ಗಮನ ಸೆಳೆಯುತ್ತಿದೆ ಛಾಯಾಚಿತ್ರ ಪ್ರದರ್ಶನ

7
ಐತಿಹಾಸಿಕ ದಾಖಲೆಗಳನ್ನು ಕಣ್ತುಂಬಿಕೊಂಡ ವಿದ್ಯಾರ್ಥಿನಿಯರು

ಗಮನ ಸೆಳೆಯುತ್ತಿದೆ ಛಾಯಾಚಿತ್ರ ಪ್ರದರ್ಶನ

Published:
Updated:
Prajavani

ಚಿತ್ರದುರ್ಗ: ಐತಿಹಾಸಿಕ ಘಟನಾವಳಿಗಳನ್ನು ಮೆಲುಕು ಹಾಕುವ ಮೂಲಕ ಅವುಗಳನ್ನು ವಿದ್ಯಾರ್ಥಿ ಸಮೂಹಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ದಾಖಲೆಗಳ ಸಮೇತ ಛಾಯಾ ಚಿತ್ರಗಳು ಇಲ್ಲಿ ಗುರುವಾರ ಅನಾವರಣಗೊಂಡವು.

ರಾಜ್ಯ ಪತ್ರಗಾರ ಇಲಾಖೆ ಹಾಗೂ ಮುರುಘಾರಾಜೇಂದ್ರ ಮಹಿಳಾ ಮಹಾವಿದ್ಯಾಲಯದ ಐಕ್ಯುಎಸಿ ವಿಭಾಗದಿಂದ ಶಿಮುಶ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಐತಿಹಾಸಿಕ ದಾಖಲೆಗಳ ಛಾಯಾಚಿತ್ರ ಪ್ರದರ್ಶನ ಸಾರ್ವಜನಿಕರನ್ನು ಆಕರ್ಷಿಸಿತು.

ವಿಧಾನಸೌಧ ಕಟ್ಟಡ ನಿರ್ಮಾಣಕ್ಕಿಂತ ಮೊದಲ ಸ್ಥೂಲ ನಕ್ಷೆ, ರಾಜ ರವಿವರ್ಮ ಬರವಣಿಗೆ ಶೈಲಿ, 1902 ರಲ್ಲಿ ಆನೆಯನ್ನು ಸಾರ್ವಜನಿಕವಾಗಿ ಮಾರಾಟ ಮಾಡಲು ಹೊರಡಿಸಿದ ಸರ್ಕಾರಿ ಆದೇಶ, ಜನರಲ್ ಕೆ.ಎಂ. ಕಾರಿಯಪ್ಪ ಅವರಿಗೆ ಆಗಿನ ಪ್ರಧಾನಿ ಇಂದಿರಾಗಾಂಧಿ ಬರೆದ ಅಭಿನಂದನಾ ಪತ್ರ ಮತ್ತು ಸಹಿಯುಳ್ಳ ಅಪರೂಪದ ಚಿತ್ರಗಳು ಗಮನ ಸೆಳೆದವು.

1914-15 ರಲ್ಲಿ ಸಿವಿಲ್‌ ನ್ಯಾಯಾಧೀಶರಿಗೆ ಕನ್ನಡ ಬಳಕೆ ಕಡ್ಡಾಯ ಎಂಬುದಾಗಿ ನಿರ್ಧರಿಸಿ ಆದೇಶ ನೀಡಿರುವುದು. 1935 ರಲ್ಲಿ ಡಿ.ವಿ. ಗುಂಡಪ್ಪ ಅವರು ಪ್ರಿಂಟಿಂಗ್ ಪ್ರೆಸ್ ಪ್ರಾರಂಭಿಸಲು ₹ 6 ಸಾವಿರ ಸಾಲ ಕೋರಿರುವ ಪತ್ರ ಹಾಗೂ ರಾಷ್ಟ್ರಕವಿ ಕುವೆಂಪು ಅವರು ಬಿ. ಚಿಕ್ಕಮುನಿಯಪ್ಪ ಅವರಿಗೆ ಬರೆದ ಅಂಚೆ ಪತ್ರ, ಸಹಿ ನೋಡುಗರಲ್ಲಿ ಅಚ್ಚರಿ ಮೂಡಿಸಿದವು.

ಮೊದಲ ಮಹಾಯುದ್ಧಕ್ಕೆ ಹಣ ನೀಡುವಂತೆ ಬ್ರಿಟಿಷರು ಅಪೀಲು ಮಾಡಿದ ನಂತರ ಮೈಸೂರಿನ ಮಹಾರಾಜರು ₹ 50 ಲಕ್ಷ ಮತ್ತು ಸೈನಿಕರನ್ನು ಯುದ್ಧಕ್ಕೆ ಕಳುಹಿಸಲು ಭರವಸೆ ನೀಡಿದ ಪತ್ರ, 1912 ರಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರು ಮೈಸೂರಿನ ದಿವಾನರಾಗಿ ಅಧಿಕಾರ ಪಡೆದದ್ದು ಹಾಗೂ 1919ರಲ್ಲಿ ಅವರಿಗೆ ಪಿಂಚಣಿ ನೀಡಿರುವ ಕುರಿತ ಆದೇಶ ಪತ್ರ ಹೇಗಿತ್ತು ಎಂಬುದನ್ನು ಪ್ರದರ್ಶನದ ಮೂಲಕ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.

1922 ರ ಸೆ. 4ರಂದು ಮೈಸೂರಿಗೆ ಭೇಟಿ ನೀಡುವ ಕುರಿತು ಡಾ. ರವೀಂದ್ರನಾಥ ಟಾಗೂರ್‌ ಅವರು ಕಳುಹಿಸಿದ್ದ ಟೆಲಿಗ್ರಾಂನ ವಿವರ, 1931ರ 2 ಅಣೆಯಿಂದ 1957 ರವರೆಗಿನ ₹ 2 ಸೇರಿ ವಿವಿಧ ಬೆಲೆಯ ಸ್ಟ್ಯಾಂಪ್‌ಗಳು, 1962ರಲ್ಲಿ ನಿಜಲಿಂಗಪ್ಪ ಅವರ ಸಂಪುಟದಲ್ಲಿದ್ದ ಸಚಿವರು ಸೇರಿ ಅನೇಕ ಮಾಹಿತಿ ವಿದ್ಯಾರ್ಥಿನಿಯರನ್ನು ಆಕರ್ಷಿಸಿದವು.

ಮೈಸೂರು ಮಹಾರಾಜರ ಆಳ್ವಿಕೆ, ಮಹಾತ್ಮಗಾಂಧಿ ಅವರು ಕರ್ನಾಟಕಕ್ಕೆ ಬಂದಿದ್ದಾಗ ತೆಗೆದಿದ್ದ ಅವರ ಚಿತ್ರ. ಟಿ.ಬಿ. ಕೇಶವರಾವ್ ಅವರಿಗೆ ಬರೆದ ಪತ್ರದಲ್ಲಿ ಅವರ ಸಹಿ ಹೀಗೆ ಇನ್ನೂ ಅನೇಕ ಅಪರೂಪದ ಉಪಯುಕ್ತ ಛಾಯಾಚಿತ್ರಗಳನ್ನು ಎರಡು ದಿನಗಳ ಪ್ರದರ್ಶನದಲ್ಲಿ ಇಡಲಾಗಿದೆ.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ. ಚಿತ್ರಶೇಖರ್, ಇತಿಹಾಸ ಸಂಶೋಧಕ ಪ್ರೊ.ಬಿ. ರಾಜಶೇಖರಪ್ಪ, ಎಸ್‌ಜೆಎಂ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಸಿ. ಬಸವರಾಜಪ್ಪ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !