ತುರುವನೂರು (ನಾಯಕನಹಟ್ಟಿ): ಗರ್ಭಿಣಿಯರು ಮತ್ತು ಬಾಣಂತಿಯರು ವೈದ್ಯರ ಸಲಹೆ ಮೇರೆಗೆ ನಿಯಮಿತವಾಗಿ ಗುಣಮಟ್ಟದ ಆಹಾರ ಸೇವಿಸಬೇಕು ಎಂದು ತುರುವನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದಶರಥ ಸಲಹೆ ನೀಡಿದರು.
ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನಡೆದ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು ಸಂಪ್ರದಾಯದ ನೆಪ ಹೇಳಿಕೊಂಡು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸದೇ ಒಂದೇ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿರುತ್ತಾರೆ. ಇಂತಹ ಏಕ ಆಹಾರ ಪದ್ಧತಿಯು ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರು ಎಲ್ಲ ಆಹಾರ ಪದಾರ್ಥಗಳು, ಸೊಪ್ಪು, ತರಕಾರಿ, ಮೊಟ್ಟೆ, ಮಾಂಸವನ್ನು ನಿಯಮಿತವಾಗಿ ಸೇವಿಸಬೇಕು. ನಾವು ಎಷ್ಟು ತಿನ್ನುತ್ತೇವೆ ಎನ್ನುವುದಕ್ಕಿಂತ ಯಾವ ಪ್ರಮಾಣದಲ್ಲಿ ಗುಣಮಟ್ಟದ, ಪೋಷಕಾಂಶಯುಕ್ತ ಆಹಾರ ಆಹಾರವನ್ನು ಸೇವಿಸುತ್ತೇವೆ ಎನ್ನುವುದು ಮುಖ್ಯ ಎಂದರು.
‘ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೋಗ್ಯ ರಕ್ಷಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದೆ. ಪೋಷಕಾಂಶಗಳನ್ನು ಹೊಂದಿರುವ ಆಹಾರ ಸಾಮಗ್ರಿಗಳನ್ನು ಫಲಾನುಭವಿಗಳ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಇದರ ಪ್ರಯೋಜನವನ್ನು ಪಡೆದು ಪ್ರತಿಯೊಬ್ಬರೂ ಉತ್ತಮವಾದ ಆರೋಗ್ಯವನ್ನು ಹೊಂದಬೇಕು’ ಎಂದು ಪೋಷಣ್ ಅಭಿಯಾನ ಮಾಸಾಚರಣೆಯ ಜಿಲ್ಲಾ ಸಂಯೋಜಕ ಪ್ರತಾಪ್‌ಸಿಂಗ್ ಕಿವಿಮಾತು ಹೇಳಿದರು.
‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರನ್ನು ಒಂದೆಡೆ ಸೇರಿಸಿ ಅವರಿಗೆ ಆರೋಗ್ಯ, ನೈರ್ಮಲ್ಯ, ಬಾಲ್ಯವಿವಾಹದ ದುಷ್ಪರಿಣಾಮಗಳು, ಪೋಷಣ್ ಅಭಿಯಾನದ ಮಹತ್ವವನ್ನು ತಿಳಿಸಿಕೊಡುವ ಕಾರ್ಯವಾಗಬೇಕಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಡಿ.ಆರ್. ಮಂಜುನಾಥ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್.ತಿಪ್ಪೇಸ್ವಾಮಿ, ಹಳೇಮನೆ ನಾಗರಾಜ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲ್ಲೂಕು ಸಂಯೋಜಕ ರಂಗಸ್ವಾಮಿ, ಅಂಗನವಾಡಿ ಮೇಲ್ವಿಚಾರಕಿ ಬಿ. ದೇವಿಕಾ, ಸಿಬ್ಬಂದಿ ರೇಣುಕಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.