ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ | ಮಗನಿಗೆ ಕಂಕಣಭಾಗ್ಯ ಕೋರಲು ಹೋಗಿದ್ದ ಪೋಷಕರು ಶವವಾದರು

ತಂದೆ – ತಾಯಿ ಸಾವು, ಕಂಗಾಲಾದ ಮಕ್ಕಳು
Last Updated 17 ಅಕ್ಟೋಬರ್ 2019, 7:05 IST
ಅಕ್ಷರ ಗಾತ್ರ

ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ಹಿರಿಯ ಪುತ್ರನಿಗೆ ಕಂಕಣ ಭಾಗ್ಯ ಕರುಣಿಸುವಂತೆ ಶ್ರೀರಾಮನಲ್ಲಿ ಮೊರೆಯಿಟ್ಟ ತಂದೆ– ತಾಯಿ ಶವವಾಗಿ ಮನೆಗೆ ಬಂದಿದ್ದಾರೆ. ಕಂಪನಿ ನೀಡಿದ ಬೋನಸ್‌ ಹಣ ಕೊಟ್ಟು ಪೋಷಕರನ್ನು ತೀರ್ಥಯಾತ್ರೆಗೆ ಕಳುಹಿಸಿದ್ದ ಕಿರಿಯ ಪುತ್ರನಿಗೆ ಪಾಪಪ್ರಜ್ಞೆ ಕಾಡತೊಡಗಿದೆ.

ಚಳ್ಳಕೆರೆಯ ತ್ಯಾಗರಾಜನಗರದಕುಂದಂ ರಮೇಶ್ (56) ಮತ್ತು ಅಮೃತವಾಣಿ (48) ಅವರದು ಪುಟ್ಟ ಸಂಸಾರ. ಇಬ್ಬರು ಪುತ್ರರು ವ್ಯಾಸಂಗ ಮುಗಿಸಿ ಕೆಲಸ ಮಾಡುತ್ತಿದ್ದಾರೆ. ಹಿರಿಯ ಪುತ್ರ ಸಂತೋಷ ಅವರಿಗೆ ಕಂಕಣಭಾಗ್ಯ ಕರುಣಿಸುವಂತೆ ಪ್ರಾರ್ಥಿಸಲು ದಂಪತಿ ತೆಲಂಗಾಣದ ಭದ್ರಾಚಲಂನ ಶ್ರೀರಾಮ ದೇಗುಲಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿ ಶವವಾಗಿ ಮರಳಿದ್ದು, ಪುತ್ರರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಕುಂದಂ ರಮೇಶ್‌ ಅವರದು ತಾಲ್ಲೂಕಿನಜುಂಜರಗುಂಟೆ ಗ್ರಾಮ. ಬಡನತದ ಬೇಗೆಯಲ್ಲಿ ಬೆಂದಿದ್ದ ಅವರು ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ದಶಕದ ಹಿಂದೆ ಚಳ್ಳಕೆರೆಯಲ್ಲಿ ವಾಸವಾಗಿದ್ದಾರೆ. ಪತಿ, ಪತ್ನಿ ಇಬ್ಬರೂ ಬೀದಿ ಸುತ್ತಿ ಬಟ್ಟೆ ವ್ಯಾ‍ಪಾರ ಮಾಡಿ ಜೀವನ ಸುಭದ್ರವಾಗಿಸಿಕೊಂಡಿದ್ದರು. ಇತ್ತೀಚೆಗೆ ಕೆಲ ವರ್ಷಗಳಿಂದ ಆರಂಭಿಸಿದ್ದ ಕಿರಾಣಿ ಅಂಗಡಿ ಅವರ ಕೈಹಿಡಿದಿತ್ತು. ಇಬ್ಬರು ಮಕ್ಕಳನ್ನು ಉತ್ತಮ ಉದ್ಯೋಗಕ್ಕೆ ಕಳುಹಿಸುವ ಮಹದಾಸೆ ಅಮೃತವಾಣಿ ಅವರಲ್ಲಿತ್ತು. ಅವರ ಕನಸುಗಳೆಲ್ಲ ಈಗ ಕಮರಿ ಹೋಗಿವೆ.

ಶ್ರಮದ ಬದುಕಿನಲ್ಲಿ ವಿಶ್ವಾಸ ಇಟ್ಟುಕೊಂಡಿದ್ದ ಅಮೃತವಾಣಿ ಅವರಿಗೆ ಪ್ರವಾಸ ಇಷ್ಟವಿರಲಿಲ್ಲ. ಸಹೋದರರ ಒತ್ತಾಸೆಯ ಮೇರೆಗೆ ಒಲ್ಲದ ಮನಸಿನಿಂದಲೇ ಭದ್ರಾಚಲಂಗೆ ತೆರಳಲು ಒಪ್ಪಿಕೊಂಡಿದ್ದರು. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಿರಿಯ ಪುತ್ರ ರಾಕೇಶ್‌ ತನ್ನ ಬೋನಸ್‌ ಹಣವನ್ನು ತಾಯಿಯ ಕೈಗಿಟ್ಟು ತೀರ್ಥ ಯಾತ್ರೆಗೆ ಹೋಗುವಂತೆ ಸೂಚಿಸಿದ್ದ. ಮದುವೆಗೆ ಸಂಬಂಧಿಸಿದ ಪ್ರಾರ್ಥನೆ ಭದ್ರಾಚಲಂನಲ್ಲಿ ಈಡೇರುತ್ತದೆ ಎಂಬ ನಂಬಿಕೆಯಿಂದಲೇ ಅಮೃತವಾಣಿ ಟಿಟಿ ಏರಿದ್ದರು.

ಪ್ರವಾಸಕ್ಕೆ ಹೊರಡುವ ಮುನ್ನವೇ ಟೆಂಪೊ ಟ್ರಾವಲರ್‌ ಮೂರು ಬಾರಿ ಕೆಟ್ಟು ನಿಂತಿತ್ತು. ಚಾಲಕ ಈ ವಾಹನವನ್ನು ಗ್ಯಾರೇಜಿಗೆ ಕೊಂಡೊಯ್ದು ದುರಸ್ತಿ ಮಾಡಿಸಿದ್ದರು. ಇದು ಅಮೃತವಾಣಿ ಅವರನ್ನು ಇನ್ನಷ್ಟು ಭಯಗೊಳಿಸಿತ್ತು. ತಾಯಿ ಕೈಗೆ ಬೋನಸ್‌ ಹಣವಿಟ್ಟು ರಾಕೇಶ್‌ ಬೆಂಗಳೂರಿಗೆ ತೆರಳಿದ್ದರು. ಮೂರು ದಿನಗಳ ಬಳಿಕ ಪೋಷಕರಿಬ್ಬರನ್ನು ಕಳೆದುಕೊಂಡಿದ್ದು ಕಿರಿಯ ಪುತ್ರನ ಮನಸನ್ನು ಘಾಸಿಗೊಳಿಸಿದೆ.

ಆಂಧ್ರದಲ್ಲಿ ಅಪಘಾತಕ್ಕೀಡಾದ ವಾಹನ
ಆಂಧ್ರದಲ್ಲಿ ಅಪಘಾತಕ್ಕೀಡಾದ ವಾಹನ

ತಾಯಿ–ಮಗಳು ಸಾವು:ಗಾಂಧಿನಗರದ ಕಿರಾಣಿ ಅಂಗಡಿ ಮಾಲೀಕ ಚಲಪತಿ ಅವರ ಪತ್ನಿ ಗಾಯತ್ರಮ್ಮ ಹಾಗೂ ಅವರ ಪುತ್ರಿ ಶ್ವೇತಾ ಇಬ್ಬರು ಮೃತಪಟ್ಟಿದ್ದಾರೆ. ತಾಯಿ ಹಾಗೂ ಸಹೋದರಿಯನ್ನು ಕಳೆದುಕೊಂಡಿರುವ ಹರೀಶ್‌ ಅಕ್ಷರಶಃ ಕುಸಿದು ಹೋಗಿದ್ದಾರೆ.

ಶ್ವೇತಾ ಅವರು ಎಂ.ಎಸ್ಸಿ ಪದವೀಧರೆ. ಬಿ.ಇಡಿ ಶಿಕ್ಷಣ ಪಡೆದಿರುವ ಪುತ್ರಿಯ ವಿವಾಹಕ್ಕೆ ಕುಟುಂಬ ಸಜ್ಜಾಗಿತ್ತು. ಈಚೆಗೆ ಇವರಿಗೆ ವಿವಾಹ ನಿಶ್ಚಿತಾರ್ಥವೂ ಆಗಿತ್ತು. ಪುತ್ರಿಯ ವಿವಾಹಕ್ಕೆ ಚಲಪತಿ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಪಘಾತದಲ್ಲಿ ತಾಯಿ–ಮಗಳು ಇಬ್ಬರು ಮೃತಪಟ್ಟಿದ್ದರಿಂದ ಚಲಪತಿ ಅವರಿಗೆ ಬರಸಿಡಿಲು ಬಡಿದಂತೆ ಆಗಿದೆ.

ಲಾರಿ ಹಿಂದಿಕ್ಕುವಾಗ ದುರಂತ:ವ್ಯಾಪಾರಸ್ಥರೇ ಸೇರಿಕೊಂಡು ಐದು ದಿನದ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಒಟ್ಟು 26 ಜನ ಪ್ರವಾಸಕ್ಕೆ ತೆರಳಿದ್ದರು. ಬಹುತೇಕರು ಕುಟುಂಬ ಸಮೇತ ಪ್ರಯಾಣ ಬೆಳೆಸಿದ್ದರು. ಅ.12ರಂದು ಸಂಜೆ 5ಕ್ಕೆ ಹೊರಡಲು ಸಿದ್ಧತೆ ಮಾಡಿಕೊಂಡಿದ್ದರು. ಚಿತ್ರಯ್ಯನಹಟ್ಟಿಯ ಎರಡು ಟಿಟಿಗಳನ್ನು ಬಾಡಿಗೆ ಪಡೆದುಕೊಂಡಿದ್ದರು.

ಭದ್ರಾಚಲಂ ಕ್ಷೇತ್ರದ ದರ್ಶನ ಪಡೆದ ಯಾತ್ರಿಕರು ಆಂಧ್ರಪ್ರದೇಶದ ಮಾರೆಡುಮಿಲ್ಲಿ ಪ್ರವಾಸಿ ತಾಣವನ್ನು ವೀಕ್ಷಿಸಿ ಚಿಂಟೂರು ಕಡೆಗೆ ಪ್ರವಾಸ ಬೆಳೆಸಿದ್ದರು. ಪೂರ್ವಗೋದಾವರಿ ಜಿಲ್ಲೆಯ ವಾಲ್ಮೀಕಿ ಕೊಂಡ ಘಾಟ್‌ನಲ್ಲಿ ಎರಡು ಟಿಟಿಗಳು ಹಿಂದೆ ಮುಂದೆ ಸಾಗುತ್ತಿದ್ದವು. ಇವುಗಳ ಮುಂದೆ ಲಾರಿಯೊಂದು ಚಲಿಸುತ್ತಿತ್ತು. ಲಾರಿಯನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಟಿಟಿ 200 ಅಡಿ ಆಳದ ಕಂದಕಕ್ಕೆ ಉರುಳಿತು.

ಅಪಘಾತಕ್ಕೆ ಈಡಾದ ಟೆಂಪೊದಲ್ಲಿ ಪುಟ್ಟ ಮಗು ಜ್ಞಾನ ಸೇರಿ 14 ಜನ ಇದ್ದರು. ಇವರಲ್ಲಿ 8 ಜನ ಮೃತಪಟ್ಟಿದ್ದಾರೆ. ಚಾಲಕ ಸೇರಿ ಐದು ಜನ ಆಂಧ್ರಪ್ರದೇಶದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗುವಿಗೆ ಮಾತ್ರ ಯಾವುದೇ ಗಾಯಗಳಾಗಿಲ್ಲ. ಹಸುಗೂಸು ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ಮಗು ಜ್ಞಾನಶ್ರೀ
ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ಮಗು ಜ್ಞಾನಶ್ರೀ

ಬೆಕ್ಕು ನೋಡಿ ಬೆಚ್ಚಿದ್ದರು:ಚಳ್ಳಕೆರೆಯ ತ್ಯಾಗರಾಜ ನಗರದಿಂದ ಶನಿವಾರ ಸಂಜೆ ಟೆಂಪೊ ಟ್ರಾವೆಲರ್‌ ಹೊರಡುವಾಗ ಕಾಕತಾಳೀಯವಾಗಿ ಎದುರಾದ ಬೆಕ್ಕು ಕಂಡು ಅಮೃತವಾಣಿ ಬೆಚ್ಚಿದ್ದರು. ಅಪಶಕುನವೆಂದು ಭಾವಿಸಿ ವಾಹನವನ್ನು ಮುಂದಕ್ಕೆ ಕೊಂಡೊಯ್ಯಲು ಅವರು ಅವಕಾಶ ಕೊಟ್ಟಿರಲಿಲ್ಲ.

ಹೀಗಾಗಿ, ವಾಹನ ಮರಳಿ ಮನೆಗೆ ಬಂದಿತ್ತು. ತಿಂಡಿ ತಿಂದು ಅರ್ಧ ಗಂಟೆ ಕಾಲ ಕಳೆದ ಬಳಿಕ ಪ್ರಯಾಣ ಆರಂಭಿಸಿದ್ದರು. ಇದನ್ನು ನೆನೆದು ಸಂಬಂಧಿಕರು ಕಣ್ಣೀರುಡುತ್ತಿದ್ದಾರೆ.

ತಬ್ಬಲಿಯಾದ ಮಗು:ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಎರಡು ವರ್ಷದ ಮಗು ಜ್ಞಾನ ತಬ್ಬಲಿಯಾಗಿದೆ. ಅಪಘಾತಕ್ಕೀಡಾದ ವಾಹನದಲ್ಲಿ ತಾಯಿ ಜೊತೆಗಿದ್ದ ಜ್ಞಾನ ಆರೋಗ್ಯವಾಗಿದೆ. ತಾಯಿ ಶ್ವೇತಾ ಬುಧವಾರ ಮೃತಪಟ್ಟಿದ್ದಾರೆ.

ವಿಠ್ಠಲನಗರದ ಶ್ರೀನಿವಾಸಲು ಅವರ ಪುತ್ರಿ ಶ್ವೇತಾ (26) ಎಂ.ಕಾಂ ಪದವೀಧರೆ. ಮೂರು ವರ್ಷಗಳ ಹಿಂದೆ ಪಾವಗಡದ ಯುವಕನನ್ನು ವರಿಸಿದ್ದರು. ದಂಪತಿಗೆ ಜ್ಞಾನ ಎಂಬ ಪುತ್ರಿ ಜನಿಸಿದ್ದಳು. ಕೌಂಟುಂಬಿಕ ಕಲಹದಿಂದ ಪತಿ–ಪತ್ನಿ ದೂರವಾಗಿದ್ದರು. ಏಳು ತಿಂಗಳಿಂದ ಶ್ವೇತಾ ತವರು ಮನೆ ಸೇರಿದ್ದರು. ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಸಾವಿನ ಸಂಖ್ಯೆ 8ಕ್ಕೆ ಏರಿಕೆ:ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 8ಕ್ಕೆ ಏರಿದೆ. ಗಂಭೀರವಾಗಿ ಗಾಯಗೊಂಡಿದ್ದ ಶ್ವೇತಾ (26) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡ ಉಳಿದ ಐವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಅಪಘಾತ ಸಂಭವಿಸಿದ ಸ್ಥಳ ದಟ್ಟಾರಣ್ಯದಿಂದ ಕೂಡಿದ್ದು, ಈಚೆಗೆ ಸುರಿದ ಧಾರಾಕಾರ ಮಳೆಗೆ ರಸ್ತೆ ಸಂಪೂರ್ಣ ಹಾಳಾಗಿತ್ತು. ಕಿರಿದಾದ ರಸ್ತೆಯಲ್ಲಿ ವಾಹನವು ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿತು. ಮಂಗಳವಾರ ಬೆಳಿಗ್ಗೆ 10ಕ್ಕೆ ಅಪಘಾತ ಸಂಭವಿಸಿದರೂ, ಆಸ್ಪತ್ರೆಗೆ ಗಾಯಾಳುಗಳು ದಾಖಲಾಗುವ ಹೊತ್ತಿಗೆ ಮಧ್ಯಾಹ್ನ ಕಳೆದಿತ್ತು. ದಟ್ಟಾರಣ್ಯದಲ್ಲಿ ಮೊಬೈಲ್‌ ಫೋನ್‌ ಸಂಪರ್ಕ ಕೂಡ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT