ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ನೀತಿ ಉಲ್ಲಂಘನೆಗೆ ದಂಡ

ಮಕ್ಕಳ ಹಕ್ಕು ಆಯೋಗದ ಸದಸ್ಯ ರೂಪ ನಾಯ್ಕ್‌ ಎಚ್ಚರಿಕೆ
Last Updated 18 ಜನವರಿ 2019, 13:26 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಕ್ಕಳ ಹಕ್ಕು ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರ ನೀತಿಯನ್ನು ರೂಪಿಸಿ ಮೂರು ವರ್ಷ ಕಳೆದಿದೆ. ಆದರೂ ಬಹುತೇಕ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಸುರಕ್ಷತೆಯ ವಾತಾವರಣವಿಲ್ಲ. ನೀತಿಯನ್ನು ಉಲ್ಲಂಘಿಸಿದ ಹಾಸ್ಟೆಲ್‌ಗೆ ದಂಡ ವಿಧಿಸುವ ಅವಕಾಶವ ಕಾನೂನಿನಲ್ಲಿದೆ ಎಂದು ಮಕ್ಕಳ ಹಕ್ಕು ಆಯೋಗದ ಸದಸ್ಯ ರೂಪಾ ನಾಯ್ಕ್‌ ಎಚ್ಚರಿಕೆ ನೀಡಿದರು.

‘ವಸತಿ ನಿಲಯಗಳಲ್ಲಿ ಮಕ್ಕಳ ಸುರಕ್ಷತೆ ಹಾಗೂ ರಕ್ಷಣಾ ನೀತಿ’ಗೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮಕ್ಕಳ ಹಕ್ಕು ನೀತಿ–2016’ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ರಕ್ಷಣೆಯ ಹೊಣೆ ವಾರ್ಡನ್‌ಗಳ ಮೇಲಿದೆ. ಅವರ ಹಕ್ಕು ಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಇದೆ. ಹಾಸ್ಟೆಲ್‌ಗಳಲ್ಲಿ ಮನೆಯ ವಾತಾವರಣ ನಿರ್ಮಾಣವಾಗಬೇಕು. ರಕ್ಷಣೆ, ಪ್ರೀತಿ, ವಿಶ್ವಾಸದ ಜೊತೆ ಶಿಕ್ಷಣ ಸಿಗುವಂತಾಗಬೇಕು’ ಎಂದು ವಿವರಿಸಿದರು.

‘ನಿಲಯಪಾಲಕರು ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಬೇಕು ಎಂಬ ನಿಯಮವಿದೆ. ಆದರೆ, ಬಹುಪಾಲು ವಾರ್ಡನ್‌ಗಳು ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಇರುತ್ತಾರೆ. ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಲ್ಲಿ ಮಹಿಳಾ ಕಾವಲುಗಾರರು ಕಡ್ಡಾಯವಾಗಿ ಇರಬೇಕು. ದೂರು ಪೆಟ್ಟಿಗೆಯನ್ನು ಇಟ್ಟು, ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಈಚೆಗೆ ನಡೆದ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ 5ನೇ ತರಗತಿಯ ಒಳಗಿನ ಶೇ 72 ಮಕ್ಕಳಿಗೆ ಭಾಗಾಕಾರ ಲೆಕ್ಕವೇ ಬರುತ್ತಿಲ್ಲ. ಶೇ 52 ಮಕ್ಕಳಿಗೆ ಗುಣಾಕಾರವೂ ಗೊತ್ತಿಲ್ಲ. ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಹೋಗುವುದನ್ನು ತಡೆಯುವ ಜವಾಬ್ದಾರಿ ವಾರ್ಡನ್‌ಗಳ ಮೇಲೆಯೂ ಇದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್‌. ರವೀಂದ್ರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಆರ್‌. ಪ್ರಭಾಕರ್‌, ಯುನೆಸೆಫ್‌ ಪ್ರಾದೇಶಿಕ ಸಂಯೋಜಕ ಕೆ.ರಾಘವೇಂದ್ರ ಭಟ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಸ್‌.ರಾಜಾನಾಯಕ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜೆ.ವೈಶಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT