ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ದಾಳಿಂಬೆ ಬೆಳೆದು ನಗೆ ಬೀರಿದ ಪುಟ್ಟಕ್ಕ

Last Updated 2 ಫೆಬ್ರುವರಿ 2021, 2:13 IST
ಅಕ್ಷರ ಗಾತ್ರ

ಚಳ್ಳಕೆರೆ: ಬರಡು ಭೂಮಿಯಲ್ಲಿ ಕೊಳವೆಬಾವಿ ಕೊರೆಯಿಸಿ ಲಭ್ಯವಾದ ಅತ್ಯಲ್ಪ ನೀರಿಗೆ ಡ್ರಿಪ್ ಅಳಡಿಸಿಕೊಂಡು ದಾಳಿಂಬೆ ಹಾಗೂ ಟೊಮೊಟೊ ಬೆಳೆದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಮಠದಸಿದ್ದಯ್ಯರ ಪುಟ್ಟಕ್ಕ.

2 ಎಕರೆ ಶೇಂಗಾ, 2 ಎಕರೆ ಈರುಳ್ಳಿ ಹಾಗೂ 1 ಎಕರೆ ಟೊಮೊಟೊ ಬೆಳೆಯನ್ನು ಪ್ರಯೋಗಿಕವಾಗಿ ಬೆಳೆದು ಕೈ ಸುಟ್ಟುಕೊಂಡಿದ್ದ ಪುಟ್ಟಕ್ಕ ಧೃತಿಗೆಡದೆ ಹಣ್ಣಿನ ಬೆಳೆಯತ್ತ ಮುಖಮಾಡಿದ್ದಾರೆ. ಸಹೋದರ ಅಶೋಕ ಅವರ ಸಹಕಾರ ಮತ್ತು ರೈತ ರಾಜಣ್ಣ ಗುರುಕೃಪ ಅವರ ಮಾಗದರ್ಶನದಲ್ಲಿ ಎರಡು ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆದು ಮೊದಲ ಬಾರಿಗೇ ₹ 5 ಲಕ್ಷದಿಂದ ₹ 6 ಲಕ್ಷ ಆದಾಯ ಪಡೆದಿದ್ದರು.

ಹಣ್ಣಿನ ಬೆಳೆಯಿಂದ ಬಂದ ಉತ್ತಮ ಆದಾಯದಿಂದ ಉತ್ಸುಕರಾದ ಪುಟ್ಟಕ್ಕ ಮತ್ತು ಅಶೋಕ ಸ್ಥಳೀಯವಾಗಿ ದೊರೆತ ಬಗವ ತಳಿಯ ಸಸಿಗಳನ್ನು ತಂದು ನಾಟಿ ಮಾಡಿ ಜೈವಿಕ ಹಾಗೂ ಕೊಟ್ಟಿಗೆ ಗೊಬ್ಬರ ಹಾಕಿ ಹಣ್ಣಿನ ಬೆಳೆಯ ಪ್ರದೇಶವನ್ನು 3ರಿಂದ 4 ಎಕರೆಗೆ ವಿಸ್ತರಿಸಿಕೊಂಡಿದ್ದಾರೆ.

‘ಈಗಾಗಲೇ ಕೆ.ಜಿ.ಗೆ ₹ 140ರಂತೆ 6 ಟನ್ ಬೆಳೆಯನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಇದರಿಂದ ₹ 9 ಲಕ್ಷ ಆದಾಯ ಬಂದಿದೆ. ಇನ್ನು 7ರಿಂದ 8 ಟನ್ ಬೆಳೆ ಬರುತ್ತದೆ. ಈ ಬಾರಿ ದಾಳಿಂಬೆಯಿಂದ ₹ 15 ಲಕ್ಷಕ್ಕೂ ಹೆಚ್ಚು ಆದಾಯ ಬರಲಿದೆ’ ಎನ್ನುತ್ತಾರೆ ಪುಟ್ಟಕ್ಕ.

ಕಡಿಮೆ ನೀರಿನಲ್ಲಿ ಉತ್ತಮ ಬೆಳೆ

‘ಈ ಭಾಗದಲ್ಲಿ ಹೆಚ್ಚು ಉಷ್ಣಾಂಶವಿರುವ ಕಾರಣ ಬಯಲು ಸೀಮೆ ಪ್ರದೇಶ ದಾಳಿಂಬೆಗೆ ಸೂಕ್ತವಾಗಿದೆ. ಜೈವಿಕ, ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಹಾಕುವುದರಿಂದ ಬೆಳೆಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ದುಂಡಾಣು ಅಂಗಮಾರಿ ರೋಗ ನಿಯಂತ್ರಣಕ್ಕೆ ಬರುತ್ತದೆ. ನೀರಿಗೆ ಡ್ರಿಪ್ ಅಳವಡಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ದಾಳಿಂಬೆ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತದೆ. ಒಮ್ಮೆ ನಾಟಿ ಮಾಡಿದ ಮೇಲೆ 5- 6 ವರ್ಷ ನಿರಂತರವಾಗಿ ಉತ್ತಮವಾಗಿ ಫಸಲು ಪಡೆಯಬಹುದು’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT