಿಹೋಕರನ್ನು ಸೆಳೆಯುತ್ತಿವೆ.

ಸಹಜ ಸೌಂದರ್ಯ ಮತ್ತು ಮೋಹಕ ಬಣ್ಣಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಹೂ ಬಿಡುವ ಈ ಮರದ ವೈಜ್ಞಾನಿಕ ಹೆಸರು ಪೆಲ್ಟೋಫೋರಂ ಟೆರೋಕಾರ್ಪಮ್‌. ನಿಸರ್ಗ ಪ್ರಿಯರು, ಕವಿಗಳಿಗೆ ಈ ಹೂ ಪ್ರೇರಣಾ ಶಕ್ತಿಯಂತಿದೆ. ಫೆಲ್ಟೋಫಾರಂ ಮರ ಹೆಚ್ಚಾಗಿ ಶ್ರೀಲಂಕಾ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಫೈನ್ಸ್‌, ಥೈಲ್ಯಾಂಡ್‌, ವಿಯೆಟ್ನಾಂ ಮತ್ತು ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಹೊಸದುರ್ಗದಲ್ಲೂ ಫೆಲ್ಟೋಫಾರಂ ವಿವಿಧೆಡೆ ಕಂಡು ಬರುತ್ತಿದೆ. ತರೀಕೆರೆ ರಸ್ತೆ, ಹೊಳಲ್ಕೆರೆ ರಸ್ತೆ ಬದಿ, ಹಿರಿಯೂರಿಗೆ ಹೋಗುವ ರಸ್ತೆ ಬದಿ, ಪಟ್ಟಣದ ಸುತ್ತಲಿನ ರಸ್ತೆ ಬದಿ, ಅಂಗಡಿಗಳ ಮುಂದೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ, ನ್ಯಾಯಾಲಯದ ಆವರಣ, ಸಿದ್ಧರಾಮನಗರ ಸೇರಿದಂತೆ ಎಲ್ಲ ಕಡೆ ಈ ಹೂವಿನದ್ದೇ ಸೊಬಗು ಅರಳಿದೆ. ಹೂ ಬಾಡಿ ರಸ್ತೆಗೆ ಬಿದ್ದಿರುವ ಸಂದರ್ಭದಲ್ಲೂ ರಸ್ತೆಯೂ ರಂಗು ರಂಗಾಗಿ ಕಾಣುತ್ತಿದೆ. ನೇಸರ ಮೇಲೇಳುವ ಸಮಯದಲ್ಲಿ ಇದರ ಸೌಂದರ್ಯ ದುಪ್ಪಟ್ಟಾಗುತ್ತದೆ. ಮುಸ್ಸಂಜೆಯಲ್ಲೂ ಈ ಹೂ ವೈಯ್ಯಾರ ಪ್ರದರ್ಶಿಸುತ್ತದೆ. ಒಟ್ಟಾರೆ ಪೆಲ್ಟೋಫೋರಂ ಮರ ಈಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಇದರ ಹೂಗಳು ನಾರಿಯ ಮುಡಿಗೆ ಏರುವುದಿಲ್ಲ. ದೇವರ ಪೂಜೆಗೂ ಬಳಕೆ ಆಗುವುದಿಲ್ಲ. ನೋಡುಗರ ಮನಸ್ಸನ್ನು ಅರಳಿಸಿ ಮನಕ್ಕೆ ಸಂತಸ ನೀಡುವುದಷ್ಟೇ ಇದರ ಕೆಲಸ. ದಕ್ಷಿಣ ಏಷ್ಯಾದ ಒಣ ಪ್ರದೇಶಗಳಲ್ಲಿ ಬೆಳೆಯುವ ಈ ಗಿಡ 18-25 ಮೀಗಳಷ್ಟು ಎತ್ತರವಿರುತ್ತದೆ. ಕಾಯಿ ಚಪ್ಪಟೆಯಿದ್ದು ಕಂದು ಬಣ್ಣದ್ದಾಗಿರುತ್ತದೆ. ಗುಲ್‌ಮೋಹರ್‌ ಜೊತೆ ಅಂದಕ್ಕಾಗಿ ಈ ಮರ ಬೆಳೆಸುವುದು ಸರ್ವೆ ಸಾಮಾನ್ಯ.

ಈ ಮರ ಅಂದಕ್ಕಷ್ಟೇ ಅಲ್ಲ. ಆರೋಗ್ಯಕ್ಕೂ ಸಹಾಯಕ. ಇದರ ಕಾಂಡ, ಎಲೆ, ಹಣ್ಣುಗಳನ್ನು ಅತಿಸಾರ, ಭೇದಿ, ಚರ್ಮರೋಗ, ದೇಹದ ನೋವು, ಮೂಳೆನೋವಿಗಾಗಿ ಉಪಯೋಗಿಸುವರು. 365 ದಿನಗಳೂ ಹಸಿರಾಗಿರುವ ಇದು, ಟೊಳ್ಳು ಕೊಂಬೆಗಳನ್ನು ಹೊಂದಿದ್ದು, ಗಾಳಿ ಬಿದ್ದಾಗ ಮುರಿಯುತ್ತದೆ. ಒಳ್ಳೆ ತಂಪಾದ ಗಾಳಿ ನೀಡುವ ಈ ಮರ ನಿಜಕ್ಕೂ ದಾರಿಹೋಕರ ಮನಸ್ಸಿಗೆ ಮುದ ನೀಡುತ್ತದೆ ಎನ್ನುತ್ತಾರೆ ಪರಿಸರ ಪ್ರೇಮಿ ಭಾನುಮೋಹನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT