ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿರ್ಮಾಣ ಘಟಕಕ್ಕೆ ಚಿಂತನೆ

ರಕ್ಷಣೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಸಚಿವ ಎ. ನಾರಾಯಣಸ್ವಾಮಿ ಭೇಟಿ
Last Updated 5 ಜುಲೈ 2022, 4:14 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಇಲ್ಲಿಗೆ ಸಮೀಪ ಇರುವ ರಕ್ಷಣೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆವರಣದಲ್ಲಿ ವೈಮಾನಿಕ ರಕ್ಷಣಾ ಕೇತ್ರಕ್ಕೆ ಸಂಬಂಧಿಸಿದ ಬೃಹತ್ ನಿರ್ಮಾಣ ಘಟಕ ತೆರೆಯುವ ಚಿಂತನೆ ಇದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ಡಿಆರ್‌ಡಿಒ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಡಿಆರ್‌ಡಿಒ ಮೊದಲ ಬಾರಿಗೆ ಮಾನವ ರಹಿತ ಯುದ್ಧ ವಿಮಾನದ ಹಾರಾಟವನ್ನು ಯಶಸ್ವಿಗೊಳಿಸಿರುವುದು ಸಂತಸ ವಿಷಯ. ಇದರ ಬಗ್ಗೆ ಅಪಾರ ಹೆಮ್ಮೆ ಇದೆ. ಸ್ಥಳೀಯವಾಗಿ ಉದ್ಯೋಗಾವಕಾಶ ದೊರೆಯಲು ನಿರ್ಮಾಣ ಘಟಕ ಸ್ಥಾಪನೆ ಅಗತ್ಯವಾಗಿದೆ. ಘಟಕ ಸ್ಥಾಪನೆಯ ಸಾಧಕ– ಬಾಧಕದ ವರದಿ ತಯಾರಿಸಿ ಸರ್ಕಾರದೊಂದಗೆ ಚರ್ಚಿಸಲಾಗುವುದು’ ಎಂದು ಅವರು ತಿಳಿಸಿದರು.

‘ಮಾನವ ರಹಿತ ಯುದ್ಧ ವಿಮಾನ ಹಾರಟ ಯಶಸ್ವಿಯಾಗಿದೆ. ವಿಶ್ವದಲ್ಲೇ ಈ ಸಾಧನೆ ಮಾಡಿದ ಕೆಲವೇ ದೇಶಗಳ ಸಾಲಿಗೆ ಭಾರತ ಸೇರಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಮಾನ ನಿಲ್ದಾಣ ಅಸಾಧ್ಯ: ‘ಆರ್ಥಿಕ ಬೆಳವಣಿಗೆ, ರಫ್ತು ಹೆಚ್ಚಳ, ಉತ್ಪಾದನೆ ಮತ್ತು ಸಾಗಾಣಿಕೆ ವೆಚ್ಚ ಕಡಿತಗೊಳಿಸುವ ನಿಟ್ಟಿನಲ್ಲಿ ರೈಲು ಹಾಗೂ ವೈಮಾನಿಕ ಸೌಲಭ್ಯ ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ. ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ನಾಗರಿಕ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವ ಕುರಿತು ಚರ್ಚೆ ನಡೆಸಲಾಗಿದೆ. ರಕ್ಷಣಾ ಇಲಾಖೆ ಅನುಮತಿ ಪಡೆದು ವೈಮಾನಿಕ ಪರೀಕ್ಷಾ ಕ್ಷೇತ್ರವನ್ನು ಬಳಸಿಕೊಂಡು ನಾಗರಿಕ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಚಿಂತನೆ ನಡೆದಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಆರ್‌ಡಿಒ ಅಧಿಕಾರಿಗಳು, ‘ನಾಗರಿಕ ವಿಮಾನಯಾನ ಸೇವೆಗೆ ಬಳಕೆಯಾಗುವ ವಿಮಾನಗಳ ರನ್‌ವೇ ಸುಮಾರು 60 ಟನ್ ತೂಕ ಹೊರುವ ಸಾಮರ್ಥ್ಯ ಬೇಕು. ಆದರೆ, ಇಲ್ಲಿನ ವೈಮಾನಿಕ ಪರೀಕ್ಷಣಾ ನೆಲೆಯ ರನ್‌ವೇ 40 ಟನ್ ತೂಕ ಹೊರುವ ಸಾಮರ್ಥ್ಯದ್ದಾಗಿದೆ. ಇದು ಕೇವಲ ಪರೀಕ್ಷಾರ್ಥ ಹಾರಾಟದ ಉದ್ದೇಶಕ್ಕಾಗಿ ಮಾತ್ರ ನಿರ್ಮಿಸಿರುವ ರನ್‌ವೇ ಆಗಿದ್ದು, ನಾಗರಿಕ ವಿಮಾನಯಾನ ಸೇವೆಯ ಬಳಕೆಗೆ ಅಸಾಧ್ಯ’ ಎಂದು ಸ್ಪಷ್ಪಪಡಿಸಿದರು.

‘ಮಾನವ ರಹಿತ ಯುದ್ದ ವಿಮಾನ ಪರೀಕ್ಷೆಗೆ ಇಡೀ ದೇಶದಲ್ಲಿ ಮೀಸಲಿರುವ ಏಕೈಕ ವೈಮಾನಿಕ ಪರೀಕ್ಷಣಾ ಕೇಂದ್ರ ಇದಾಗಿದೆ. ಹಾಗೇ ಇಡೀ ಜಿಲ್ಲೆಯಲ್ಲಿ ಗಾಳಿಯ ವೇಗ ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ. ಇದರಿಂದ ವಿಮಾನ ಹಾರಾಟಕ್ಕೆ ಪೂರಕ ವಾತವರಣ ಇಲ್ಲ’ ಎಂದರು.

ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ, ಸಚಿವ ನಾರಾಯಣಸ್ವಾಮಿ ಅವರ ಪತ್ನಿ ವಿಜಯಕುಮಾರಿ, ಪುತ್ರಿಯರಾದ ಕೌಶಲ್‌ಸ್ವಾಮಿ, ಶೀತಲ್‌ಸ್ವಾಮಿ ಇದ್ದರು.

24 ಗಂಟೆ ಹಾರಬಲ್ಲ ವಿಮಾನ
ಮಾನವ ರಹಿತ ಯುದ್ಧ ವಿಮಾನವು ಒಂದು ಸಾವಿರ ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇದು ನಿರಂತರವಾಗಿ 24 ಗಂಟೆ ಹಾರಾಟ ನಡೆಸಬಲ್ಲದು ಎಂದು ಡಿಆರ್‌ಡಿಒ ಅಧಿಕಾರಿಗಳು ವಿವರಿಸಿದರು.

‘ಈ ವಿಮಾನವು ಗಂಟೆಗೆ 300 ಕಿ.ಮೀ ವೇಗದಲ್ಲಿ ಹಾರಾಟ ನಡೆಸುತ್ತದೆ. ಇಂಧನ ಟ್ಯಾಂಕ್‌ ಸಾಮರ್ಥ್ಯ ಎರಡು ಸಾವಿರ ಲೀಟರ್ ಇದೆ. ಗಂಟೆಗೆ 20 ಲೀಟರ್‌ನಷ್ಟು ಇಂಧನ ವ್ಯಯವಾಗುತ್ತದೆ. ಈ ಯುದ್ಧವಿಮಾನವು ಎರಡು ಟನ್‌ ತೂಕವಿದ್ದು, ಯುದ್ಧದ ಸಮಯದಲ್ಲಿ ಸ್ವಯಂ ಚಾಲಿತವಾಗಿ ಶತ್ರು ನೆಲೆಗಳನ್ನು ಧ್ವಂಸಗೊಳಿಸಬಲ್ಲದು’ ಎಂದರು.

‘ಈ ಯುದ್ಧ ವಿಮಾನದ ಮೊದಲ ಹಂತದ ಪರೀಕ್ಷೆ ಯಶಸ್ವಿಯಾಗಿದೆ. 30 ಕಿ.ಮೀ ದೂರದ ಪರೀಕ್ಷಾರ್ಥ ಹಾರಾಟದಲ್ಲಿ ಭರವಸೆ ಮೂಡಿದೆ.ಇನ್ನೂ ಅನೇಕ ವಿಧದ ಪರೀಕ್ಷೆಗಳು ನಡೆಯಲಿವೆ. ಇದು ದೇಶದಲ್ಲಿರುವ ಏಕೈಕ ಮಾನವ ರಹಿತ ವಿಮಾನದ ಪರೀಕ್ಷಾರ್ಥ ನೆಲೆ’ ಎಂದು ಹೇಳಿದರು.

10 ಮಾನವ ರಹಿತ ಯುದ್ದ ವಿಮಾನ
ನಾಯಕನಹಟ್ಟಿ ಹೋಬಳಿಯ ಕುದಾಪುರ ಸಮೀಪದಲ್ಲಿ ವೈಮಾನಿಕ ಪರೀಕ್ಷಾರ್ಥ ಕೇಂದ್ರವನ್ನು2016ರಲ್ಲಿ ₹ 384 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ 1 ರೇಜ್ ಕಂಟ್ರೋಲರ್, 2 ವಿಮಾನ ಹ್ಯಾಂಗರ್ ಘಟಕಗಳಿವೆ. 90 ಮತ್ತು 290 ಏರೋನ್ಯಾಟಿಕಲ್ ದೂರ ಗ್ರಹಿಸುವ 2 ರೆಡಾರ್‌ಗಳ ವ್ಯವಸ್ಥೆ ಇದೆ. 10 ಮಾನವ ರಹಿತ ಯುದ್ದ ವಿಮಾನಗಳಿವೆ. ನಿತ್ಯ ಯುದ್ದ ವಿಮಾನಗಳ ಪರೀಕ್ಷೆ ಹಾಗೂ ಅಭಿವೃದ್ಧಿ ಮಾಡಲಾಗುತ್ತದೆ.

ರುಸ್ತುಂ-2 ಮಾನವ ರಹಿತ ಡ್ರೋನ್ ಇದುವರೆಗೆ 150 ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿದೆ. ಟಾಟಾ ಹಾಗೂ ಎಲ್.ಅಂಡ್.ಟಿ ಡೆಫೆನ್ಸ್ ಕಂಪೆನಿಗಳು ಇಲ್ಲಿ ಒಪ್ಪಂದ ಕರಾರಿನ ಮೇರೆಗೆ ಡ್ರೋಣ್‌ ಹಾಗೂ ಯುದ್ದ ವಿಮಾನಗಳ ಸಂಶೋಧನೆ ನಡೆಸುತ್ತಿವೆ ಎಂಬ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT