ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಹೆಲಿಕಾಪ್ಟರ್ ಸವಾರಿಗೆ ಮುಗಿಬಿದ್ದ ಜನ

Last Updated 3 ಜೂನ್ 2022, 3:58 IST
ಅಕ್ಷರ ಗಾತ್ರ

ಹೊಸದುರ್ಗ: ಹಿಂಡಿದೇವರಹಟ್ಟಿಯಲ್ಲಿ ಗುರುವಾರ ಹೆಲಿಕಾಪ್ಟರ್‌ ಸವಾರಿ ಪ್ರಮುಖ ಆಕರ್ಷಣೆಯಾಗಿತ್ತು. ಹೆಲಿಕಾಪ್ಟರ್‌ ಏರಬೇಕೆಂಬ ಆಸೆಯಲ್ಲಿ ಜನ ಹೆಲಿಪ್ಯಾಡ್‌ನತ್ತ ಧಾವಿಸಿದ್ದರು. 120 ಜನರಿಗೆ ಮಾತ್ರ ಅವಕಾಶ ಲಭಿಸಿತು.

ಸಾಮಾನ್ಯ ಜನರಿಗೆ 3 ದಿನಗಳ ಕಾಲ ಉಚಿತ ಹೆಲಿಕಾಪ್ಟರ್ ಸೇವೆಯನ್ನು ಶಾಸಕ ಗೂಳಿಹಟ್ಟಿ ಡಿ. ಶೇಖರ್ ಆಯೋಜಿಸಿದ್ದಾರೆ.

ಜೂನ್ 2ರಂದು ಬೆಳಿಗ್ಗೆ 11ರಿಂದಲೇ ಹೆಲಿಕಾಪ್ಟರ್ ನೋಡಲು ಸಾವಿರಾರು ಜನ ಬಂದಿದ್ದರು. ಎಲ್ಲರಿಗೂ ಅವಕಾಶ ಇದೆ ಎಂಬ ವಿಷಯ ತಿಳಿಯುತ್ತಿದ್ದಂತೆ ‘ನಾ ಮುಂದು ತಾ ಮುಂದು’ ಎಂದು ಪೈಪೋಟಿ ನಡೆಸಿದರು. ಒಮ್ಮೆಗೆ 6 ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ಒಬ್ಬರಿಗೆ ಒಂದೊಂದು ಪಾಸ್ ನೀಡಲಾಗಿತ್ತು. ಒಮ್ಮೆ ಹೆಲಿಕಾಪ್ಟರ್‌ನಲ್ಲಿ ಒಂದು ಸುತ್ತು ಹೋಗಿ ಬಂದವರು ಸ್ವರ್ಗವೇ ಧರೆಗಿಳಿದಂತೆ ಸಂತಸ ವ್ಯಕ್ತಪಡಿಸುತ್ತಿದ್ದರು. ಅವರನ್ನು ಭೇಟಿಯಾಗಿ, ಅನುಭವ ಕೇಳಿದ ಉಳಿದವರೂ ಹೆಲಿಕಾಪ್ಟರ್‌ ಹತ್ತಲು ಹಾತೊರೆಯುತ್ತಿದ್ದರು.

ಹೆಲಿಕಾಪ್ಟರ್ ಬರುತ್ತಿದ್ದಂತೆ ಜನರು ಸೆಲ್ಫಿ ತೆಗೆಯಲು ಮುಗಿ ಬಿದ್ದರು. ಹೆಲಿಕಾಪ್ಟರ್ ಹತ್ತುವಾಗ, ಇಳಿಯುವಾಗ ಸಾಲದ್ದಕ್ಕೆ ಹೆಲಿಕಾಪ್ಟರ್ ಒಳಗೂ ಸೆಲ್ಫಿ ಕ್ರೇಜ್‌ ಜೋರಾಗಿತ್ತು. ಇದರ ವ್ಯವಸ್ಥಾಪಕರು ಸೆಲ್ಪಿ ತೆಗೆಯದಂತೆ ಎಷ್ಟೇ ಸೂಚನೆ ನೀಡಿದರೂ, ಜನ ಕ್ಯಾರೇ ಎನ್ನಲಿಲ್ಲ.

‘ತಾಲ್ಲೂಕಿನ ಮತ್ತೋಡು, ಮಾಡದಕೆರೆ ಹಾಗೂ ಶ್ರೀರಾಂಪುರ ಹೋಬಳಿಗಳಲ್ಲಿ ಹಲವು ಜನರು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ಕುರಿಗಾಹಿಗಳು, ರೈತರೂ ಇದ್ದಾರೆ. ಅವರೆಲ್ಲ ಹೆಲಿಕಾಪ್ಟರ್‌ನಲ್ಲಿ ಹತ್ತಿ ಒಮ್ಮೆ ವೇದಾವತಿ ಹಿನ್ನೀರ ಸೌಂದರ್ಯ ಸವಿಯಲಿ. ಸುತ್ತಲಿನ ಬೆಟ್ಟ ಗುಡ್ಡ ಪ್ರದೇಶಗಳನ್ನು ವೀಕ್ಷಿಸಲಿ ಎಂಬ ಉದ್ದೇಶದಿಂದ ಈ ಸೇವೆ ಕಲ್ಪಿಸಲಾಗಿದೆ. ಹಲವು ಜನರು ಇದರ ಸದುಪಯೋಗ ‌ಪಡೆಯುತ್ತಿದ್ದಾರೆ. ಈ ಮೂಲಕ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೂ ಒತ್ತು ನೀಡಲಾಗಿದೆ’ ಎಂದು ಶಾಸಕ ಗೂಳಿಹಟ್ಟಿ ಡಿ. ಶೇಖರ್ ತಿಳಿಸಿದರು.

‘ಚಿಕ್ಕವರಿದ್ದಾಗ ಹೆಲಿಕಾಪ್ಟರ್ ಶಬ್ದ ಬಂದ ಕೂಡಲೇ ಮನೆಯಿಂದ ಹೊರಗೆ ಓಡಿ ಬಂದು ಆಕಾಶ ನೋಡುತ್ತಿದ್ದೆವು. ನಮ್ಮಂತಹ ಸಾಮಾನ್ಯ ನಾಗರಿಕರಿಗೆ ಅದನ್ನು ಹತ್ತಿರದಿಂದ ನೋಡುವ, ಹತ್ತುವ ಅವಕಾಶ ಕಲ್ಪಿಸಿದ ಶಾಸಕರಿಗೆ ಧನ್ಯವಾದ’ ಎಂದು ಮಾಡದಕೆರೆಯ ರಂಗಸ್ವಾಮಿ ತಿಳಿಸಿದರು.

ಮೊದಲ ದಿನ ಮಧ್ಯಾಹ್ನ 12ರಿಂದ 2.30ರವರೆಗೆ ಮಾತ್ರ ಸವಾರಿ ನಡೆಯಿತು. ಜೂನ್‌ 4, 5ರಂದು ಬೆಳಿಗ್ಗೆ 11ರಿಂದ 5ರವರೆಗೆ ಜನಸಾಮಾನ್ಯರಿಗೆ ಉಚಿತ ಹೆಲಿಕಾಪ್ಟರ್‌ ಸವಾರಿ ಅವಕಾಶ ಇರಲಿದೆ.

ಉಚಿತ ಬೋಟಿಂಗ್ ವ್ಯವಸ್ಥೆ: ಹಿಂಡಿದೇವರಹಟ್ಟಿಗೆ ಬರುವ ಜನತೆಗೆ ಹೆಲಿಕಾಪ್ಟರ್ ಮಾತ್ರವಲ್ಲದೇ ಉಚಿತ ಬೋಟಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT