ಶನಿವಾರ, ಅಕ್ಟೋಬರ್ 23, 2021
22 °C
ಸಾರ್ವಜನಿಕ ಆಸ್ಪತ್ರೆಯ ಎದುರು ಜಮಾಯಿಸಿದ

ಹೊಳಲ್ಕೆರೆ | ಅತ್ಯಾಚಾರಿಯನ್ನು ಇಲ್ಲಿಯೇ ಶೂಟ್ ಮಾಡಿ: ಸಾರ್ವಜನಿಕರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ‘ಅತ್ಯಾಚಾರಿಯನ್ನು ಕೋರ್ಟಿಗೆ ಕರೆದೊಯ್ಯ ಬೇಡಿ. ನಮ್ಮ ಎದುರಿಗೇ ಶೂಟ್ ಮಾಡಿ. ನಿಮ್ಮಿಂದ ಆಗದಿದ್ದರೆ ನಮ್ಮ ವಶಕ್ಕೆ ನೀಡಿ, ನಾವೇ ತಕ್ಕ ಶಾಸ್ತಿ ಮಾಡುತ್ತೇವೆ.’

-ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಎದುರು ಶುಕ್ರವಾರ ನೆರೆದಿದ್ದ ಸಾರ್ವಜನಿಕರು ಹಾಗೂ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಸಂಬಂಧಿಕರ ಆಕ್ರೋಶದ ನುಡಿಗಳಿವು.

ತಾಲ್ಲೂಕಿನ ರಾಮಗಿರಿ ಹೋಬಳಿ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಯನ್ನು ವೈದ್ಯಕೀಯ ತಪಾಸಣೆಗೆಂದು ಸಾರ್ವಜನಿಕ ಆಸ್ಪತ್ರೆಗೆ ಕರೆತಂದಾಗ ಸಾವಿರಾರು ಜನ ಜಮಾಯಿಸಿದರು. ‘ಆರೋಪಿಯನ್ನು ನಮ್ಮ ಎದುರಿಗೆ ನಿಲ್ಲಿಸಬೇಕು’ ಎಂದು ಪಟ್ಟು ಹಿಡಿದರು.

‘ಎಲ್ಲೋ ದೂರದ ನಗರಗಳಲ್ಲಿ ನಡೆಯುತ್ತಿದ್ದ ಅತ್ಯಾಚಾರ ಘಟನೆಗಳು ನಮ್ಮ ಊರಿಗೂ ಬಂದಿದೆ. ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ. ಇಂತಹ ನೀಚರನ್ನು ಜೀವ ಸಮೇತ ಬಿಡಬಾರದು. ಸಂತ್ರಸ್ತೆಗೆ ಭದ್ರತೆ ನೀಡುವ ಬದಲು ಆರೋಪಿಗೆ ಪೊಲೀಸ್ ಭದ್ರತೆ ನೀಡಿದ್ದೀರಿ. ಮೊದಲು ಅವನನ್ನು ಹೊರಗೆ ಕಳಿಸಿ’ ಎಂದು ಸಂತ್ರಸ್ತೆಯ ಸಂಬಂಧಿಗಳು ಪೊಲೀಸರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು.

‘ನಿಯಮದಂತೆ ನಾವು ಆರೋಪಿಯನ್ನು ಸಾರ್ವಜನಿಕರಿಗೆ ತೋರಿಸುವಂತಿಲ್ಲ. ನಾವು ಪ್ರಕರಣ ನಡೆದ ರಾತ್ರಿಯೇ ಆರೋಪಿಯನ್ನು ಬಂಧಿಸಿದ್ದೇವೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸರು ಜನರನ್ನು ಸಮಾಧಾನ
ಪಡಿಸಿದರು. ಆದರೆ ಸುಮ್ಮನಾಗದ ಸಾರ್ವಜನಿಕರು ‘ಬೇಕೇ ಬೇಕು, ನ್ಯಾಯ ಬೇಕು’ ಎಂದು ಘೋಷಣೆ ಕೂಗಿದರು.

ವೈದ್ಯಕೀಯ ತಪಾಸಣೆ ಮುಗಿದ ನಂತರ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲು ವಾಹನ ಹತ್ತಿಸುವಾಗ ಬಿಗುವಿನ ಪರಿಸ್ಥಿತಿ ನಿರ್ಮಾಣ ಆಗಿತ್ತು. ವ್ಯಕ್ತಿಯೊಬ್ಬ ಆರೋಪಿಯ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಇದರಿಂದ ನಿಲ್ಲಿಸಿದ್ದ ಬೈಕ್‌ಗಳ ಮೇಲೆ ಬಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾದವು. ಸಂತ್ರಸ್ತೆಯ ಸಂಬಂಧಿಗಳು ಪೊಲೀಸ್ ಠಾಣೆಯ ಎದುರು ಜಮಾಯಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು