ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೆ ಸ್ಫೋಟದ ಸದ್ದಿಗೆ ನಡುಗಿದ ಜನ!

ಸೇವಾನಗರದ ಬಳಿ ಭದ್ರಾ ಮೇಲ್ದಂಡೆ ಕಾಮಗಾರಿ
Last Updated 4 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆಯ ಚಾನಲ್‌ ನಿರ್ಮಾಣ ಕಾಮಗಾರಿಯ ಬಂಡೆ ಸ್ಫೋಟದ ಸದ್ದಿಗೆ ತಾಲ್ಲೂಕಿನ ಜಾನಕಲ್‌ ಸೇವಾನಗರದ ಜನರು ನಡುಗಿದ್ದಾರೆ.

ಇಲ್ಲಿನ 200ಕ್ಕೂ ಹೆಚ್ಚು ಮನೆಗಳಿದ್ದು, ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಾರೆ. ಬಹುತೇಕರು ಬಡವರಿದ್ದು, ಆಶ್ರಯ ಮನೆಯಲ್ಲಿ ವಾಸಿಸುತ್ತಿದ್ದಾರೆ. ಗ್ರಾಮದಿಂದ 200 ಮೀಟರ್‌ ಅಂತರದಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿ ನಡೆಯುತ್ತಿದೆ.

ಆದರೆ, ಈ ಚಾನಲ್‌ ಕಾಮಗಾರಿ ಗುತ್ತಿಗೆ ಪಡೆದಿರುವ ಆದಿತ್ಯ ಕನ್‌ಸ್ಟ್ರಕ್ಷನ್‌ ಕಂಪನಿಯವರು ಬಂಡೆಗಳನ್ನು ಒಡೆಯಲು ಬಳಸುವ ಡೈನಾಮೆಟ್‌ ಸ್ಫೋಟದ ತೀವ್ರತೆ ಹೆಚ್ಚಾಗಿದೆ. ಸ್ಫೋಟದ ಸದ್ದಿಗೆ ಇಡೀ ಗ್ರಾಮವೇ ಅದುರುತ್ತಿದೆ. ಜನರು ಬೆಚ್ಚಿಬೀಳುತ್ತಿದ್ದಾರೆ. ಸ್ಫೋಟದಿಂದ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯೊಳಗೆ ಇರಲು ಭಯವಾಗುತ್ತಿದೆ. ನೆಮ್ಮದಿಯಿಂದ ನಿದ್ದೆ ಮಾಡಲು ಆಗುತ್ತಿಲ್ಲ. ಸಿಡಿಸಿದ ಬಂಡೆಯ ಕಲ್ಲುಗಳು 300 ಮೀಟರ್‌ ಎತ್ತರಕ್ಕೆ ಹಾರಿ ಗ್ರಾಮಕ್ಕೆ ಸಿಡಿಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ ಎನ್ನುತ್ತಾರೆ ಮುಖಂಡ ಆರ್‌. ಮೂರ್ತಿನಾಯ್ಕ.

20 ರಿಂದ 30 ಕೊಳವೆಯನ್ನು 20 ಅಡಿ ಆಳದವರೆಗೂ ಕೊರೆದು ಒಮ್ಮೆಗೆ ಸ್ಫೋಟಿಸುತ್ತಿದ್ದಾರೆ. ಇದರಿಂದ ಉಂಟಾಗುವ ದೂಳು ಗ್ರಾಮವನ್ನು ಆವರಿಸುತ್ತಿದೆ. ಒಂದು ವರ್ಷದಿಂದ ಗಂಧಕದ ವಾಸನೆ, ದೂಳು ಕುಡಿದು ಬದುಕಲು ಆಗುತ್ತಿಲ್ಲ. ಇದರಿಂದಾಗಿ ಮಕ್ಕಳಿನಿಂದ ಹಿಡಿದು ವೃದ್ಧರವರೆಗೂ ಶೀತ, ನೆಗಡಿ, ಕೆಮ್ಮ , ಜ್ವರದಿಂದ ಬಳಲುತ್ತಿದ್ದಾರೆ. ಕೂಲಿ ಮಾಡಿ ದುಡಿದ ಹಣವನ್ನು ಆಸ್ಪತ್ರೆಗೆ ಹಾಕುವ‌ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಸದ್ದು ಕಡಿಮೆ ಮಾಡಿ ಕೆಲಸ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲಿ ಗಮನಹರಿಸಿಲ್ಲ. ಇದರಿಂದ ಭಯದಲ್ಲಿ ಜೀವನ ಸಾಗಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ನಮ್ಮ ಹಿತ ಕಾಪಾಡಲು ಮುಂದಾಗದಿದ್ದರೆ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಮುಂದುವರಿಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಕರೆ ಸ್ವೀಕರಿಸಿದ ಎಂಜಿನಿಯರ್‌:ಸೇವಾನಗರ ಬಳಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಬಗ್ಗೆ ಮಾಹಿತಿ ಪಡೆಯಲು ‘ಪ್ರಜಾವಾಣಿ’ ಕರೆ ಮಾಡಿದರೂ ಅಧಿಕಾರಿಗಳು ಕರೆಯನ್ನು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT