ಬುಧವಾರ, ಅಕ್ಟೋಬರ್ 20, 2021
25 °C
ರೋಗ ಹರಡದಂತೆ ಎಚ್ಚರ ವಹಿಸಿದ್ದಕ್ಕೆ ಭರಪೂರ ಇಳುವರಿ

ಹಿರಿಯೂರು: ವರುಣನ ಅವಕೃಪೆಯ ನಡುವೆಯೂ ಕೈಹಿಡಿದ ದಾಳಿಂಬೆ

ಸುವರ್ಣಾ ಬಸವರಾಜ್ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ‘ಎರಡು ವರ್ಷಗಳ ಹಿಂದೆ ಕೊಳವೆ ಬಾವಿಗಳಲ್ಲಿ 3–4 ಇಂಚಿನಷ್ಟು ಬರುತ್ತಿದ್ದ ನೀರು, ಒಂದು–ಅರ್ಧ ಇಂಚಿಗೆ ಇಳಿದಿತ್ತು. ಎಂಟು ಎಕರೆಯಲ್ಲಿದ್ದ ದಾಳಿಂಬೆ ಬೆಳೆಯನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಟ್ಯಾಂಕರ್ ಮೂಲಕ ನೀರು ಹಾಯಿಸಿದರೂ ಹಣ್ಣಿನ ಗಾತ್ರ ಕಡಿಮೆ ಆಯಿತು. ಅಂದುಕೊಂಡಷ್ಟು ಇಳುವರಿ ಬರದಿದ್ದಾಗ, ಹೇಗಪ್ಪಾ ತೋಟ ಉಳಿಸಿಕೊಳ್ಳುವುದು ಎಂಬ ಚಿಂತೆ ಕಾಡಿತ್ತು’.

ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಸಮೀಪ ವಾಣಿವಿಲಾಸಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ದಾಳಿಂಬೆ ಬೆಳೆ ಹಾಕಿರುವ ಮುನ್ನಾ (ಗರೀಬ್ ಆಲಿ) ಅವರ ಮಾತುಗಳಿವು.

‘ಒಂಬತ್ತು ವರ್ಷಗಳ ಹಿಂದೆ ಚಿತ್ರದುರ್ಗದ ದಾಳಿಂಬೆ ತಜ್ಞ ಈಶ್ವರಪ್ಪ ಹಾಗೂ ಸೋಮೇರಹಳ್ಳಿಯ ಪ್ರಗತಿಪರ ರೈತ ಎ.ಎಂ. ಅಮೃತೇಶ್ವರ್ ಮಾರ್ಗದರ್ಶನದಲ್ಲಿ ಎಂಟು ಎಕರೆಯಲ್ಲಿ 3,500 ಬಾಗ್ವಾತಳಿಯ ದಾಳಿಂಬೆ ನಾಟಿ ಮಾಡಿದ್ದೆ. ನಮ್ಮ ಜಮೀನಿನ ಮಣ್ಣು ದಾಳಿಂಬೆಗೆ ಹೇಳಿ ಮಾಡಿಸಿದಂತಿತ್ತು. ಹೀಗಾಗಿ ನಮ್ಮ ನಿರೀಕ್ಷೆ ಮೀರಿ ಇಳುವರಿ ಬರತೊಡಗಿತು. ಆದರೆ 2019ರಲ್ಲಿ ವಾಣಿ ವಿಲಾಸ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದ್ದರಿಂದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿ ಆತಂಕ ಸೃಷ್ಟಿಯಾಗಿತ್ತು. ಎರಡು ವರ್ಷಗಳಿಂದ ಭದ್ರಾ ಜಲಾಶಯದ ನೀರು ವಾಣಿವಿಲಾಸಕ್ಕೆ ಬರುತ್ತಿದ್ದು, ಒಂದು–ಅರ್ಧ ಇಂಚು ಬರುತ್ತಿದ್ದ ಕೊಳವೆಬಾವಿಗಳಲ್ಲಿ ಐದಾರು ಇಂಚು ನೀರು ಬರುತ್ತಿದೆ. ನೀರು ಹರಿಸಿದವರು ಯಾರೇ ಇರಲಿ ಅವರನ್ನು ಅಭಿನಂದಿಸುತ್ತೇನೆ’ ಎನ್ನುತ್ತಾರೆ ಮುನ್ನ.

ಆರು ವರ್ಷಗಳ ನಂತರ ಹೆಚ್ಚಿದ ಬೇಡಿಕೆ: ‘ಎರಡು ದಿನಗಳ ಹಿಂದೆ ಮೊದಲ ಕೊಯ್ಲು ಮಾಡಿದ್ದೇವೆ. ಶೇ 60ರಷ್ಟು ಹಣ್ಣನ್ನು ಕಿತ್ತಿದ್ದೇವೆ. 10 ಕೆ.ಜಿ ತೂಕದ 6,500 ಬಾಕ್ಸ್ ಹಣ್ಣು ಸಿಕ್ಕಿದೆ. ಹಣ್ಣುಗಳನ್ನು ಆರು ಗ್ರೇಡ್ ಮಾಡಿದ್ದು, ಗರಿಷ್ಠ ₹ 215, ಕನಿಷ್ಠ ₹ 130 ದರ ಸಿಕ್ಕಿದೆ. ಇಂತಹ ದರ ಆರು ವರ್ಷಗಳ ಹಿಂದೆ ಸಿಕ್ಕಿತ್ತು. ಕೊಯ್ಲು ಮುಗಿಯುವ ವೇಳೆಗೆ ದಾಳಿಂಬೆಯಿಂದ ಕನಿಷ್ಠ ₹ 1 ಕೋಟಿ ಆದಾಯ ದೊರೆಯುವ ನಿರೀಕ್ಷೆ ಇದೆ. ಗಿಡಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ 25 ವರ್ಷಗಳವರೆಗೆ ಬೆಳೆ ಪಡೆಯಬಹುದು’ ಎಂದು ಅವರು ತಿಳಿಸಿದರು.

ಎಚ್ಚರಿಕೆ ಅಗತ್ಯ: ‘ಬಹಳಷ್ಟು ರೈತರು ಬ್ಯಾಕ್ಟೀರಿಯಲ್ ಬ್ರೈಟ್, ದುಂಡಾಣು ರೋಗ, ಹೂಜಿ ನೊಣಗಳ ಹಾವಳಿಯನ್ನು ಸರಿಯಾಗಿ ನಿಯಂತ್ರಣ ಮಾಡದ ಕಾರಣಕ್ಕೆ ಬೆಳೆ ಕಳೆದುಕೊಂಡಿರುವುದುಂಟು. ದಾಳಿಂಬೆಯನ್ನು ಮಕ್ಕಳಂತೆ ಜೋಪಾನ ಮಾಡಬೇಕು.
ಆಗಾಗ ತಜ್ಞರ ಸಲಹೆ, ಮಾರ್ಗದರ್ಶನ ಪಡೆಯಬೇಕು. ರೋಗ ಕಂಡುಬಂದ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಹೀಗಾಗಿ
ನಮ್ಮಲ್ಲಿ ಮೊದಲ ವರ್ಷಕ್ಕಿಂತ 500 ಗಿಡಗಳು ಕಡಿಮೆಯಾಗಿವೆ. ನಾಟಿ ಮಾಡಿದ ಮೊದಲ ಎರಡು ವರ್ಷ ಖರ್ಚು ಹೆಚ್ಚು. ಹಣ್ಣು ದೊರೆಯಲಾರಂಭಿಸಿದ ಮೇಲೆ ಆದಾಯದ ಶೇ 10–15ರಷ್ಟು ಮಾತ್ರ ಖರ್ಚು ಬರುತ್ತದೆ. 2019ರ ವರ್ಷ ಹೊರತುಪಡಿಸಿದರೆ ದಾಳಿಂಬೆ ನಮ್ಮನ್ನು ಕೈಬಿಟ್ಟಿಲ್ಲ. ಬೇರೆ ಯಾವುದೇ ತೋಟಗಾರಿಕೆ ಬೆಳೆಗಳಿಗಿಂತ ದಾಳಿಂಬೆ ಹೆಚ್ಚು ಲಾಭದಾಯಕ ಎಂಬುದು ನನ್ನ ವೈಯಕ್ತಿಕ ಅನುಭವ’ ಎಂದು ಅವರು ಹೇಳುತ್ತಾರೆ.

ಕೃಷಿ – ತೋಟಗಾರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅಗತ್ಯ

‘ದಾಳಿಂಬೆಗೆ ಸರಾಸರಿ ಕೆ.ಜಿಗೆ ₹ 80– ₹ 90 ದರ ಸಿಕ್ಕರೂ ನಷ್ಟ ಆಗದು. ಕೊಟ್ಟಿಗೆ ಗೊಬ್ಬರ, ಜೀವಾಮೃತ ಕೊಟ್ಟಲ್ಲಿ ಹಣ್ಣುಗಳು ಇನ್ನಷ್ಟು ತಾಜಾ ಆಗಿ ಕಾಣಿಸುತ್ತವೆ. ಬೆಂಗಳೂರಿನಿಂದ ಬರುವ ಸಗಟು ವರ್ತಕರು ಚೌಕಾಸಿ ಮಾಡದೇ ಖರೀದಿಸುತ್ತಾರೆ. ಭೂಮಿ ತಾಯಿ ನಂಬಿದವರ ಕೈಬಿಡುವುದಿಲ್ಲ ಎಂಬುದಕ್ಕೆ ನಾನೇ ಉತ್ತಮ ನಿದರ್ಶನ. ಅದೃಷ್ಟದ ಬದಲು ಕೃಷಿ ಅಥವಾ ತೋಟಗಾರಿಕೆಯನ್ನು ಗಂಭೀರವಾಗಿ ತೆಗೆದುಕೊಂಡರೆ ನಷ್ಟ ಎಂಬುದು ನಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ’ ಎಂಬುದು ಮುನ್ನಾ ಅವರ ಸ್ಪಷ್ಟ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು