ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ್‌ಸೆಟ್‌ ವಿದ್ಯುತ್‌ ಕಡಿತ; ರೈತ ಆತ್ಮಹತ್ಯೆ

ಶವ ಇಟ್ಟುಕೊಂಡು ರೈತರ ಧರಣಿ
Last Updated 6 ಮಾರ್ಚ್ 2018, 10:29 IST
ಅಕ್ಷರ ಗಾತ್ರ

ಬೈಲಹೊಂಗಲ: ತಾಲ್ಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ದಡದಲ್ಲಿರುವ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಿದ್ದರಿಂದ ಮನನೊಂದ ರೈತ ಪಾಂಡುರಂಗ ಯಲ್ಲಪ್ಪ ಸಿದ್ರಾಮನ್ನವರ (35) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ಪಾಂಡುರಂತ ತನ್ನ 12 ಎಕರೆ ಜಮೀನಿನಲ್ಲಿ ಪಂಪ್‌ಸೆಟ್‌ ಅಳವಡಿಸಿಕೊಂಡಿದ್ದರು. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪುರಸಭೆಯವರು ನದಿ ತೀರದ ರೈತರ ಜಮೀನುಗಳಿಗೆ ಭೇಟಿ ನೀಡಿ ಪಂಪ್‌ಸೆಟ್‌ಗೆ ಅಳವಡಿಸಿದ್ದ ವಿದ್ಯುತ್ ಕಡಿತಗೊಳಿಸುತ್ತಿದ್ದರು. ಆ ಸಂದರ್ಭದಲ್ಲಿ ಸ್ಥಳದಲ್ಲಿಯೇ ಹಾಜರಿದ್ದ ಪಾಂಡುರಂಗ ವಿದ್ಯುತ್‌ ಕಡಿತಗೊಳಿಸದಂತೆ ವಿನಂತಿಸಿಕೊಂಡರು. ಆದರೆ, ಅಧಿಕಾರಿಗಳು ಮಾತು ಕೇಳಲಿಲ್ಲ. ಇದರಿಂದ ನೊಂದ ಪಾಂಡುರಂಗ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದರು. ಮೃತರಿಗೆ ತಂದೆ, ತಾಯಿ, ನಾಲ್ವರು ಸಹೋದರರು ಇದ್ದಾರೆ.

ಸಾವಿನ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮದ ರೈತರು ರೈತನ ಶವವನ್ನು ಟ್ರ್ಯಾಕ್ಟರ್‌ನಲ್ಲಿಟ್ಟುಕೊಂಡು ಬೈಲಹೊಂಗಲ ಪುರಸಭೆಗೆ ಸಾಗಿಸಿದರು. ಪುರಸಭೆಯ ದ್ವಾರದಲ್ಲಿ ಶವವಿಟ್ಟು, ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ರಸ್ತೆ ಅಕ್ಕಪಕ್ಕದ ಅಂಗಡಿಗಳು ಕೆಲಕಾಲ ಬಂದ್ ಆಗಿದ್ದವು. ವಿನಾಕಾರಣ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಕಡಿತಗೊಳಿಸಿದ ಪುರಸಭೆಯವರಿಗೆ, ಹೆಸ್ಕಾಂನವರಿಗೆ ದಿಕ್ಕಾರ ಕೂಗಿದರು.

ರೈತರ ಪ್ರತಿಭಟನೆ ಕಾವೇರುತ್ತಿದ್ದಂತೆ ಸ್ಥಳಕ್ಕೆ ಬಂದ ಡಿವೈಎಸ್ಪಿ ಜೆ.ಎಂ.ಕರುಣಾಕರಶಟ್ಟಿ, ಸಿಪಿಐ ಸಂಗನಗೌಡ ಧರಣಿ ನಿರತ ರೈತರ ಮನ ಒಲಿಸಲು ಯತ್ನಿಸಿದರು. ಅಧಿಕಾರಿಗಳ ಮಾತಿಗೆ ಕಿವಿಗೊಡದ ರೈತರು ತಮ್ಮ ಆಕ್ರೋಶ ಹೊರ ಹಾಕಿದರು. ಈ ವೇಳೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳಕ್ಕೆ ಬಂದ ತಹಶೀಲ್ದಾರ್‌ ಪ್ರಕಾಶ ಗಾಯಕವಾಡ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ ಅವರಿಗೆ ರೈತರು ಘೇರಾವ ಹಾಕಿ ಘೋಷಣೆ ಕೂಗಿದರು.

ಪುರಸಭೆಯವರು, ಹೆಸ್ಕಾಂನವರು ರೈತರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡು ರೈತರ ಜೀವ ಹಾನಿಗೆ ಕಾರಣಿಕರ್ತರಾಗುತ್ತಿದ್ದಾರೆ ಎಂದು ಆಪಾದಿಸಿದರು. ರೈತ ಮುಖಂಡ ಮುದಕಪ್ಪ ತೋಟಗಿ, ಪ್ರಕಾಶ ಅಡಕಿ, ಯಲ್ಲಪ್ಪ ಏಣಗಿ, ಭೀಮಪ್ಪ ಕರಿದೇಮನ್ನವರ, ಮಹಾದೇವ ಅಸುಂಡಿ, ಸಿದ್ದಪ್ಪ ಉಜ್ಜನಕೊಪ್ಪ, ಸೇರಿದಂತೆ ನಯಾನಗರ, ಬೈಲಹೊಂಗಲ ರೈತರು ಇದ್ದರು.

ಆಸ್ಪತ್ರೆಗೆ ಸಾಗಿಸಿದ ಶವ: ಪಂಪ್‌ಸೆಟ್ ವಿದ್ಯುತ್ ಕಡಿತಗೊಳಿಸುವುದಿಲ್ಲವೆಂದು ಪುರಸಭೆಯ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಅಧ್ಯಕ್ಷ ರಾಜಶೇಖರ ಮೂಗಿ ಲಿಖಿತವಾಗಿ ಬರೆದುಕೊಟ್ಟ ನಂತರ ಶವವನ್ನು ಆಸ್ಪತ್ರೆಗೆ ಸಾಗಿಸಲು ರೈತರು ಅನುವು ಮಾಡಿಕೊಟ್ಟರು.  ಮರಣೋತ್ತರ ಪರೀಕ್ಷೆ ಕೈಗೊಳ್ಳಲು ಆಸ್ಪತ್ರೆಗೆ ಶವವನ್ನು ಸಾಗಿಸಲಾಯಿತು. ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ ಎಂದು ಮೃತರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

‘ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಪರಿಹಾರವನ್ನು ಕೊಡಿಸಲು ಪ್ರಯತ್ನಿಸಲಾಗುವುದು. ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇದ್ದಾಗ ಜಮೀನುಗಳಿಗೆ ಹರಿಸಲು ತೊಂದರೆ ಇಲ್ಲ. ಆದರೆ, ಬೇಸಿಗೆ ಸಮೀಪಿಸುತ್ತಿರುವುದರಿಂದ ಜನರಿಗೆ ಕುಡಿಯುವ ನೀರು ಪೂರೈಸಲು ಶೇಖರಿಸಿಟ್ಟುಕೊಳ್ಳಬೇಕಾಗಿದೆ. ಅದಕ್ಕಾಗಿ ವಿದ್ಯುತ್ ಕಡಿತಗೊಳಿಸಲಾಗಿತ್ತು ವಿನಃ ರೈತರಿಗೆ ತೊಂದರೆ ಕೊಡುವ ಉದ್ದೇಶದಿಂದ ಅಲ್ಲ’ ಎಂದು ತಹಶೀಲ್ದಾರ್‌ ತಹಶೀಲ್ದಾರ್‌ ಪ್ರಕಾಶ ಗಾಯಕವಾಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT