ಗುರುವಾರ , ಆಗಸ್ಟ್ 18, 2022
26 °C
ನೋಂದಣಿ ಸ್ಥಗಿತ l ರೈತರ ಆಕ್ರೋಶ

ರಾಗಿ ಖರೀದಿ ನೋಂದಣಿಗೆ ಮುಗಿಬಿದ್ದ ರೈತರು: ನೂಕಾಟ, ತಳ್ಳಾಟ, ಲಾಠಿ ಬೀಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಬೆಂಬಲ ಬೆಲೆ ಯೋಜನೆಯ ಅಡಿ ರಾಗಿ ಖರೀದಿಗಾಗಿ ಹೆಸರು ನೋಂದಣಿಗೆ ಬುಧವಾರ ವಿಪರೀತ ನೂಕು ನುಗ್ಗಲು ಉಂಟಾಗಿ, ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಿದರು.

ರಾಗಿ ಖರೀದಿಸುವುದಾಗಿ ಸರ್ಕಾರದಿಂದ ಆದೇಶ ಬಂದ ಕೂಡಲೇ ರೈತರು ಸೋಮವಾರ ಬೆಳಿಗ್ಗೆಯಿಂದಲೇ ಖರೀದಿ ಕೇಂದ್ರದ ಬಳಿ ಸಾಲುಗಟ್ಟಿ ನಿಂತಿದ್ದರು. ಸರ್ವರ್ ಸಮಸ್ಯೆ ಇದ್ದ ಕಾರಣ ಸಂಜೆಯವರೆಗೂ ಕಾದು ಬೇಸರದಿಂದ ಮನೆಗೆ
ನಡೆದರು.

ಸರ್ವರ್ ಸಮಸ್ಯೆ ಸರಿಯಾಗುವ ದಿನ ಅಥವಾ ಸಮಯವನ್ನು ಯಾರೊಬ್ಬರೂ ರೈತರಿಗೆ ತಿಳಿಸಲಿಲ್ಲ. ಇದ್ದಕ್ಕಿದ್ದಂತೆ ಮಂಗಳವಾರ ಮಧ್ಯಾಹ್ನ 1.30ರಿಂದ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿ ಮಾಡುವುದಾಗಿ ಬೋರ್ಡ್ ಹಾಕಿದ್ದರು‌. ರೈತರು ಇದ್ದಬದ್ದ ಕೆಲಸ ಬಿಟ್ಟು ಏಕಾಏಕಿ ಓಡಿ ಬಂದರು. ಅಂದು 6 ಗಂಟೆಗೆ ಖರೀದಿ ಕೇಂದ್ರದ ಬಾಗಿಲು ಮುಚ್ಚಲಾಯಿತು. ಉಳಿದ ಕೆಲವರು ಬುಧವಾರ ಬಾಗಿಲು ತೆರೆದ ಕೂಡಲೇ ಹೆಸರು ನೋಂದಣಿ ಮಾಡಿಸುವ ಉದ್ದೇಶದಿಂದ ರಾತ್ರಿಯಿಡೀ ಇಲ್ಲೇ ಉಳಿದರು.

ಗುಂಪು ಚದುರಿಸಿದ ಪೊಲೀಸರು: ‘ರಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿಗಾಗಿ ಮಂಗಳವಾರ ರಾತ್ರಿ 10.30ರಿಂದ ಬೆಳಿಗ್ಗೆಯವರೆಗೂ ನಾವು ಇಲ್ಲೇ ಕಾಯುತ್ತಿದ್ದೆವು‌. 10ಕ್ಕೆ ಬಂದ ಅಧಿಕಾರಿ ಒಳಗೆ ಹೋಗಿ ಬಾಗಿಲು ಮುಚ್ಚಿದರು. ಸರ್ವರ್ ಸಮಸ್ಯೆ, ಇಂಟರ್‌ನೆಟ್ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆ ಹೇಳುತ್ತಿದ್ದರು. ಇದ್ದಕ್ಕಿದ್ದಂತೆ 11 ಗಂಟೆಯಿಂದ ಹೆಸರು ನೋಂದಣಿ  ಆರಂಭಿಸಿದರು. ಬೇಗ ಮುಗಿಸುವ ತವಕದಲ್ಲಿ ರೈತರು ಸ್ವಲ್ಪ ತಳ್ಳಾಟ ನಡೆಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಲಾಠಿ ಬೀಸಿದರು. ಮಹಿಳೆಯರೆಂದೂ ಗಮನಿಸದೇ ಅವಾಚ್ಯ ಶಬ್ದಗಳಿಂದ ಬೈಯ್ದು ಎಳೆದಾಡಿದರು. ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಕೆಲವು ದಲ್ಲಾಳಿಗಳ ಬಳಿ ಹಣ ಪಡೆದು ಅವರ ಹೆಸರು ನೋಂದಣಿಗೆ ಅನುವು ಮಾಡಿಕೊಡುತ್ತಿದ್ದರು‌, ಇದರಿಂದ ಕೋಪಗೊಂಡ ರೈತರೆಲ್ಲ ಒಟ್ಟಾಗಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರು ಮತ್ತೆ ನಮಗೆಲ್ಲ ಜೋರಾಗಿ ಹೊಡೆದು ಸಂಜೆ 4ಕ್ಕೆ ಬಾಗಿಲು ಮುಚ್ಚಿಸಿದರು’ ಎಂದು ಆರೋಪಿಸಿದ ರೈತರು, ‘ದಲ್ಲಾಳಿಗಳಿಂದ ಹಣ ಪಡೆದ ಪೊಲೀಸರನ್ನು ವಜಾಗೊಳಿಸಿ’ ಎಂದು
ಒತ್ತಾಯಿಸಿದರು.

ಹಣ ಕೊಟ್ಟವರ ಹೆಸರು ಮಾತ್ರ ನೋಂದಣಿಯಾಗಿದೆ

ನಾವು ಮೊದಲ ಸಾಲಿನಲ್ಲಿ ನಿಂತಿದ್ದೆವು. ಮನೆಯಲ್ಲಿ ಬೇಗ ಕೆಲಸ ಮುಗಿಸಿ, ಹೆಸರು ನೋಂದಣಿಗೆಂದು ಹೊಸದುರ್ಗಕ್ಕೆ ಬಂದೆವು. ಇಲ್ಲಿ ಹಣ ಕೊಟ್ಟವರ ಹೆಸರು ಮಾತ್ರ ನೋಂದಣಿಯಾಗಿದೆ. ಇನ್ನೇನು ನನ್ನದೇ ಸರದಿ ಎನ್ನುವಷ್ಟರಲ್ಲಿ ಪೊಲೀಸರು ಹೊರಗೆ ಎಳೆದರು. ಹೀಗಾದರೆ ನಮ್ಮ ಗತಿಯೇನು. ನಾಳೆಯಾದರೂ ರಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿಯಾಗಬಹುದೇ ಎಂದು ಕಾಯುತ್ತಿದ್ದೇವೆ.

– ಲಕ್ಷ್ಮಮ್ಮ, ರೈತ ಮಹಿಳೆ

ತಳ್ಳಾಟ ನಿಯಂತ್ರಿಸಿ ಸಾಲಿನಲ್ಲಿ ನಿಲ್ಲಿಸಿದೆವು

ಬುಧವಾರ ರಾಗಿ ಖರೀದಿ ಕೇಂದ್ರದ ಬಳಿ ಒಂದು ಸಾವಿರಕ್ಕೂ ಅಧಿಕ ಜನ ರೈತರು ಸೇರಿದ್ದರು. ನೂಕು ನುಗ್ಗಲು, ತಳ್ಳಾಟ ಜೋರಾಗಿತ್ತು. ರಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಬಂದವರು ಇಲ್ಲಿಯ ಪರಿಸ್ಥಿತಿ ನೋಡಿ, ನೋಂದಣಿ ಮಾಡುವದಕ್ಕೆ ಹಿಂದೇಟು ಹಾಕುತ್ತಿದ್ದರು. ಆಗ ಖುದ್ದು ಹೋಗಿ ಅಲ್ಲಿಯ ರೈತರನ್ನು ಒಂದೆಡೆ ಸಾಲಿನಲ್ಲಿ ನಿಲ್ಲಿಸಿ, ಹೆಸರು ನೋಂದಣಿ ಅವಕಾಶ ಕಲ್ಪಿಸಿ, ಪರಿಸ್ಥಿತಿ ತಿಳಿಗೊಳಿಸಲಾಗಿದೆ.

– ಫೈಜುಲ್ಲಾ, ಪೊಲೀಸ್ ಇನ್‌ಸ್ಪೆಕ್ಟರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು