ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

82 ವಾಹನ ಜಪ್ತಿ, 133 ಜನ ಬಂಧನ

ಲಾಕ್‌ಡೌನ್‌ ನಿಯಮ ಇನ್ನಷ್ಟು ಬಿಗಿ, ವಾಹನ – ಜನ ಸಂಚಾರಕ್ಕೆ ಕಡಿವಾಣ
Last Updated 30 ಮಾರ್ಚ್ 2020, 14:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಲಾಕ್‌ಡೌನ್‌ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿರುವ ಜಿಲ್ಲಾ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದ 82 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, 133 ಜನರನ್ನು ಬಂಧಿಸಿದ್ದಾರೆ. ಲಾಕ್‌ಡೌನ್‌ ಅವಧಿ ಪೂರ್ಣಗೊಳ್ಳುವವರೆಗೂ ವಾಹನಗಳನ್ನು ವಾರಸುದಾರರಿಗೆ ನೀಡದಂತೆ ಕಠಿಣ ಕ್ರಮ ಕೈಗೊಂಡಿದ್ದಾರೆ.

ವಶಕ್ಕೆ ಪಡೆದ ವಾಹನಗಳಲ್ಲಿ ಬೈಕುಗಳೇ ಹೆಚ್ಚಾಗಿವೆ. ಆಟೊ ಸೇರಿದಂತೆ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದ ಇತರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ವಾಹನ ಸವಾರರು ಮತ್ತು ಚಾಲಕರ ವಿರುದ್ಧ 94 ಪ್ರಕರಣಗಳನ್ನು ದಾಖಲಿಸಲಾಗಿದೆ.

ಕರ್ಫ್ಯೂ ಮಾದರಿಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಚಿತ್ರದುರ್ಗ, ಹಿರಿಯೂರು ಸೇರಿದಂತೆ ಹಲವೆಡೆ ಜನಸಂಚಾರ ನಿಯಂತ್ರಣಕ್ಕೆ ಬಂದಿರಲಿಲ್ಲ. ಲಾಠಿ ಬೀಸಿ ಭೀತಿ ಸೃಷ್ಟಿಸಿದರೂ ಜನರು ಎಚ್ಚೆತ್ತುಕೊಳ್ಳಲಿಲ್ಲ. ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದವರನ್ನು ತಡೆದು ಬಸ್ಕಿ ಹೊಡೆಸಿ ತಿಳಿವಳಿಕೆ ನೀಡಿದರೂ ಮನವರಿಕೆ ಮಾಡಿಕೊಂಡಂತೆ ಕಾಣಲಿಲ್ಲ. ಹೀಗಾಗಿ, ಮೂರು ದಿನಗಳಿಂದ ಪೊಲೀಸರು ವಾಹನಗಳನ್ನು ಜಪ್ತಿ ಮಾಡಲು ಆರಂಭಿಸಿದ್ದಾರೆ. ಇದು ಪರಿಣಾಮ ಬೀರುತ್ತಿದ್ದು, ರಸ್ತೆಯಲ್ಲಿ ಜನ ಮತ್ತು ವಾಹನ ಸಂಚಾರ ಸಂಪೂರ್ಣ ವಿರಳವಾಗಿದೆ.

ಮೂರು ಗಂಟೆ ಕಾಲಾವಕಾಶ:

ತರಕಾರಿ, ಹಾಲು ಸೇರಿ ಇತರ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ ಮುಕ್ತ ಅವಕಾಶ ನೀಡಲಾಗಿದೆ. ಇದೇ ಅವಧಿಯಲ್ಲಿ ಜನರು ಮನೆಯಿಂದ ಹೊರಗೆ ಬರುವ ಸ್ವಾತಂತ್ರ್ಯ ಹೊಂದಿದ್ದಾರೆ. ಮುರುಘ ರಾಜೇಂದ್ರ ಕ್ರೀಡಾಂಗಣ ಹಾಗೂ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಪ್ರತಿ ವಾರ್ಡ್‌ ವ್ಯಾಪ್ತಿಯಲ್ಲಿಯೂ ತರಕಾರಿ ಸಿಗುವ ವ್ಯವಸ್ಥೆ ರೂಪಿಸಲು ನಗರಸಭೆ ಪ್ರಯತ್ನ ನಡೆಸುತ್ತಿದೆ.

ಹಾಲು ಮಾರಾಟ ಮಾಡುವವರಿಗೂ ವಿನಾಯಿತಿ ನೀಡಲಾಗಿದೆ. ನಿತ್ಯ ನಸುಕಿನಲ್ಲಿ ಹಾಲಿನ ಮಾರಾಟ ಆರಂಭವಾಗುತ್ತದೆ. ಬಹುತೇಕ ಬೆಳಿಗ್ಗೆಯೇ ಈ ವಹಿವಾಟು ನಡೆಯುತ್ತದೆ. 10 ಗಂಟೆಯ ಬಳಿಕ ಕಿರಾಣಿ ಹಾಗೂ ಔಷಧದಂಗಡಿಗಳು ಬಾಗಿಲು ತೆರೆಯುತ್ತವೆ. ಇಲ್ಲಿಗೆ ಬರುವವರು ಸಕಾರಣ ನೀಡಬೇಕು. ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ತುಂಬಿಸಿಕೊಳ್ಳುವವರಿಗೂ ವಿನಾಯಿತಿ ನೀಡಲಾಗಿದೆ. ಆದರೆ, ಇದನ್ನು ದುರುಪಯೋಗ ಪಡಿಸಿಕೊಳ್ಳುವ ಅನೇಕರು ಎಲ್ಲೆಂದರಲ್ಲಿ ತಿರುಗಾಡುತ್ತಿದ್ದಾರೆ.

ಮುಖಗವಸು ಕಡ್ಡಾಯ:ತುರ್ತು ಕಾರ್ಯಗಳಿಗೆ ಮನೆಯಿಂದ ಹೊರಗೆ ಬರುವವರು ಮಾಸ್ಕ್‌ ಧರಿಸುವುದು ಕಡ್ಡಾಯ. ಮಾಸ್ಕ್‌ ಸಿಗದಿದ್ದರೆ ಕರ್ಚಿಫ್‌, ವೇಲ್‌ ಅಥವಾ ಟವೆಲ್‌ ಮುಖಕ್ಕೆ ಸುತ್ತಿಕೊಳ್ಳಬೇಕು. ಹೀಗೆ ಮುನ್ನೆಚ್ಚರಿಕೆ ಕೈಗೊಳ್ಳದೇ ಇರುವವರನ್ನು ಪೊಲೀಸರು ಸಂಚರಿಸಲು ಅವಕಾಶ ನೀಡುತ್ತಿಲ್ಲ. ಸುರಕ್ಷತಾ ನಿಯಮ ಉಲ್ಲಂಘಿಸುವವರನ್ನು ಪೊಲೀಸರು ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಇಂತಹ ಸವಾರರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯುವ ಅಧಿಕಾರ ಹೊಂದಿದ್ದಾರೆ.

ಸಾಮಾಜಿಕ ಅಂತರ ಪಾಲನೆ ಮಾಡಬೇಕಾಗಿರುವುದರಿಂದ ಒಂದೇ ದ್ವಿಚಕ್ರ ವಾಹನದಲ್ಲಿ ಇಬ್ಬರು ಸಂಚರಿಸಲು ಅವಕಾಶವಿಲ್ಲ. ಹೀಗೆ, ಸಂಚರಿಸುವ ಅನಿವಾರ್ಯತೆ ಇದ್ದಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಬೇಕು. ಇದರಲ್ಲಿ ವ್ಯತ್ಯಾಸ ಉಂಟಾದರೆ ಪೊಲೀಸರು ಪ್ರಶ್ನಿಸುತ್ತಾರೆ. ಆಸ್ಪತ್ರೆ, ಔಷಧದಂಗಡಿಗೆ ತೆರಳುವವರು ದಾಖಲೆಗಳನ್ನು ತೋರಿಸಬೇಕು.

ನಗರದ ಸುತ್ತ ನಾಕಾಬಂಧಿ:ವಾಹನ ಸಂಚಾರ ನಿಯಂತ್ರಿಸುವ ಉದ್ದೇಶದಿಂದ ನಗರದ ಸುತ್ತ ನಾಕಾಬಂಧಿ ಹಾಕಲಾಗಿದೆ. ನಗರವನ್ನು ಸಂಪರ್ಕಿಸುವ ಪ್ರತಿ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು ಮುಚ್ಚಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ವಾಹನವನ್ನು ತಪಾಸಣೆ ಮಾಡುತ್ತಿದ್ದಾರೆ. ಸಕಾರಣವಿಲ್ಲದೇ ಯಾವ ವಾಹನವನ್ನು ನಗರದ ಒಳಗೆ ಬಿಡುತ್ತಿಲ್ಲ.

ಚಳ್ಳಕೆರೆ ಹಾಗೂ ಹಿರಿಯೂರು ಭಾಗದ ರಸ್ತೆಗಳಿಂದ ಬರುವವರು ಬಿ.ಡಿ.ರಸ್ತೆಯಲ್ಲಿ ಸಂಚರಿಸದಂತೆ ಬ್ಯಾರಿಕೇಡ್‌ ಹಾಕಲಾಗಿದೆ. ತುರುವನೂರು ರಸ್ತೆಯಲ್ಲಿ ಎರಡು ಕಡೆ ಪೊಲೀಸರು ವಾಹನ ತಪಾಸಣೆ ಮಾಡುತ್ತಾರೆ. ಹೊಸಪೇಟೆ ರಸ್ತೆ, ದಾವಣಗೆರೆ ರಸ್ತೆ, ಹೊಳಲ್ಕೆರೆ ಮಾರ್ಗದಲ್ಲಿಯೂ ಚೆಕ್‌ಪೋಸ್ಟ್‌ ಕಾರ್ಯನಿರ್ವಹಿಸುತ್ತಿವೆ. ಗಾಂಧಿ ವೃತ್ತ ಬ್ಯಾರಿಕೇಡ್‌ಗಳಿಂದ ಸುತ್ತುವರಿದಿದೆ. ಇಲ್ಲಿ ಹಾದು ಹೋಗುವ ಪ್ರತಿಯೊಬ್ಬರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT