ಭಾನುವಾರ, ನವೆಂಬರ್ 29, 2020
24 °C
ಅಪಘಾತಗಳ ತಡೆಗೆ ಪೊಲೀಸ್ ಇಲಾಖೆಯಿಂದ ವಿನೂತನ ಪ್ರಯೋಗ

‘ಬ್ಲ್ಯಾಕ್ ಸ್ಪಾಟ್‌’ಗಳಲ್ಲಿ ಯಮನ ಭಾವಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತವನ್ನು ತಡೆಯುವ ಉದ್ದೇಶದಿಂದ ‘‘ಬ್ಲ್ಯಾಕ್ ಸ್ಪಾಟ್‌’ಗಳಲ್ಲಿ ಯಮನ ಭಾವಚಿತ್ರವಿರುವ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಗುತ್ತಿದೆ.

‘ವಾಹನ ಚಾಲಕರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಈ ಹೊಸ ಪ್ರಯೋಗ ಮಾಡಿದ್ದು, ಇದು ಜಿಲ್ಲೆಯಲ್ಲಿ ಮೊದಲನೇಯದ್ದಾಗಿದೆ’ ಎಂದು ಪಿಎಸ್‍ಐ ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ಈಗಾಗಲೇ ಹೆದ್ದಾರಿಯ ಹೆಗ್ಗೆರೆ ಗೇಟ್, ಸಾಣಿಕೆರೆ, ಖಂಡೇನಹಳ್ಳಿ ಗೊಲ್ಲರಹಟ್ಟಿ, ಗೋಪನಹಳ್ಳಿ ಗರಣಿ ಕ್ರಾಸ್, ಹೊಟ್ಟೆಪ್ಪನಹಳ್ಳಿ, ಲಕ್ಷ್ಮೀಪುರ, ರೈಲ್ವೆಗೇಟ್, ಚಳ್ಳಕೆರಮ್ಮ ದೇವಸ್ಥಾನ, ಬಳ್ಳಾರಿ ರಸ್ತೆ ನಾಯಕನಹಟ್ಟಿ ಕ್ರಾಸ್, ಬುಡ್ನಹಟ್ಟಿ, ಚಿಕ್ಕಮ್ಮನಹಳ್ಳಿ, ತಳಕು, ತಳಕು ಗರಣಿ ಕ್ರಾಸ್, ಹಿರೇಹಳ್ಳಿ, ಬುಕ್ಲಾರಹಳ್ಳಿ ಸೇರಿ 15 ಜಾಗಗಳಲ್ಲಿ ಫಲಕಗಳನ್ನು ಅಳವಡಿಸಲಾಗಿದೆ’ ಎಂದು ಹೇಳಿದರು.

‘ವರ್ಷದಲ್ಲಿ ಒಂದೇ ಸ್ಥಳದಲ್ಲಿ 10 ಅಪಘಾತಗಳು ಸಂಭವಿಸಿವೆ. ಬೆಂಗಳೂರಿನಿಂದ ಕಲಬುರ್ಗಿ, ಬೀದರ್‌, ರಾಯಚೂರು, ಸಿಂಧನೂರು, ಬಳ್ಳಾರಿ ಮುಂತಾದ ಕಡೆಗೆ ತೆರಳುವ ಬಸ್, ಕಾರು, ಲಾರಿ ವಾಹನಗಳು ಚಳ್ಳಕೆರೆಗೆ ತಲುಪುವಷ್ಟರಲ್ಲಿ ಮಧ್ಯರಾತ್ರಿಯಾಗಿರುತ್ತದೆ. ನಿದ್ರೆ ಮಂಪರಿನಿಂದ ಮತ್ತು ಚಾಲಕರ ಅಜಾಗರೂಕತೆಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ’ ಎಂದರು.

ಹೆಡ್‌ ಕಾನ್‌ಸ್ಟೆಬಲ್ ತಿಪ್ಪೇಸ್ವಾಮಿ, ‘ಮುಂದಿನ ದಿನಗಳಲ್ಲಿ ನಗರ ಪ್ರದೇಶ, ರಾಷ್ಟೀಯ ಹೆದ್ದಾರಿಯ ಬಳಿ ಇರುವ ಶಾಲಾ–ಕಾಲೇಜು, ತಿರುವು ರಸ್ತೆ, ಸೇತುವೆ, ವಿದ್ಯುತ್ ಕಂಬ, ರೈಲ್ವೆಹಳಿ ಮತ್ತು ಅಪಘಾತದ ವಲಯಗಳಲ್ಲಿ ಕೆಂಪು ಬಣ್ಣದ ರೇಡಿಯಂ ಸ್ಟಿಕ್ಕರ್ಸ್ ಅಂಟಿಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕಾನ್‌ಸ್ಟೆಬಲ್‌ಗಳಾದ ರವಿ, ವೆಂಕಟೇಶ, ಶಿವಾನಂದ ಮಡಿವಾಳ, ಪರಶುರಾಂ, ಸಂತೋಷ, ಶ್ರೀನಿವಾಸ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು