ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ ಮೂಡಿಸುತ್ತಿರುವ ಜನರ ನಿರ್ಲಕ್ಷ್ಯ

ಅಂತರ ಕಾಪಾಡುತ್ತಿಲ್ಲ; ಮಾಸ್ಕ್ ಧರಿಸುತ್ತಿಲ್ಲ; ಕಾರ್ಯಕ್ರಮಗಳಲ್ಲಿ ಜನದಟ್ಟಣೆ
Last Updated 25 ಜೂನ್ 2021, 3:29 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಕೋವಿಡ್ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗಿರುವ ಕಾರಣ ಸರ್ಕಾರ ಅನ್‌ಲಾಕ್‌ ಘೋಷಿಸಿದೆ. ಆದರೆ, ತಾಲ್ಲೂಕಿನಲ್ಲಿ ಜನ ದಟ್ಟಣೆ ಉಂಟಾಗುತ್ತಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷಿಸುತ್ತಿರುವುದು ಕಂಡು ಬರುತ್ತಿದೆ. ಸೋಂಕು ಹೆಚ್ಚಳವಾಗುವ ಆತಂಕ ಮೂಡಿಸಿದೆ.

ಪ್ರಥಮ ಅಲೆಗೆ ಹೋಲಿಕೆ ಮಾಡಿದಲ್ಲಿ 2ನೇ ಅಲೆಯಲ್ಲಿ ತಾಲ್ಲೂಕಿನಲ್ಲಿ ಹೆಚ್ಚು ಸೋಂಕು ಕಂಡು ಬಂದಿದೆ. ಸಾವಿನ ಪ್ರಮಾಣವೂ ಹೆಚ್ಚಳವಾಗಿತ್ತು. ಸೀಮಾಂಧ್ರ, ಬಳ್ಳಾರಿ ಗಡಿಗ್ರಾಮಗಳಲ್ಲಿ ಹೆಚ್ಚಿನ ಸೋಂಕಿತರು ಕಂಡುಬಂದಿದ್ದರು. ಒಂದು ವಾರದಿಂದ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದರೆ, ಜನರು ಸೋಂಕು ಪೂರ್ಣವಾಗಿ ಹೊರಟು ಹೋಗಿದೆ ಎಂಬಂತೆ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

‘ಕಳೆದ ಭಾನುವಾರ ಹಲವು ಗ್ರಾಮ ಗಳಲ್ಲಿ ಮದುವೆಗಳಲ್ಲಿ ಸಾಕಷ್ಟು ಜನರು ಸೇರಿದ್ದರು. ಅಂತರ ಕಾಪಾಡಿರಲಿಲ್ಲ, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಿರಲಿಲ್ಲ. ಗ್ರಾಮ ಪಂಚಾಯಿತಿಗಳು ಸಹ ಗಮನಹರಿಸುತ್ತಿಲ್ಲ. ರಾಂಪುರ, ಮೊಳಕಾಲ್ಮುರು, ಕೊಂಡ್ಲಹಳ್ಳಿ, ನಾಗಸಮುದ್ರ ಸೇರಿದಂತೆ ದೊಡ್ಡ ಗ್ರಾಮಗಳಲ್ಲಿ ಕಿರಾಣಿ, ಬಟ್ಟೆ, ಆಭರಣ ಅಂಗಡಿಗಳಲ್ಲಿ ಜನದಟ್ಟಣೆ ಕಂಡು ಬರುತ್ತಿದೆ. ಇದು ಸೋಂಕು ಮರು ಆಗಮನದ ಭೀತಿ ಮೂಡಿಸಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ ದೂರಿದರು.

ಸೆಲೂನ್‌ಗಳಲ್ಲಿ, ಹೋಟೆಲ್‌ ಗಳಲ್ಲಿ ಜನ ಸೇರುತ್ತಿದ್ದಾರೆ. ವಹಿವಾಟಿನ ಸಮಯ ಮೀರಿಯೂ ಅಂಗಡಿಗಳು ತೆರೆಯುತ್ತಿವೆ. ಪೊಲೀಸರು ಅನ್‌ಲಾಕ್ ನಂತರ ಗ್ರಾಮಗಳಿಗೆ ನಿಗದಿತ ಭೇಟಿ ನೀಡುತ್ತಿಲ್ಲ. ಪಂಚಾಯಿತಿ ಸಿಬ್ಬಂದಿ ಬೀಟ್ ಹಾಕುವುದು ಸ್ಥಗಿತವಾಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತೆ ತೊಂದರೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿಗಳು ಜಾಗೃತಿ ಕಾರ್ಯ ಮತ್ತು ಮೇಲುಸ್ತುವಾರಿ ನಡೆಸುವ ಮೂಲಕ ದಟ್ಟಣೆ ತಡೆಯಬೇಕು ಎಂದು ಮನವಿ ಮಾಡಲಾಗಿದೆ.

ತಾಲ್ಲೂಕಿನ ದೇವಸಮುದ್ರ ಹೋಬಳಿಯ ಗ್ರಾಮವೊಂದಲ್ಲಿ ಗುರುವಾರ ಕಾರ ಹುಣ್ಣಿಮೆಯ ಅಂಗವಾಗಿ ನಡೆದ ಎತ್ತುಗಳ ಓಟದಲ್ಲಿ ನೂರಾರು ಮಂದಿ ಅಂತರ ಕಾಪಾಡದೇ ಭಾಗವಹಿಸಿದ್ದರು. ಎಲ್ಲ ಮುನ್ನೆಚ್ಚರಿಕೆ ಮಾಯವಾಗಿದ್ದವು. ಈ ಗ್ರಾಮದಲ್ಲಿ 2ನೇ ಅಲೆಯಲ್ಲಿ ಸಾಕಷ್ಟು ಸೋಂಕು, ಬ್ಲಾಕ್ ಫಂಗಸ್ ಪ್ರಕರಣಗಳು ವರದಿಯಾಗಿದ್ದವು. ಆದರೆ, ಜನರು ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದು ಆತಂಕಕಾರಿ ಎಂಬ ಅಭಿಪ್ರಾಯ
ವ್ಯಕ್ತವಾಗಿದೆ.

---

3 ನೇ ಅಲೆ ಭೀತಿ ಇರುವ ಕಾರಣ ಜನರು ಕಡ್ಡಾಯವಾಗಿ ಮಾರ್ಗಸೂಚಿ ಅನುಸರಿಸಬೇಕು. ಲಸಿಕೆ ಪಡೆಯಬೇಕು. ಇಲ್ಲವಾದಲ್ಲಿ ಜೀವನ ನಡೆಸುವುದೇ ದುಸ್ತರವಾಗಲಿದೆ.

– ಟಿ. ಸುರೇಶ್‌ಕುಮಾರ್‌, ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT